ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ಪ್ರೊ. ಬಿ.ವಿ. ಸಾಂಬಶಿವಯ್ಯ, ಡಾ. ಎಂ. ಪ್ರಭು, ಡಾ.ವಿದ್ಯಾಶಂಕರ ಇದ್ದರು.
ಮೈಸೂರು: ಯಶಸ್ವಿ ವ್ಯಕ್ತಿಗಳನ್ನು ಕೃತಕ ಬುದ್ಧಿಮತ್ತೆ ಬದಲಾಯಿಸುವುದಿಲ್ಲ. ಎಐ ಬಳಸುವವರು ಹೆಚ್ಚು ವೇಗವಾಗಿ ಯಶಸ್ವಿಯಾಗುತ್ತಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಹೇಳಿದರು.
ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ವಿಜ್ಞಾನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಂತ್ರಜ್ಞಾನದಲ್ಲಿ ಉದ್ಯಮದ ಪ್ರಸ್ತುತತೆ: ಸೈಬರ್ ಭದ್ರತೆ, ಎಐ ಮತ್ತು ವೆಬ್ ಡೆವಲಪ್‌ಮೆಂಟ್ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆಯ ಪ್ರೋಗ್ರಾಮಿಂಗ್ ಭಾಷೆಗಳ ಕಾಲ ಮುಗಿದು ಹೋಗಿದೆ. ಪೈಥಾನ್ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಕಲಿಯುವ ಅವಶ್ಯಕತೆ. ಪ್ರಸ್ತುತ ದಿನಮಾನದಲ್ಲಿ ಪ್ರವರ್ಧಮಾನವಾಗಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(ಎಐ) ಹಾಗೂ ಸೈಬರ್ ಭದ್ರತೆಯ ವಿಷಯಗಳು ಭವಿಷ್ಯದಲ್ಲಿ ಡಿಜಿಟಲ್ ತಂತ್ರಜ್ಞಾನದ ಅವಳಿ ಸ್ತಂಭಗಳಂತೆ ರೂಪುಗೊಳ್ಳುತ್ತವೆ ಎಂದರು.
ಪ್ರತಿಯೊಂದು ಆಧುನಿಕ ಪ್ರಯತ್ನದ ಅತಿ ವೇಗವನ್ನು ಹೊಂದಿರುವ ಮೆದುಳಿನಂತೆ ತಂತ್ರಜ್ಞಾನವು ಕಾರ್ಯ ನಿರ್ವಹಿಸುತ್ತದೆ. ಆದರೆ ಅದು ಮಾನವನ ಅಂತಃಪ್ರಜ್ಞೆಯ ಜತೆಯಲ್ಲೇ ಸಾಗುತ್ತದೆ. ಪಾಲುದಾರಿಕೆಯಲ್ಲಿ ಉಳಿದಿದೆ ಹೊರತು ಎಂದಿಗೂ ಬದಲಿಯಾಗಿಲ್ಲ ಎಂದರು.
ಕಳೆದ ಒಂದುಎರಡು ವರ್ಷಗಳಿಂದ ಎಐ ಬಂದಿರುವುದರಿಂದ ಉದ್ಯೋಗ ಸಿಗುವುದಿಲ್ಲ ಎಂಬ ಆತಂಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿಯೂ ಕಂಡುಬರುತ್ತಿದೆ. ಆದರೆ ಎಐ ಬಗ್ಗೆ ಭಯವನ್ನು ಬಿಟ್ಟು ನಾವಿನ್ಯತೆ ಬೆಳೆಸಿಕೊಳ್ಳಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಪ್ರಾಜೆಕ್ಟ್‌ಗಳಲ್ಲಿ ಸಾಮಾನ್ಯ ಆಫೀಸ್ ಆಟೊಮೇಶನ್ ಮಾಡುವುದಕ್ಕಿಂತ ಡ್ರೋನ್ ಡೆಲಿವರಿ, ಕ್ಯಾಂಪಸ್ ಕ್ಲೀನಿಂಗ್ ರೋಬೋಟ್, ಕೃಷಿಗೆ ಸ್ಮಾರ್ಟ್ ಡ್ರೋನ್‌ಗಳಂತಹ ನವೀನ ಆಲೋಚನೆಗಳನ್ನು ರೂಪಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಸೈಬರ್ ಸುರಕ್ಷತೆಯನ್ನು ಕಲಿಯುವುದರಿಂದ ಆನ್‌ಲೈನ್ ಬೆದರಿಕೆಗಳಿಂದ ಡೇಟಾ ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಹ್ಯಾಕಿಂಗ್ ಮತ್ತು ಮಾಲ್‌ವೇರ್‌ನಂತಹ ಸೈಬರ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸದೃಢವಾದ ವೃತ್ತಿ ಅವಕಾಶಗಳನ್ನು ಸಹ ನೀಡುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಅಮೆರಿಕದ ಸಂಸ್ಥೆಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿ ಮಾರ್ಪಟ್ಟಿವೆ. ಟೆಕ್ಸಾಸ್ ಮತ್ತು ನ್ಯೂಯರ್ಕ್ ನಂತಹ ಬಹು ದೊಡ್ಡ ವಾಣಿಜ್ಯ ನಗರಗಳಲ್ಲಿ ದತ್ತಾಂಶ ಕೇಂದ್ರಗಳಿಗೆ ಬೃಹತ್ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡುತ್ತಿವೆ. ಈ ಸಂಸ್ಥೆಗಳ ಕ್ಲೌಡ್ ಉಪಕರಣಗಳು ಫಾರ್ಚೂನ್- 10 ರ ಹೆಚ್ಚಿನ ಭಾಗಕ್ಕೆ ಶಕ್ತಿ ತುಂಬುತ್ತಿವೆ ಎಂದು ಮಾಹಿತಿ ನೀಡಿದರು. ವಿಭಾಗದ ಮುಖ್ಯಸ್ಥ ಡಾ.ವಿದ್ಯಾಶಂಕರ ಇದ್ದರು.