ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ನಡೆದ ಅಡಿಕೆ, ತೆಂಗು ಬೆಳೆಗಳ ಕಾರ್ಯಾಗಾರವನ್ನು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಉದ್ಘಾಟಿಸಿದರು. ಡಾ. ಮಂಜುನಾಥ್, ಡಾ. ಪಾಂಡುರಂಗ, ಕೆ.ಟಿ. ವೆಂಕಟೇಶ್, ವೈ.ಕೆ.ಕ್ಯಾತೇಗೌಡ ಸೇರಿದಂತೆ ಪ್ರಮುಖರು ಇದ್ದರು.
ಬನ್ನೂರು: ದೇಶಕ್ಕೆ ಸ್ವಾತಂತ್ರೃ ದೊರೆತು 75 ವರ್ಷಗಳು ಕಳೆದಿದ್ದು, ಎಲ್ಲ ಕ್ಷೇತ್ರಗಳನ್ನು ಗಮನಿಸಿದರೆ ಕೃಷಿ ಕ್ಷೇತ್ರ ಹಿಂದೆ ಬಿದ್ದಿರುವುದು ಕಾಣುತ್ತಿದೆ. ನಾವು ಅಗತ್ಯವಾಗಿ ರೈತನ ಬದುಕು ಉನ್ನತೀಕರಿಸುವ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.
ದೊಡ್ಡಹೊಸೂರು ಗ್ರಾಮದ ಗಾಂಧಿ ಸಹಜ ಬೇಸಾಯ ಆಶ್ರಮ, ಅಂಕನಹಳ್ಳಿ ಹಾಗೂ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ತೆಂಗು, ಅಡಿಕೆ ತೋಟಗಳಲ್ಲಿನ ಕೀಟ ಮತ್ತು ರೋಗಬಾಧೆಗಳ ನಿವಾರಣೆ ಹಾಗೂ ಪೋಷಣೆ, ತೋಟಗಳಲ್ಲಿ ಬಹುಬೆಳೆ ಪದ್ದತಿ ನಿರ್ವಹಣೆ ಕುರಿತ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೇರೆಲ್ಲ ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರ ಅಭಿವೃದ್ಧಿಯಾಗಬೇಕಿದ್ದು, ಇಂದು ಶೇ. 1 ರಷ್ಟು ಮಾತ್ರವೇ ಅಭಿವೃದ್ಧಿಯಾಗಿದೆ. ಬದುಕಿನ ಜೀವನ ನಿರ್ವಹಣೆಗಾಗಿ ವಿವಿಧ ಆಯಾಮ ಕಂಡು ಕೊಂಡ ರೈತ ಅದರ ಮೂಲಕ ತನ್ನ ಆರ್ಥಿಕ ಸುಧಾರಣೆಯನ್ನು ಕಂಡುಕೊಂಡಿದ್ದಾನೆ. ಕೆಲವರು ಇದರಿಂದಲೇ ಸಾಲದ ಸುಳಿಗೆ ಸಿಲುಕಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕ ಮನೋಭಾವ, ನವೀನ ತಂತ್ರಜ್ಞಾನದ ಅಳವಡಿಕೆ ಮಾಡಿಕೊಂಡರೆ ರೈತನ ಪ್ರಗತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ಎಚ್. ಮಂಜುನಾಥ್ ಮಾತನಾಡಿ, ರೈತರು ಇಂದು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಬದುಕು ಬದಲಾಗುತ್ತದೆ. ಮಣ್ಣಿನ ಪರೀಕ್ಷೆ ಮಾಡಿಸಿ, ಅಗತ್ಯವಿರುವ ಗೊಬ್ಬರವನ್ನು ಹಾಕಬೇಕು. ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೈತರು ಅಡಿಕೆ, ಹಾಗೂ ತೆಂಗಿನ ಮರಗಳಲ್ಲಿ ಕಂಡುಬರುವ ರೋಗವನ್ನು ಹೇಗೆ ನಿವಾರಣೆ ಮಾಡಬಹುದು ಎನ್ನುವುದನ್ನು ರೈತರಿಗೆ ನೇರವಾಗಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ. ಚಂದ್ರು, ಡಾ. ಪಾಂಡುರಂಗ, ವೈ.ಜಿ. ಮಹೇಂದ್ರ, ವೈ.ಕೆ. ಬೋರೇಗೌಡ, ಡಾ. ಬಾಲಕೃಷ್ಣ, ಕೆ.ಟಿ. ವೆಂಕಟೇಶ್, ಕಾರ್ಯನಿರ್ವಹಣಾಧಿಕಾರಿ ವೈ.ಕೆ. ಕ್ಯಾತೇಗೌಡ ಸೇರಿದಂತೆ ವಿವಿಧ ಊರಿನ ರೈತ ಮುಖಂಡರು, ಯಾಚೇನಹಳ್ಳಿ ಗ್ರಾಮಸ್ಥರು ಇದ್ದರು.