ತಿ.ನರಸೀಪುರದ ಹೊಸ ತಿರುಮಕೂಡಲು ರಸ್ತೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ತಾಲೂಕು ಶಾಖೆ ಹಾಗೂ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಜಿ.ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು. ಟಿ.ವಿ.ಲಕ್ಷ್ಮೀಶ, ಕೆ.ಸಿ.ತ್ರಿವೇಣಿ, ಬಿ.ಮಹದೇವಸ್ವಾಮಿ, ಕೇತಹಳ್ಳಿ ರಾಜಣ್ಣ, ರವಿ, ಸಿದ್ದರಾಜು, ಎಂ.ಸುಂದರ್, ನಟರಾಜು ಇತರರು ಇದ್ದರು.
- ಕಾರ್ಮಿಕ ನಿರೀಕ್ಷಕ ಟಿ.ವಿ.ಲಕ್ಷ್ಮೀಶ ಕರೆ
ತಿ.ನರಸೀಪುರ : ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು, ಗುರುತಿನ ಚೀಟಿಗಳನ್ನು ಪಡೆದು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ನಿರೀಕ್ಷಕ ಟಿ.ವಿ.ಲಕ್ಷ್ಮೀಶ ಕರೆ ನೀಡಿದರು.
ಪಟ್ಟಣದಲ್ಲಿ ಹೊಸ ತಿರುಮಕೂಡಲು ಜೋಡಿ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಭಾರತ್ ಮಾತಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಘಟಕ ಹಾಗೂ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರಾಗಿ ನಿತ್ಯವೂ ದುಡಿಮೆಯ ಮೂಲಕವೇ ಜೀವನ ನಡೆಸುವ ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಾಯಿತ ಸಂಘಗಳಲ್ಲಿ ಸದಸ್ಯರಾಗಿ ಸರಕಾರದ ಯೋಜನೆಗಳನ್ನು ಕಾಲ ಕಾಲಕ್ಕೆ ಪಡೆದುಕೊಳ್ಳಬೇಕು ಎಂದರು.
ರಾಜ್ಯ ಸರಕಾರದ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ,ಟೂಲ್ ಕಿಟ್, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಸಹಾಯಧನ, ತಾಯಿ ಮಗು ಸಹಾಯ ಹಸ್ತ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.
ಸನ್ಮಾನ ಸ್ವೀಕರಿಸಿದ ಸಂಘದ ರಾಜ್ಯಾಧ್ಯಕ್ಷ ಜಿ.ಸಿದ್ದರಾಜು ಮಾತನಾಡಿ, ರಾಜ್ಯದಲ್ಲಿ 200 ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರ ಸಂಘತನೆಗಳು ಕಾರ್ಯನಿರ್ವಾಹಿಸುತ್ತಿದ್ದು, ಕಾರ್ಮಿಕರ ಅನೇಕ ಕುಟುಂಬಗಳು ಸಂಕಷ್ಟದಲ್ಲಿವೆ, ಸರಕಾರ ಕಾರ್ಮಿಕರಿಗೆ ಸರಕಾರ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸ್ವಾವಲಂಬಿಯಾಗಿ ಬದುಕಲು ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಪುರಸಭೆ ಕಂದಾಯ ಅಧಿಕಾರಿ ಕೆ.ಸಿ.ತ್ರಿವೇಣಿ, ಸಂಘದ ಗೌರವಾಧ್ಯಕ್ಷ ಕೇತಹಳ್ಳಿ ರಾಜಣ್ಣ, ತಾಲೂಕು ಅಧ್ಯಕ್ಷ ಬಿ. ಮಹದೇವಸ್ವಾಮಿ, ಕಾರ್ಯದರ್ಶಿ ರವಿ, ಹಿರಿಯ ಉಪಾಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಎಂ.ಸುಂದರ್, ಖಜಾಂಚಿ ನಟರಾಜು, ರಾಜ್ಯ ಕಾರ್ಯದರ್ಶಿ ಪ್ರಕಾಶ್, ಮಾಣಿಕ್ಯಾಂ, ನಾಗರಾಜು, ಎಂ.ಕುಮಾರ್, ರಾಜೇಶ್, ಪುಟ್ಟರಾಜು, ಮಲ್ಲು, ರವಿ, ವಸಂತಕುಮಾರ್, ಆನಂದ್ ಮೂರ್ತಿ, ವಿನೋದ, ಸಿದ್ದರಾಜು, ಚಾಮರಾಜು, ರಾಮು, ರಾಜು, ರಾಜೇಶ್, ಚಂದ್ರು ಇತರರು ಇದ್ದರು.