ತಿ.ನರಸಿಪುರ ಹಳೇ ತಿರುಮಕೂಡಲುನಲ್ಲಿ ಸೋಮವಾರ ಶ್ರೀ ಅಗಸ್ತ್ಯೇಶ್ವರಸ್ವಾಮಿ ಅವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ತಿ.ನರಸೀಪುರ: ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಸೋಮವಾರ ಶ್ರೀ ಅಗಸ್ತೇಶ್ವರಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಹಿನ್ನೆಲೆಯಲ್ಲಿ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮದ ತೀರದಲ್ಲಿರುವ ಶ್ರೀ ಅಗಸ್ತೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಅಲಂಕಾರಗೊಂಡಿದ್ದ ತೇರಲ್ಲಿ ಶ್ರೀ ಪೂರ್ಣ ಮಂಗಳ ಕಾಮಾಕ್ಷಾಂಬ ಸಮೇತ ಶ್ರೀ ಅಗಸ್ತೇಶ್ವಸ್ವಾಮಿಯವರ ಮಹಾ ರಥವನ್ನು ಹರ್ಷೋದ್ಗಾರದಿಂದ ಎಳೆಯುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಭಕ್ತರು ಹಣ್ಣು ದವನ ಎಸೆದು ಭಕ್ತಿ ಭಾವ ಮೆರೆದರು.
ದೇವಾಲಯದಲ್ಲಿ ಬೆಳಗ್ಗೆಯಿಂದ ಅಗಸ್ತೇಶ್ವರಸ್ವಾಮಿಗೆ ವಿಶೇಷ ಪೂಜೆಗಳು ಸಾಂಗವಾಗಿ ನೆರವೇರಿದವು. ರಾಜ ಬೀದಿಯಲ್ಲಿ ಮಂಟಪೋತ್ಸವ ನೆರವೇರಿದ ಬಳಿಕ ಮಧ್ಯಾಹ್ನ 12.30 ಗಂಟೆಗೆ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ತಾಲೂಕು ಆಡಳಿತದ ಪರವಾಗಿ ಸ್ಥಳೀಯ ಗ್ರಾಮ ಲೆಕ್ಕಿಗರು ಮಹಾ ಮಂಗಳಾರತಿ ಸ್ವೀಕರಿಸಿದರು. ಸ್ವಾಮಿಯವರ ರಥ ಸಾಗಿದ ಬಳಿಕ ಶ್ರೀ ಮನೋನ್ಮಣಿ ಅಮ್ಮನವರು ಹಾಗೂ ಶ್ರೀ ಚಂದ್ರಮೌಳೀಶ್ವರರ ಕಿರು ರಥಗಳು ಸಾಗಿದವು.
ಹಳೇ ತಿರುಮಕೂಡಲು ರಸ್ತೆ ವಿಸ್ತರಣೆ ವೇಳೆ ಸಿಮೆಂಟ್ ರಸ್ತೆಯಾಗಿ ಅಭಿವೃದ್ಧಿಗೊಂಡಿದ್ದರಿಂದ ಶ್ರೀ ಆದಿ ಚುಂಚನಗಿರಿ ರಜತೋತ್ಸವ ಭವನದ ಬಳಿ ನಿಲ್ಲುತ್ತಿದ್ದ ರಥೋತ್ಸವ ವೃತ್ತದ ಪ್ರವೇಶ ದ್ವಾರದವರೆಗೂ ಯಾವುದೇ ಅಡೆತಡೆ ಇಲ್ಲದೇ ಸಾಗಿತು. ಸಂಜೆಯ ಬಳಿಕ ಸ್ವಸ್ಥಾನಕ್ಕೆ ಮರಳಿತು. ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ದೇವಾಲಯ ಜೀರ್ಣೋದ್ಧಾರಗೊಂಡ ಬಳಿಕ ಆಯೋಜನೆಗೊಂಡಿದ್ದ ಮಹಾ ರಥೋತ್ಸವಕ್ಕೆ ಎಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ರಥೋತ್ಸವದ ಮಾರ್ಗದುದ್ದಕ್ಕೂ ಹರಕೆ ಹೊತ್ತ ಭಕ್ತರು ಮಜ್ಜಿಗೆ, ಪಾನಕ, ಕೋಸಂಬರಿ, ಹುರುಳಿ, ಅಂಬಲಿ ಹಾಗೂ ಮೊಸರನ್ನ ವಿತರಿಸಿದರು. ಜಾತ್ರೋತ್ಸವದ ಪ್ರಯುಕ್ತ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್, ಆಗಮಿಕರಾದ ನಾಗಚಂದ್ರ ದೀಕ್ಷಿತ್, ದೇಶ ದೀಕ್ಷಿತ್ ಹಾಗೂ ಮನೋಜ್ ದೀಕ್ಷಿತ್ ತಂಡ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಆಸ್ತಿಕತೆಯಲ್ಲಿ ಅಪಾರ ನಂಬಿಕೆಯುಳ್ಳ ಮೈಸೂರು ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ದೊಡ್ಡ ಯಜಮಾನರಾದ ಚಂದ್ರೇಗೌಡ, ನಟರಾಜು, ಚಿಕ್ಕ ಯಜಮಾನರಾದ ಮಹದೇವಸ್ವಾಮಿ, ಸುರೇಶ್, ಮಾರು ಪತ್ತೆಗಾರ್ ಟಿ.ಎಸ್ ಚೇತನ್, ಹಿರಿಯ ಮುಖಂಡ ಪಿ.ಸ್ವಾಮಿನಾಥ್ ಗೌಡ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ನಾಮಿನಿ ಸದಸ್ಯ ಚೇತನ್, ಮುಖಂಡರಾದ ವೆಂಕಟೇಶ್, ಪ್ರದೀಪ್, ಪುಟ್ಟು ಸೇರಿದಂತೆ ಹಳೇ ಹಾಗೂ ಹೊಸ ತಿರುಮಕೂಡಲಿನ ಮುಖಂಡರು ಹಾಗೂ ನಿವಾಸಿಗಳು ಇದ್ದರು.