ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರಾಜೆಕ್ಟ್ ಸ್ಪರ್ಧೆ ವೃದ್ಧಿ-2026 ಕಾರ್ಯಕ್ರಮವನ್ನು ವಿದ್ಯಾವರ್ಧಕ ವಿದ್ಯಾಸಂಸ್ಥೆಯ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಉದ್ಘಾಟಿಸಿದರು. ವಿನಾಯಕ ಪಿ.ಹೆಗ್ಡೆ, ಕೆ.ಎಸ್. ಸುಂದರ್, ಪಿ. ವಿಶ್ವನಾಥ್, ಶ್ರೀಶೈಲ ರಾಮಣ್ಣವರ್, ಬಿ. ಸದಾಶಿವ ಗೌಡ, ಶೋಭಾ ಶಂಕರ್ ಇನ್ನಿತರರಿದ್ದರು. 
ಮೈಸೂರು

ನೂತನ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಮೈಸೂರು ಮುಖ್ಯಸ್ಥ ವಿನಾಯಕ ಹೆಗ್ಡೆ ಸಲಹೆ
  • ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆ ವೃದ್ಧಿಗೆ ಚಾಲನೆ
ಮೈಸೂರು: ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು. ಜತೆಗೆ ಮೂಲ ಇಂಜಿನಿಯರಿಂಗ್ ಕೌಶಲ ಬಲಪಡಿಸಬೇಕು ಎಂದು ಇನ್ಫೋಸಿಸ್ ಮೈಸೂರು ಘಟಕದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ವಿನಾಯಕ ಪಿ.ಹೆಗ್ಡೆ ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರಾಜೆಕ್ಟ್ ಸ್ಪರ್ಧೆ ವೃದ್ಧಿ-2026 ಕಾರ್ಯಕ್ರಮದಲ್ಲಿ ಮಾತನಾಡಿ, ತಾಳ್ಮೆ, ಪರಿಶ್ರಮ ಮತ್ತು ಕಠಿಣ ಪರಿಶ್ರಮವೇ ವೈಯಕ್ತಿಕ ಹಾಗೂ ವೃತ್ತಿಪರ ಯಶಸ್ಸಿನ ಭದ್ರ ಅಡಿಪಾಯ. 
ಸೃಜನಶೀಲತೆ ಮತ್ತು ನಿರಂತರ ಕಲಿಕೆ ನಿಜವಾದ ಸಾಧನೆಗೆ ದಾರಿ ಮಾಡಿಕೊಡುತ್ತವೆ. ಜತೆಗೆ ತಮ್ಮ ಬೇರು ಗೌರವಿಸುವುದು, ಮಾರ್ಗದರ್ಶಕರು ಮತ್ತು ಕುಟುಂಬದ ಸಲಹೆ ಗೌರವಿಸುವುದು ವ್ಯಕ್ತಿತ್ವದ ವಿನಯ ಮತ್ತು ಜಾಗತಿಕ ದೃಷ್ಟಿ ಬೆಳೆಸುತ್ತದೆ ಎಂದು ಹೇಳಿದರು.
ನಿಮ್ಮ ಆರಂಭಿಕ ಸಂಬಳ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಕಲಿಯುವ ಸಾಮರ್ಥ್ಯ, ಸಹಯೋಗದ ಮನೋಭಾವ ಮತ್ತು ನಿರಂತರ ಸುಧಾರಣೆಯೇ ನಿಜವಾದ ಯಶಸ್ಸಿನ ದಾರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮೂರು ದಶಕಗಳಿಗೂ ಅಧಿಕ ತಮ್ಮ ಇಂಜಿನಿಯರಿಂಗ್ ವೃತ್ತಿಜೀವನದ ಅನುಭವ ಹಂಚಿಕೊಂಡ ಹೆಗ್ಡೆ, ಜೀವನ ಪಯರ್ಂತ ಕಲಿಕೆ ಮತ್ತು ವೈಫಲ್ಯ ಸಕಾರಾತ್ಮಕವಾಗಿ ಎದುರಿಸುವ ಅಗತ್ಯವಾಗಿದೆ. ವೈಫಲ್ಯವು ಅಂತ್ಯವಲ್ಲ; ಅದು ಕಲಿಯಲು ಮತ್ತು ಇನ್ನಷ್ಟು ಬಲಿಷ್ಠರಾಗಲು ಸಿಗುವ ಅವಕಾಶ ಎಂದು ವಿನಾಯಕ ಹೆಗ್ಡೆ ತಿಳಿಸಿದರು.
