ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಎಂ.ಆರ್.ಗಂಗಾಧರ್ ಉದ್ಘಾಟಿಸಿದರು. ಡಾ.ಎಸ್.ಸಿ. ಜೈ ಪ್ರಭಾಕರ್, ಎಚ್.ಎಸ್.ಗಿರಿಜಾಂಬ, ಪ್ರೊ. ಕಂಡಿಕೆರೆ ರಾಮಯ್ಯ ಶ್ರೀಧರ್, ಶಿವಕುಮಾರ್ ಸಿ., ಡಾ.ಕೃಷ್ಣಮೂರ್ತಿ ಇತರರು ಇದ್ದರು. 
ಮೈಸೂರು

ಸಂಸ್ಕೃತಿ, ಜ್ಞಾನದ ವಾರಸುದಾರರು ಆದಿವಾಸಿಗಳು: ಕುಲಪತಿ ಎಂ.ಆರ್.ಗಂಗಾಧರ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಆದಿವಾಸಿಗಳ ವಿಶೇಷವಾದ ಜ್ಞಾನ ಜಾಗತೀಕರಣದಲ್ಲಿ ಪಲ್ಲಟಗೊಳ್ಳುತ್ತಿದೆ
  • ಆದಿವಾಸಿಗಳ ಪಾರಂಪರಿಕ ಜ್ಞಾನವನ್ನು ನಮ್ಮ ಆಧುನಿಕ ವೈದ್ಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು
ಮೈಸೂರು:ಆದಿವಾಸಿಗಳು ಪ್ರಪಂಚದ ಅತ್ಯಂತ ಪುರಾತನ ಸಂಸ್ಕೃತಿ ಮತ್ತು ಜ್ಞಾನದ ವಾರಸುದಾರರು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ಗಂಗಾಧರ್ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಸೋಮವಾರ ಬುಡಕಟ್ಟು ಜನರ ಆರೋಗ್ಯ ಮತ್ತು ಆರೋಗ್ಯ ರಕ್ಷಣಾ ಪದ್ಧತಿಗಳ ಮೇಲೆ ಜಾಗತೀಕರಣ ಮತ್ತು ಸಾಂಸ್ಕೃತಿಕ ನಂಬಿಕೆಗಳ ಪ್ರಭಾವ ಕುರಿತು ನಡೆದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಎಂದರೆ ಕೇವಲ ಔಷಧ ಮತ್ತು ಆಸ್ಪತ್ರೆಯಲ್ಲ, ಅದು ಪೌಷ್ಟಿಕತೆ, ನಂಬಿಕೆ, ಪಾರಂಪರಿಕತೆ ಮತ್ತು ಅಸ್ಮಿತೆಯನ್ನು ಒಳಗೊಂಡಿದೆ. ಆದಿವಾಸಿಗಳ ವಿಶೇಷವಾದ ಜ್ಞಾನ ಜಾಗತೀಕರಣದಲ್ಲಿ ಪಲ್ಲಟಗೊಳ್ಳುತ್ತಿದೆ. ಜಾಗತೀಕರಣವು ಅನುಕೂಲ ಮತ್ತು ಅನನುಕೂಲ ಎರಡನ್ನೂ ಒಳಗೊಂಡಿದೆ. ಜಾಗತಿಕವಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕೆನಡಾ ದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆದಿವಾಸಿಗಳ ಪಾಲುಗೊಳ್ಳುವಿಕೆ ಇದೆ. ಆದರೆ ಭಾರತದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ ಇದೆ ಎಂದರು.
ಆದಿವಾಸಿಗಳ ಪಾರಂಪರಿಕ ಜ್ಞಾನವನ್ನು ನಮ್ಮ ಆಧುನಿಕ ವೈದ್ಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಆರೋಗ್ಯ ಎಂದರೆ ಶರೀರ, ಮನಸ್ಸು ಸದೃಢವಾಗಿರುವುದಕ್ಕೆ ಅಲ್ಲ, ಅದು ಬದುಕಿನ ಜೀವನ ಕ್ರಮವಾಗಿದೆ ಎಂದರು.
