ಮಳೆ ಇಲ್ಲದೆ ಬಿತ್ತನೆ ಕಾರ್ಯ ಕುಂಠಿತ 
ಮೈಸೂರು

ರೈತರು ಸಿರಿಧಾನ್ಯಗಳತ್ತ ಮುಖ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ಜಾಗೃತಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಸದ್ಯ ಶೇಕಡ 50ಕ್ಕೂ ಅಧಿಕ ಪ್ರಮಾಣದ ಬಿತ್ತನೆ ಕುಂಠಿತವಾಗಿದೆ
  • ಜಿಲ್ಲೆಯಲ್ಲಿ 3.76609 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇಟ್ಟುಕೊಂಡಿದ್ದರೂ ಈವರೆಗೆ 1,64.355 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ
ಮೈಸೂರು:ದೇಶದ ಹಲವು ರಾಜ್ಯಗಳಲ್ಲಿ ಆವರಿಸಿರುವ ಬರದ ಛಾಯೆ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನೂ ಕಾಡಿದ್ದು, ಬಹುತೇಕ ಕೃಷಿಯನ್ನೇ ಅವಲಂಬಿಸಿರುವ ಮೈಸೂರು ಕೂಡ ವರುಣನ ಅವಕೃಪೆಗೆ ತುತ್ತಾಗಿದೆ.
ಜಿಲ್ಲೆಯಲ್ಲಿ ಸದ್ಯ ಶೇಕಡ 50ಕ್ಕೂ ಅಧಿಕ ಪ್ರಮಾಣದ ಬಿತ್ತನೆ ಕುಂಠಿತವಾಗಿದೆ. ಹೀಗಾಗಿ ಕಡಿಮೆ ನೀರು ಆಶ್ರಯಿಸುವ ಪರ್ಯಾಯ ಬೆಳೆಗಳತ್ತ ರೈತರು ಮುಖ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ, ರೈತರಲ್ಲಿ ಬರ ನಿರ್ವಹಣೆಯ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಾ ಬಂದಿದ್ದು, ಬೆಳೆ ವಿಮೆ ನೋಂದಣಿ ಹಾಗೂ ಪರ್ಯಾಯ ಬೆಳೆ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 837.4 ಮಿ.ಮೀ ಗಳಾಗಿದ್ದು ಜು.15ರ ನಂತರ ವಾಡಿಕೆ ಮಳೆ 355.8 ಮಿ.ಮೀ ಗಳಾಗಿದೆ. ಈವರೆಗೆ ಬಿದ್ದ ಮಳೆ 203.2 ಮಿ.ಮಿ ಅಂದರೆ ಶೇಕಡ 42.8 ರಷ್ಟು ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 13ರಷ್ಟು ಅಧಿಕ ಅಂದರೆ 400 ಮಿಲಿ ಮೀಟರ್ ಮಳೆಯಾಗಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಕ್ರಮವಾಗಿ ಶೇಕಡ 56 ಮತ್ತು 54ರಷ್ಟು ಮಳೆ ಕೊರತೆ ಉಂಟಾಗಿದೆ.
ಎಚ್.ಡಿ ಕೋಟೆ ತಾಲೂಕಿನಲ್ಲಿ ಶೇಕಡ 46ರಷ್ಟು , ಹುಣಸೂರು ತಾಲೂಕಿನಲ್ಲಿ ಶೇಕಡ 53ರಷ್ಟು ,ಕೆ.ಆರ್. ನಗರ ತಾಲೂಕಿನಲ್ಲಿ ಶೇಕಡ 46ರಷ್ಟು , ಮೈಸೂರಿನಲ್ಲಿ ಶೇಕಡ 29ರಷ್ಟು, ನಂಜನಗೂಡು ತಾಲೂಕಿನಲ್ಲಿ ಶೇಕಡ 32ರಷ್ಟು, ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇಕಡ 44ರಷ್ಟು, ತಿ.ನರಸೀಪುರ ತಾಲೂಕಿನಲ್ಲಿ ಶೇಕಡ 25ರಷ್ಟು, ಸರಗೂರು ಶೇಕಡ 45ರಷ್ಟು, ಸಾಲಿಗ್ರಾಮ ಶೇಕಡ 39ರಷ್ಟು ಮಳೆ ಕೊರತೆ ಉಂಟಾಗಿದೆ.
ಜಿಲ್ಲೆಯಲ್ಲಿ ಬಿತ್ತನೆ ವಿವರ
ಜಿಲ್ಲೆಯಲ್ಲಿ 3.76609 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇಟ್ಟುಕೊಂಡಿದ್ದರೂ ಈವರೆಗೆ 1,64.355 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ ಶೇಕಡ 59. 86, ಸರಗೂರು ತಾಲೂಕಿನಲ್ಲಿ ಶೇ 57.71, ಹುಣಸೂರು ತಾಲೂಕಿನಲ್ಲಿ ಶೇಕಡ 41.75 ರಷ್ಟು, ಕೆ.ಆರ್. ನಗರ ತಾಲೂಕಿನಲ್ಲಿ ಶೇಕಡ 43.30, ಸಾಲಿಗ್ರಾಮ ತಾಲೂಕಿನಲ್ಲಿ 40.56 ರಷ್ಟು, ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇಕಡ 54.02 ರಷ್ಟು, ಮೈಸೂರು ಶೇ. 43.11, ನಂಜನಗೂಡು ತಾಲೂಕಿನಲ್ಲಿ ಶೇ. 39.82, ತಿ. ನರಸೀಪುರ ತಾಲೂಕಿನಲ್ಲಿ ಶೇಕಡ 15.4 ರಷ್ಟು ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸರಾಸರಿ 43.75ರಷ್ಟು ಮಾತ್ರ ಬಿತ್ತನೆಯಾಗಿದೆ.
