ಮಾದಾಪುರ ಸಮೀಪದ ತೋಟದಲ್ಲಿ ಪ್ರಗತಿ ಪರ ರೈತ ಬಾಬು ಶಂಕರ್ ಅವರ ತೋಟದಲ್ಲಿ ಬೆಳೆದ ಫಸಲು  
ಮೈಸೂರು

ಸಮೃದ್ಧ ಫಸಲಿನಿಂದ ಸಂತಸದ ಬದುಕು

ಎ. ಆರ್. ರಘುರಾಮ
ಮಹೇಂದ್ರ ಪೂರೀಗಾಲಿ ತಿ.ನರಸೀಪುರ
ತಾಲೂಕಿನ ಮಾದಾಪುರದ ಬಳಿ ಕಪ್ಪು ಮಣ್ಣಿನ ಭೂಮಿಯನ್ನು ಫಲವತ್ತಾದ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಪರ ರೈತ ಡಿ.ಬಾಬು ಶಂಕರ್ ಸಮಗ್ರ ಕೃಷಿಯಲ್ಲಿ ಹಲವು ಬೆಳೆ ಬೆಳೆಯುವ ಮೂಲಕ ಯಶ ಸಾಧಿಸಿದ್ದಾರೆ.
ಕರಲು ಭೂಮಿಗೆ ಕೆರೆ ಮಣ್ಣು ಮತ್ತು ಕೆಂಪು ಮಣ್ಣನ್ನು ಹಾಕಿ ದಶಕಗಳ ಕಾಲ ಸುರಿಸಿದ ಬೆವರಿನ ಫಲವಾಗಿ ಇಂದು ಸಾವಿರಾರು ಅಡಿಕೆ ಮರ, ಬಾಳೆ, ನೂರಾರು ತೆಂಗು, ಸಿಲ್ವರ್, ಕಾಫಿ, ಮೆಣಸು ಸೇರಿದಂತೆ ಹತ್ತಾರು ಹಣ್ಣಿನ ಗಿಡಗಳು ಸಮೃದ್ಧ ಫಲ ನೀಡುತ್ತಿವೆ.
ಯುವಕರಿದ್ದಾಗಲೇ ರೇಷ್ಮೆ ಕೃಷಿಯಲ್ಲಿ ದುಡಿಮೆ ಮಾಡಿಕೊಂಡು ಸ್ವಾವಲಂಬಿಯಾದ ರೈತ ಬಾಬು ಶಂಕರ್ ಮೂಲತಃ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದವರು. ಬಿಎಸ್ಸಿ ಪದವೀಧರರು. ಬೆಂಗಳೂರಿನಲ್ಲಿ ಕಂಪ್ಯೂಟರ್ ಬಿಡಿ ಭಾಗಗಳ ಪೂರೈಕೆ ಏಜೆನ್ಸಿ ನಿರ್ವಹಣೆಯಲ್ಲೂ ಸಾಕಷ್ಟು ಅನುಭವ ಪಡೆದವರು. ಆದರೆ, ಕೃಷಿ ಬಗ್ಗೆ ವಿಶೇಷ ಆಸಕ್ತಿ ಇದ್ದ ಕಾರಣ ದುಡಿಮೆ ಹಣದಿಂದ ಮಾದಾಪುರ ಬಳಿ 3.34 ಎಕರೆ ಜಮೀನು ಖರೀದಿ ಮಾಡಿದರು. ಭೂಮಿಯನ್ನು ಹದ ಮಾಡಿ ಒಂದೂವರೆ ದಶಕದ ಶ್ರಮದ ಫಲವಾಗಿ ಸಮಗ್ರ ಕೃಷಿ ಒಲಿದಿದೆ. ಅನ್ನದಾತರಾಗಬೇಕು ಎಂಬ ಅವರ ಆಶಯ ಈಡೇರಿದೆ.
ಕಬಿನಿ ಬಲದಂಡೆ ನಾಲೆ ನೀರನ್ನೇ ನಂಬಿಕೊಂಡು, ಭತ್ತ, ರಾಗಿ, ಮುಸುಕಿನ ಜೋಳ ಹಾಗೂ ಕಬ್ಬನ್ನು ಬೆಳೆದರು. ಒಂದೊಂದು ಬೆಳೆಯನ್ನು ತೆಗೆಯುವುದು ಪ್ರಯಾಸ ಎಂಬಂತೆ ಆಗಿತ್ತು. ಆಗ ಅವರಿಗೆ ಹೊಳೆದದ್ದು ಸಮಗ್ರ ಕೃಷಿ ಯೋಜನೆ. ಇದನ್ನು ಹಂತ ಹಂತವಾಗಿ ಜಾರಿಗೆ ತಂದರು.
ಅಡಿಕೆ ಸಸಿಗೆ ನೆರಳಾಗಲೆಂದು ಆರಂಭದಲ್ಲಿ 4,000 ಬಾಳೆ ಗಿಡ ಬೆಳೆದರು. ಬಳಿಕ 2,600 ಅಡಿಕೆ ಗಿಡಗಳು ಬೆಳೆದು ನಿಂತವು. ಇದರೊಂದಿಗೆ 400 ಕೋ ಕೋ ಗಿಡ, 80 ತೆಂಗಿನ ಗಿಡ ಬೆಳೆಸಿದರು. ಎಲ್ಲವೂ ಹುಲುಸಾಗಿ ಬೆಳೆದು ದಶಕದ ನಂತರ ಸಮೃದ್ಧ ಆದಾಯವನ್ನೂ ನೀಡುತ್ತಿವೆ.
