ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.
- ಇರುವಷ್ಟು ದಿವಸ ದೇವರ ಹೆಸರಿನಲ್ಲಿ ಜನರಿಗೆ ಒಳಿತು ಮಾಡಬೇಕು
- ಮಾಡುವ ಕೆಲಸಗಳು ಮಾತಾಗಬೇಕು, ಮಾತನಾಡುವುದೇ ಕೆಲಸ ಆಗಬಾರದು
ಮೈಸೂರು:ಬೆಂಗಳೂರಿನ ಸಹೇಲಿ ಸೇವಾ ಸಂಸ್ಥೆ, ಪಾರಮಾರ್ಥ ಅಧ್ಯಾತ್ಮ ಸಿದ್ಧಿ ಕೇಂದ್ರದಿಂದ ಮೈಸೂರಿನಿಂದ ಬೆಂಗಳೂರಿಗೆ ಮೂರು ದಿನಗಳ ಕಾಲ ಸಂಚರಿಸುವ ‘ಅದ್ವೈತ ಜಾಗೃತಿ ಜ್ಯೋತಿ’ ರಥಯಾತ್ರೆಗೆ ಚಾಲನೆ ನೀಡಲಾಯಿತು.
ಸಹೇಲಿ ಸೇವಾ ಸಂಸ್ಥೆಯ 30ನೇ ವಾರ್ಷಿಕೋತ್ಸವ ಅಂಗವಾಗಿ ಚಾಮುಂಡಿಬೆಟ್ಟದಿಂದ ಆರಂಭಗೊಂಡ ರಥಯತ್ರೆ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರದ ಮೂಲಕ ಬೆಂಗಳೂರು ತಲುಪಲಿದೆ.
ವಾರ್ಷಿಕೋತ್ಸವದ ಅಂಗವಾಗಿ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ದೇಹ ಮಾತ್ರ. ನಾನು ನನ್ನದು ಎನ್ನುವುದು ಕ್ಷಣಿಕ. ಹಾಗಾಗಿ ಇರುವಷ್ಟು ದಿವಸ ದೇವರ ಹೆಸರಿನಲ್ಲಿ ಜನರಿಗೆ ಒಳಿತು ಮಾಡಬೇಕು. ಮಾಡುವ ಕೆಲಸಗಳು ಮಾತಾಗಬೇಕು, ಮಾತನಾಡುವುದೇ ಕೆಲಸ ಆಗಬಾರದು ಎಂದರು.
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕಾಳಿಮಠದ ಶ್ರೀರಿಷಿಕುಮಾರಸ್ವಾಮಿ, ತಿ.ನರಸೀಪುರ ಹಲವಾರ ಮಠದ ಶ್ರೀಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಸರ್ವ ಧರ್ಮ ಸಮನ್ವಯ ಸೌಹಾರ್ಯ ಪೀಠದ ಡಾ.ವಿಜಯಾನಂದ ಗುರೂಜಿ, ಹಿಮಾಲಯ ಶ್ರೀಮಹಾಕಾಳ ಸಚ್ಚಿದಾನಂದ ಸ್ವಾಮೀಜಿ, ಮಾಜಿ ಶಾಸಕ ನ.ಲ.ನರೇಂದ್ರಬಾಬು, ಸಹೇಲಿ ಸೇವಾ ಸಂಸ್ಥೆಯ ಕಿರಣ್ ಶೂನ್ಯ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸೆಲ್ವಪಿಳ್ಳೈ ಅಯ್ಯಂಗಾರ್, ನಟ ಶಂಕರ್ ಅಶ್ವತ್ಥ್, ಸಮಾಜ ಸೇವಕಿ ಚಿತ್ರಾ ಸುಬ್ಬಯ್ಯ, ಲಯನ್ಸ್ ಸಂಸ್ಥೆಯ ವಿಶ್ವನಾಥ್ ಇತರರಿದ್ದರು.