ಗಿಡಮೂಲಿಕೆ ಔಷಧ, ಧಾರ್ಮಿಕ ಚಿಕಿತ್ಸೆ, ಆಧ್ಯಾತ್ಮಿಕ ಸಮಾರಂಭಗಳು ಸಮುದಾಯ ಆಧಾರಿತ ಆರೈಕೆ. ಈ ಸಮಗ್ರ ವಿಧಾನವು ಆಧುನಿಕ ಜೈವಿಕ ವೈದ್ಯಕೀಯ ವ್ಯವಸ್ಥೆಗಳಿಗಿಂತ ಭಿನ್ನವಾಗಿವೆ. ಜಾಗತೀಕರಣವು ಹಲವಾರು ಸುಧಾರಣೆಗಳನ್ನು ತಂದಿದೆ. ಸರ್ಕಾರಿ ಯೋಜನೆಗಳು ದೂರದ ಪ್ರದೇಶಗಳನ್ನು ತಲುಪುತ್ತವೆ. ಮೊಬೈಲ್ ಚಿಕಿತ್ಸಾಲಯಗಳು ತರಬೇತಿ ಪಡೆದ ವೈದ್ಯರು ಬುಡಕಟ್ಟು ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಹಪ್ರಾಧ್ಯಾಪಕ ಧಾರವಾಡದ ಡಾ.ಎಸ್.ಸಿ.ಜೈ ಪ್ರಭಾಕರ್ ಮಾತನಾಡಿ, ಆದಿವಾಸಿಗಳ ಆರೋಗ್ಯದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಇದರಲ್ಲಿ ಧಾರ್ಮಿಕ ನಂಬಿಕೆಗಳಿಗೆ ಬೆಲೆ ಕೊಡಬೇಕು. ಜಾಗತೀಕರಣ ಬೇಕು, ದೇಶೀಯತೆಯನ್ನು ಒಳಗೊಂಡ ಜಾಗತೀಕರಣ ಬೇಕು. ಆದಿವಾಸಿಗಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಬದಲಾದ ಜೀವನಶೈಲಿಯಿಂದ ಹಲವಾರು ಕಾಯಿಲೆಗಳು ಹೆಚ್ಚಾಗುತ್ತಿವೆ. ಆದಿವಾಸಿಗಳ ಜಾನಪದ ವೈದ್ಯಪದ್ಧತಿಯನ್ನು ಪೋಷಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್.ಗಿರಿಜಾಂಬ ಮಾತನಾಡಿ, ಆದಿವಾಸಿಗಳಿಗೆ ಔಷಧಗಲ ಬಗ್ಗೆ ಆಳವಾದ ಜ್ಞಾನವಿದೆ. ಆಯುರ್ವೇದ ಮತ್ತು ನಾಟಿ ವೈದ್ಯ ಪದ್ಧತಿಯನ್ನು ಸಾಮಾನ್ಯ ಜನರಿಗೆ ಹೇಗೆ ಪರಿಚಯಿಸಬಹುದು ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಬೇಕಾಗಿದೆ. ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಕಾರ್ಯಾಗಾರಕ್ಕೆ ಬಂದಿರುವುದರಿಂದ ಪ್ರಾದೇಶಿಕ ಬುಡಕಟ್ಟು ಸಮುದಾಯದವರ ವಿವಿಧ ವೈದ್ಯ ಪದ್ಧತಿಗಳನ್ನು ತಿಳಿದುಕೊಳ್ಳಲು ಇದೊಂದು ಸದಾವಕಾಶ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕಂಡಿಕೆರೆ ರಾಮಯ್ಯ ಶ್ರೀಧರ್, ಸಂಶೋಧನಾಧಿಕಾರಿ ಸಿ.ಶಿವಕುಮಾರ್, ಡಾ.ಕೆ.ವಿ. ಕೃಷ್ಣಮೂರ್ತಿ ಮಾತನಾಡಿದರು. ಕ್ಷೇತ್ರ ಸಂಶೋಧಕ ಡಾ.ದಿನೇಶ್ ಕೆ.ಡಿ., ಡಾ.ರಾಮಕೃಷ್ಣಯ್ಯ ಡಿ.ಸಿ, ಡಾ.ರವಿಕುಮಾರ್, ಡಾ.ಮೋಹನ್‌ಕುಮಾರ್, ಕಚೇರಿ ಅಧೀಕ್ಷಕಿ ಎಂ.ವಿ.ನಾಗರತ್ನಾ ಇತರರಿದ್ದರು