ಅಂತರ ಬೆಳೆಯಾಗಿ 500 ಕಾಫಿ, 400 ಸಿಲ್ವರ್, 300 ಕಾಳು ಮೆಣಸು ಬಳ್ಳಿ ಬೆಳೆದಿದ್ದಾರೆ. ಇದರ ಜತೆಗೆ 10 ಸೇಬು, ಸೀಬೆ, ನಿಂಬೆ, ಬೆಣ್ಣೆ ಹಣ್ಣು, ಮಾವು, ಪರಂಗಿ, ಸೀತಾಫಲ ಮರವನ್ನೂ ಹೊಂದಿದ್ದಾರೆ. ಎಲೆ ಅಂಜೂರ, ನಕ್ಷತ್ರ ಹಣ್ಣು, ಬೆಟ್ಟದ ನಲ್ಲಿ, ಕಿರು ನೆಲ್ಲಿಕಾಯಿ, ಅಮಟೆ, ಚೆರ‌್ರಿ, ಗೋಡಂಬಿ ಬೆಳೆದಿದ್ದಾರೆ. ಔಷಧ ಗಿಡಮೂಲಿಕೆಯಾಗಿರುವ ಛಾಯಾ ಮಾನಸ, ಚಕ್ರಮುನಿ ಮತ್ತು ಗೃಹಬಳಕಗಾಗಿ 15 ಬದನೆ ಗಿಡಗಳು ಸಾಕಷ್ಟು ಫಲ ನೀಡಿವೆ.
*
ರಾಸಾಯನಿಕ ಗೊಬ್ಬರಕ್ಕೆ ವಿದಾಯ
ಸಮಗ್ರ ಕೃಷಿಗೆ ಸಂಪೂರ್ಣವಾಗಿ ಸಾವಯವ ಗೊಬ್ಬರವನ್ನೇ ಬಳಸುತ್ತಿರುವ ಕೃಷಿಕ ಬಾಬು ಶಂಕರ್ ರಾಸಾಯನಿಕ ಗೊಬ್ಬರದಿಂದ ಬಹು ದೂರವೇ ಇದ್ದಾರೆ. ಸಗಣಿ, ಗೋ ಕೃಪಾನಂದ ಜಲ ಹಾಗೂ ಕಾಂಪೋಸ್ಟ್ ಗೊಬ್ಬರ ಬಳಸಿಕೊಂಡು ಭೂ ಫಲವತ್ತತೆಯನ್ನು ವೃದ್ಧಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಮಠದ ಸಹಜ ಕೃಷಿಯ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿ ಅಲ್ಲಿನ ಮಾದರಿಗಳನ್ನು ಬಳಸಿಕೊಂಡಿದ್ದಾರೆ. ತೋಟದಲ್ಲಿ ಒಂದು ಕೊಳವೆ ಬಾವಿ ಹೊಂದಿದ್ದು, ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಮಗ್ರ ಕೃಷಿ ಕಾಯಕಕ್ಕೆ ಪತ್ನಿ ಎಚ್.ಎ.ಹೇಮಲತಾ ಸಾಥ್ ನೀಡಿದ್ದಾರೆ. ಅಂತೆಯೇ, ಪುತ್ರರಾದ ಮನೀಶ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ಪ್ರೀತಿಷ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಇಬ್ಬರಿಗೂ ಕೃಷಿ ಬಗ್ಗೆ ಗೌರವವಿದೆ.
*
ಪ್ರತಿಯೊಬ್ಬರ ಬದುಕಿಗೂ ಕೃಷಿ ಭೂಮಿ ಮತ್ತು ಅಲ್ಲಿ ಬೆಳೆಯುವ ಉತ್ಪನ್ನಗಳೇ ಆಧಾರ ಎಂಬುದನ್ನು ಎಂದಿಗೂ ಮರೆಯಬಾರದು. ಜಮೀನು ಇರುವ ಯಾರೂ ಕೃಷಿಯನ್ನು ಕೈ ಬಿಡಬಾರದು. ಲಾಭಕ್ಕೆ ಹಿಗ್ಗದೆ, ನಷ್ಟಕ್ಕೆ ಕುಗ್ಗದೆ ವ್ಯವಸಾಯವನ್ನು ಮಾಡಬೇಕು. ರಾಸಾಯನಿಕ ಮುಕ್ತ ಸಾವಯವ ಕೃಷಿಯಿಂದ ಬೆಳೆದ ಪದಾರ್ಥಗಳನ್ನೇ ಎಲ್ಲರಿಗೂ ನೀಡಬೇಕು.
ಡಿ. ಬಾಬು ಶಂಕರ್
ಪ್ರಗತಿ ಪರ ರೈತ, ಮಾದಾಪುರ
*
ಸಮಗ್ರ ಕೃಷಿಯಲ್ಲಿ ರಸಗೊಬ್ಬರ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ಕೊಟ್ಟಿಗೆ ಗೊಬ್ಬರವನ್ನೇ ಬೆಳೆಗಳಿಗೆ ನೀಡಬೇಕು. ಪ್ರತಿಯೊಂದು ಸಂದರ್ಭದಲ್ಲಿಯೂ ನಾವು ಸೇವಿಸುವ ಆಹಾರ ಕಲುಷಿತವಾಗುವುದನ್ನು ತಡೆಯಬೇಕು. ಈ ಸಂಕಲ್ಪ ಮಾಡಿ ನಾನು ಪತಿಯೊಂದಿಗೆ
ಸಮಗ್ರ ಕೃಷಿ ನಿರ್ವಹಿಸಿ ಯಶ ಕಂಡುಕೊಂಡಿದ್ದೇವೆ.
ಎಚ್.ಎ.ಹೇಮಲತಾ
ಮಾದಾಪುರ