ಕೆ.ಆರ್.ನಗರ ಪಟ್ಟಣದ ಶ್ರೀ ಆದಿಶಕ್ತಿ ತೋಪಮ್ಮ ತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ಭೇಟಿ ನೀಡಿ ಪೂಜಿ ಸಲ್ಲಿಸಿದ ಶಾಸಕ ಡಿ.ರವಿಶಂಕರ್ ಅವರನ್ನು ತೋಪಮ್ಮನವರ ದೇವಾಲಯದ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎ.ರಾಜು, ಕಾರ್ಯದರ್ಶಿ ಕೆ.ಪಿ.ಜಗದೀಶ್ ಪದಾಧಿಕಾರಿಗಳು ಸನ್ಮಾನಿಸಿದರು. 
ಮೈಸೂರು

ಕೆ.ಆರ್.ನಗರದಲ್ಲಿ ಆದಿಶಕ್ತಿ ತೋಪಮ್ಮ ಜಾತ್ರೆ ಸಡಗರ

ನಾಗೇಶ ಎಸ್
ಕೆ.ಆರ್.ನಗರ: ಪಟ್ಟಣದ ಹೊರ ವಲಯದ ಹಾಸನ-ಮೈಸೂರು ರಸ್ತೆಯಲ್ಲಿರುವ ಪ್ರೇಮಿಗಳ ದೇವತೆ ಆದಿಶಕ್ತಿ ತೋಪಮ್ಮನವರ 40ನೇ ವರ್ಷದ ವಾರ್ಷಿಕ ಜಾತ್ರೆ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿಸಿ ತೋಪಮ್ಮನವರ ವಿಗ್ರಹಕ್ಕೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಕೆ.ಆರ್.ನಗರ, ಸಾಲಿಗ್ರಾಮ ಹಾಗೂ ವಿವಿಧ ಜಿಲ್ಲೆಗಳಿಂದ ನೂರಾರು ಗ್ರಾಮಗಳ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹರಕೆ ತೀರಿಸಿದರು.
ದೇವಾಲಯದ ಸುತ್ತ ಜಾತ್ರೆಯ ಅಂಗವಾಗಿ ಸಿಹಿತಿಂಡಿ ಅಂಗಡಿಗಳು ಮತ್ತು ವಿವಿಧ ಆಟಿಕೆಗಳ ಮಾರಾಟದ ಅಂಗಡಿಗಳು ಎಲ್ಲರ ಗಮನ ಸೆಳೆಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ದೇವಾಲಯ ಇರುವುದರಿಂದ ಸುಗಮ ಸಂಚಾರಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶ್ರೀ ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ, ಶಾಸಕ ಡಿ.ರವಿಶಂಕರ್ ದೇವಾಲಯಕ್ಕೆ ಭೇಟಿ ನೀಡಿ ಆದಿಶಕ್ತಿ ತೋಪಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಲಾಗಿತ್ತು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ರೋಜಾಮಹೇಶ್, ಪುರಸಭಾ ಮಾಜಿ ಅಧ್ಯಕ್ಷರಾದ ಕೋಳಿಪ್ರಕಾಶ್, ಶಿವು ನಾಯಕ್, ಮಾಜಿ ಸದಸ್ಯ ಶಂಕರ್‌ಸ್ವಾಮಿ, ಆದಿಶಕ್ತಿ ತೋಪಮ್ಮನವರ ದೇವಾಲಯದ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎ.ರಾಜು, ಕಾರ್ಯದರ್ಶಿ ಕೆ.ಪಿ.ಜಗದೀಶ್, ಪದಾಧಿಕಾರಿಗಳಾದ ಯೋಗೀಶ್, ಮಾಟೇಗೌಡ, ಜವರೇಗೌಡ, ರಮೇಶ್, ಟಿ.ಎಲ್.ಪರಶಿವಮೂರ್ತಿ, ಕೆ.ಬಿ.ಮಹದೇವ್ ಇದ್ದರು.