ನಂಜನಗೂಡು ತಾಲೂಕಿನ ಓಂಕಾರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಗಳನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿಗೆ ಶಾಸಕ ದರ್ಶನ್ ಭೂಮಿಪೂಜೆ ನೆರವೇರಿಸಿದರು. ಮಾರುತಿ, ನಾಗೇಶ್ ರಾಜ್, ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಇತರರು ಇದ್ದರು.
- ಶಾಸಕ ದರ್ಶನ್ ಧ್ರುವನಾರಾಯಣ ಹೇಳಿಕೆ
ನಂಜನಗೂಡು: ಕಾಡು ಪ್ರಾಣಿಗಳಿಂದ ರೈತರ ಬೆಳೆ ನಷ್ಟವಾಗುವುದನ್ನು ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ಓಂಕಾರ್ ಅರಣ್ಯ ಪ್ರದೇಶ ವ್ಯಾಪ್ತಿಯ ಶನಿಮಹಾತ್ಮ ದೇವಸ್ಥಾನದಿಂದ ಬೋಳೆಗೌಡನ ಕಟ್ಟೆ ವ್ಯಾಪ್ತಿವರೆಗೆ ಶುಕ್ರವಾರ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಓಂಕಾರ್ ಅರಣ್ಯ ವಲಯ ಪ್ರದೇಶವು ಗುಂಡ್ಲುಪೇಟೆ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿದ್ದು, ಕೇವಲ ಎಂಟು ಕಿಲೋಮೀಟರ್ ಅರಣ್ಯ ಮಾತ್ರ ನಂಜನಗೂಡು ವ್ಯಾಪ್ತಿಗೆ ಬರಲಿದೆ. ಈಗಾಗಲೇ ಎಂಟು ಕಿಲೋಮೀಟರ್ ವ್ಯಾಪ್ತಿಗೂ ಅನುದಾನ ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ ನಾಲ್ಕು ಕಿಲೋಮೀಟರ್‌ಗೆ ಕಾಮಗಾರಿ ನಡೆಸಲಾಗುತ್ತದೆ. ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ತಪ್ಪಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಡಂಚಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ರಾತ್ರಿ ವೇಳೆಯೂ ಜಮೀನಿನಲ್ಲಿ ಮಲಗಿ ಕಾವಲು ಕಾಯುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ರೈಲ್ವೆ ಬ್ಯಾರಿಕೇಡ್ ಜತೆಗೆ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ನಂಜನಗೂಡಿನಲ್ಲಿ ಮೆಷ್ ಅಳವಡಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜತೆಗೂ ಸಹ ಚರ್ಚಿಸಿ ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಲ್ಲದೆ ಕಂದಾಯ ಮತ್ತು ಅರಣ್ಯ ಇಲಾಖೆ ಸಾಗುವಳಿ ಭೂಮಿಯನ್ನು ರೈತರು ಉಳುಮೆ ಮಾಡುತ್ತಿದ್ದು, ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಶುಕ್ರವಾರ ಒಂದೇ ದಿನ ಕೊತ್ತನಹಳ್ಳಿ, ಹೊಸ ವೀಡು, ಹಾಡ್ಯ, ಹೆಡಿಯಾಲ, ವೆಂಕಟಾಚಲಪುರ, ಕಂದೇಗಾಲ ಗ್ರಾಮಗಳಲ್ಲಿ 7 ಕೋಟಿ 61 ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಹನುಮಂತಪ್ಪ, ಎಸಿಎಫ್ ಸುರೇಶ್, ಗ್ಯಾರಂಟಿ ಅಧ್ಯಕ್ಷ ಮಾರುತಿ, ನಾಗೇಶ್ ರಾಜ್, ಆರ್‌ಎಫ್‌ಒ ಪಾಟೀಲ್ ಇತರರು ಇದ್ದರು.