ಪ್ರತಿಭೆ ವ್ಯಕ್ತಿಯನ್ನು ಗಮನ ಸೆಳೆಯುವಂತೆ ಮಾಡಬಹುದು. ಆದರೆ ತಂಡದ ಕೆಲಸವೇ ಉತ್ತಮ ಫಲಿತಾಂಶ ತರುತ್ತದೆ. ಇಂದಿನ ಪ್ರಾಜೆಕ್ಟ್‌ಗಳಿಗೆ ಸಹಯೋಗ, ಸಮನ್ವಯ ಮತ್ತು ಪರಿಣಾಮಕಾರಿ ಸಂವಹನ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಇನ್ಫೋಸಿಸ್ ಮೈಸೂರಿನ ಸಹ ಉಪಾಧ್ಯಕ್ಷ ಕೆ.ಎಸ್. ಸುಂದರ್ ಮಾತನಾಡಿ, ಭವಿಷ್ಯದ ವೃತ್ತಿಪರ ಜಗತ್ತು ವೇಗವಾದ ತಾಂತ್ರಿಕ ಬದಲಾವಣೆಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ರೂಪುಗೊಳ್ಳುತ್ತಿದೆ. ತಾಂತ್ರಿಕ ಜ್ಞಾನ, ವಿಷಯ ಪರಿಣತಿ ಮತ್ತು ಗಟ್ಟಿಯಾದ ಮೂಲಭೂತ ಅರಿವಿನ ಜತೆಗೆ ಸಾಮಾಜಿಕ ಕೌಶಲ ಸಮಾನವಾಗಿ ಅಗತ್ಯ ಎಂದು ಹೇಳಿದರು.
ಎಐ ಉಪಕರಣಗಳು ಅಸ್ತಿತ್ವದಲ್ಲಿರುವ ಸಮಸ್ಯೆ ಪರಿಹರಿಸಬಹುದು. ಆದರೆ ನಾವೀನ್ಯತೆ ಎಂಬುದು ಮಾನವನ ಸೃಜನಶೀಲತೆಯಿಂದಲೇ ಬರುತ್ತದೆ. ವಿದ್ಯಾರ್ಥಿಗಳು ಕುತೂಹಲದಿಂದ ಅವಲೋಕಿಸಿ, ನಿರಂತರವಾಗಿ ಕಲಿಯುತ್ತಾ ಹೊಸ ಆವಿಷ್ಕಾರಗಳತ್ತ ಹೆಜ್ಜೆ ಹಾಕಬೇಕು ಎಂದು  ಕೆ.ಎಸ್. ಸುಂದರ್ ಸಲಹೆ ನೀಡಿದರು. 
ವಿದ್ಯಾವರ್ಧಕ ವಿದ್ಯಾಸಂಸ್ಥೆಯ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ಪ್ರಾಂಶುಪಾಲ ಬಿ. ಸದಾಶಿವ ಗೌಡ, ಉಪ ಪ್ರಾಂಶುಪಾಲೆ ಶೋಭಾ ಶಂಕರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಗೋಪಾಲರೆಡ್ಡಿ ಉಪಸ್ಥಿತರಿದ್ದರು.

ನವೀನ ಯೋಜನೆಗಳ ಪ್ರದರ್ಶನ

ಕಾಲೇಜಿನ ಎಚ್. ಕೆಂಪೇಗೌಡ ಕ್ರೀಡಾ ಸಂಕೀರ್ಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಎಲೆಕ್ಟ್ರಿಕಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ನವೀನ ಯೋಜನೆಗಳನ್ನು ಪ್ರದರ್ಶಿಸಿದರು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣ ರಾಜ್ಯಗಳಿಂದ 53 ತಂಡಗಳು ಭಾಗವಹಿಸಿ ವಿವಿಧ ಇಂಜಿನಿಯರಿಂಗ್ ಕ್ಷೇತ್ರಗಳ ಯೋಜನೆಗಳನ್ನು ಪ್ರದರ್ಶಿಸಿವೆ.