ಏಕದಳ ಧಾನ್ಯಗಳಾದ ಭತ್ತ, ಜೋಳ, ರಾಗಿ, ಮುಸುಕಿನ ಜೋಳ, ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಹಲಸಂದೆ, ಅವರೆ, ಎಣ್ಣೆ ಕಾಳುಗಳಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಹೊಸನಾಟಿ, ಕೊಳೆಬೇಳೆ, ಶುಂಠಿ, ಹೊಗೆ ಸೊಪ್ಪುಗಳನ್ನು ಬೆಳೆಯಾಗಿದೆ. ರಾಗಿಯ ಬಿತ್ತನೆ ಪ್ರಮಾಣ 3.2 ರಷ್ಟು ಅಂದರೆ 2536 ಹೆಕ್ಟರ್ ಪ್ರದೇಶದಲ್ಲಿ, ಜೋಳ 1120 ಹೆಕ್ಟೇರ್ ಪ್ರದೇಶದ ಬಿತ್ತನೆ ಮಾಡಲಾಗಿದೆ. ಕಡಿಮೆ ನೀರನ್ನು ಆಶ್ರಯಿಸುವ ಸಿರಿಧಾನ್ಯಗಳ ಬಿತ್ತನೆಯಾಗಿಲ್ಲ.
ರೈತರಲ್ಲಿ ಅಧಿಕಾರಿಗಳ ಮನವಿ
ಪ್ರಸ್ತುತ ಹವಾಮಾನ ಇಲಾಖೆಯ ತಜ್ಞರು ತಿಳಿಸಿರುವ ಪ್ರಕಾರ, ಈ ಬಾರಿ ಮಳೆ ಪ್ರಮಾಣ ಕಡಿಮೆ ಇರಲಿದೆ. ಹೀಗಾಗಿ ವಿಶೇಷವಾಗಿ ರಾಗಿ ಬೆಳೆಯು ಬರ ನಿರೋಧಕ ಶಕ್ತಿಯನ್ನು ಹೊಂದಿದ್ದು, ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ನೀಡುತ್ತದೆ. ಹಾಗೆಯೇ ದ್ವಿದಳ ಧಾನ್ಯಗಳಾದ ಅಲಸಂದೆ, ಅವರೆ ಮತ್ತು ಹೆಸರು ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿರುವುದಿಲ್ಲ. ಕಡಿಮೆ ಮಳೆಯಲ್ಲೂ ಇವು ಉತ್ತಮವಾಗಿ ಬೆಳೆಯುತ್ತವೆ. ಆದ್ದರಿಂದ ಈ ಪರಿಸ್ಥಿತಿಯಲ್ಲಿ ರೈತರು ಕಡಿಮೆ ನೀರನ್ನು ಅಪೇಕ್ಷಿಸುವ ಬೆಳೆಗಳಿಗೆ ಆದ್ಯತೆ ನೀಡುವುದು ಅತ್ಯಂತ ಸೂಕ್ತವಾಗಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
2026-27 ನೇ ಸಾಲಿನಲ್ಲಿ ಮಳೆ ಕೊರತೆಯಾಗಿರುವ ಹಿನ್ನಲೆಯಲ್ಲಿ ಸಕಾಲದಲ್ಲಿ ರೈತರಿಗೆ ಬರ ನಿರ್ವಹಣೆ ಕ್ರಮಗಳನ್ನು ಒದಗಿಸಲು ಮೇ ತಿಂಗಳಿನಿಂದ ಇಲ್ಲಿಯವೆಗೆ ನಡೆದಿರುವ ಎಲ್ಲ ಜಿಲ್ಲಾಮಟ್ಟದ, ತಾಲ್ಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಸಭೆಗಳು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ರೈತರಿಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬೇಡಿಕೆ ಒಟ್ಟು 21991 ಮೆ.ಟನ್ ಇದ್ದು, 52543 ಮೆ.ಟನ್ ದಾಸ್ತಾನು ಮಾಡಿರುವುದರಿಂದ ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಪರ್ಯಾಯ ಬೆಳೆ ಬೇಕು
ಈ ಬಾರಿ ಮುಂಗಾರು ಮಳೆ ಅಷ್ಟೊಂದು ಆಶಾದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತ ಬಾಂಧವರು ಹೆಚ್ಚು ನೀರನ್ನು ಬಯಸುವ ಭತ್ತ ಮತ್ತು ಕಬ್ಬು ಬೆಳೆಯುವ ಬದಲು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಅಲಸಂದೆ ಹಾಗೂ ಅವರೆಯಂತಹ ಬೆಳೆಗಳನ್ನು ಬೆಳೆಯುವುದು ಸೂಕ್ತ.
ರವಿ, ಜಂಟಿ ಕೃಷಿ ನಿರ್ದೇಶಕರು, ಮೈಸೂರು