4 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ 
ಮೈಸೂರು

ಡಿ.5ರಿಂದ ಮಂಡ್ಯದಲ್ಲಿ ಕೃಷಿ ಮೇಳ

ಮಂಜುನಾಥ ತಿಮ್ಮಯ್ಯ
ಮೈಸೂರು: ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ‘ಸಮಗ್ರ ಕೃಷಿಯಿಂದ ಸುಸ್ಥಿರತೆ’ ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳವನ್ನು ಡಿಸೆಂಬರ್ 5, 6 ಮತ್ತು 7ರಂದು ಆಯೋಜಿಸಲಾಗಿದೆ.
ರೈತರಿಗೆ ಇತ್ತೀಚಿನ ಕೃಷಿ ಸಂಶೋಧನೆ, ಅತ್ಯಾಧುನಿಕ ಸಾಧನಗಳ ಬಳಕೆಯ ಮೇಲೆ ಮೇಳವು ಬೆಳಕು ಚೆಲ್ಲಿದೆ. ಸುಮಾರು 3ರಿಂದ 4 ಲಕ್ಷ ರೈತರು, ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆ, ಹಣಕಾಸು ಸಂಸ್ಥೆಗಳು, ರೈತ ಉತ್ಪಾದಕರ ಕಂಪನಿಗಳು ಹಾಗೂ ಸಂಘ ಸಂಸ್ಥೆಗಳು ಭಾಗಿಯಾಗಲಿವೆ ಎಂದು ಮಂಡ್ಯ ಕೃಷಿ ವಿಜ್ಞಾನ ವಿವಿಯ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಮೇಳದ ವಸ್ತುಪ್ರದರ್ಶನದಲ್ಲಿ 350 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿವಿ ಕಾರ್ಯ ವ್ಯಾಪ್ತಿಯ ಮಂಡ್ಯ, ಮೈಸೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಿಂದ 10 ಜನ ಪ್ರಗತಿಪರ ರೈತರು, ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 60 ಜನರಿಗೆ ಯುವ ರೈತ/ಯುವ ರೈತ ಮಹಿಳೆಯರಿಗೆ ತಾಲೂಕುಮಟ್ಟ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೇಳದಲ್ಲಿ ಭಾಗವಹಿಸುವ ರೈತರು, ಸಾರ್ವಜನಿಕರಿಗೆ ಊಟ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹವಾಮಾನ ವೈಪರೀತ್ಯ, ಕೃಷಿ ಕಾರ್ಮಿಕರ ಕೊರತೆ, ಅಸಮರ್ಪಕ ನೀರು ನಿರ್ವಹಣೆ, ಮಣ್ಣಿನ ಸವಕಳಿ, ಮಣ್ಣಿನ ಫಲವತ್ತತೆ ಕ್ಷೀಣಿಸುವುದು, ಕೀಟ ಪೀಡೆಗಳು, ಜಾನುವಾರು ರೋಗ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುವುದು. ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ, ಡ್ರೋನ್ ಪ್ರಯೋಜನಗಳನ್ನು ಪ್ರಾತ್ಯಕ್ಷಿಕೆಯೊಡನೆ ವಿವರಿಸಲಾಗುವುದು.
ಹೀಗಾಗಿ ಕೃಷಿ ತೊರೆಯಲು ನಿರ್ಧರಿಸಿರುವವರು ಹಾಗೂ ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ಭೇಟಿ ನೀಡಿದಲ್ಲಿ ಲಾಭದಾಯಕ ಕೃಷಿ ಕುರಿತ ಮಾಹಿತಿ ಸಿಗಲಿದೆ. ಚರ್ಚಾಗೋಷ್ಠಿ, ಸಾಧಕ ಕೃಷಿಕರಿಗೆ ಸನ್ಮಾನ ಸಹ ಮಾಡಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳಾದ ಡಾ.ಎನ್.ಶಿವಕುಮಾರ್, ಡಾ.ಜಿ.ಎಂ.ದೇವಗಿರಿ, ಡಾ.ಸಿ. ರಾಮಚಂದ್ರ, ಡಾ.ಎ.ಡಿ. ರಂಗನಾಥ್ ಇನ್ನಿತರರಿದ್ದರು.