ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಪದಾಧಿಕರಿಗಳಿಗೆ ಸಾಧುಕೋಕಿಲ ಅಧಿಕಾರ ಹಸ್ತಾಂತರಿಸಿದರು. ಡಾ.ಬಿ.ಜೆ.ವಿಜಯಕುಮಾರ್, ಕಂದೇಗಾಲ ನಾಗೇಶ್, ಕೋಟೆ ಎಂ.ಶಿವಣ್ಣ, ಹೆಡತಲೆ ಮಂಜುನಾಥ್, ಶಿವಪ್ರಸಾದ್, ಬಿ.ಬೋರೇಗೌಡ, ಹೊಸುಂಡಿ ರಘು, ಗಿರೀಶ್, ಸಂತೋಷ್‌ಗೌಡ ಇದ್ದರು
- ವಿಜಯನಗರ ಸಾಮ್ರಾಜ್ಯ ಬಿಟ್ಟರೆ ಸಾಂಸ್ಕೃತಿಕವಾಗಿ ಮೈಸೂರು ಹೆಜ್ಜೆ ಗುರುತುಳ್ಳ ನಗರವಾಗಿದೆ
- ದೇಸಿಯ ಕಲಾವಿದರನ್ನು ಆರ್ಥಿಕ, ಸಾಮಾಜಿಕವಾಗಿ ಮುನ್ನೆಲೆಗೆ ತರುವ ಅಗತ್ಯವಿದೆ
ಮೈಸೂರು:ಮಾತಿಗಿಂತ ಸಂಗೀತ, ಸಾಹಿತ್ಯ, ಕಲೆ ನಾಟಕದ ಮೂಲಕವೂ ಸಮಾಜವನ್ನು ಎಚ್ಚರಿಸಬಹುದು ಎಂದು ಕಾಂಗ್ರೆಸ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ನಟ ಸಾಧುಕೋಕಿಲ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯ ಬಿಟ್ಟರೆ ಸಾಂಸ್ಕೃತಿಕವಾಗಿ ಮೈಸೂರು ಹೆಜ್ಜೆ ಗುರುತುಳ್ಳ ನಗರವಾಗಿದೆ. ಇಲ್ಲಿ ಹೆಸರಾಂತ ಕಲಾವಿದರು ಇದ್ದಾರೆ. ಕಲಾವಿದರಿಗೆ ಬೆಲೆ ಇದ್ದರೂ ರಾಜಕೀಯ ಸ್ಥಾನಮಾನ ಇಲ್ಲ. ದೂರದ ಬೆಟ್ಟ ನುಣ್ಣಿಗೆ ಎಂಬಂತೆ ಕಲಾವಿದರ ಸ್ಥಿತಿಯಿದೆ ಎಂದರು.
ರಾಜ, ಮಹಾರಾಜ ಕಾಲದಿಂದಲೂ ಕಲೆ, ಸಾಹಿತ್ಯ, ನಾಟಕ, ಸಂಗೀತ ಜನರನ್ನು ಮನಮುಟ್ಟುವಂತೆ ತಲುಪುತ್ತದೆ. ಹಾಗಾಗಿಯೇ ನಾಟಕ, ಹಾಡು, ಲಾವಣಿಗಳ ಮೂಲಕ ಜನರನ್ನು ಜಾಗೃತಗೊಳಿಸುವ, ಆಳುವವರನ್ನು ಎಚ್ಚರಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಹಾಗಾಗಿಯೇ ಸಂಗೀತ, ಹಾಡಿಗೆ ತನ್ನದೇ ಶಕ್ತಿ ಇದೆ ಎಂದು ಹೇಳಿದರು.
ದೇಸಿಯ ಕಲಾವಿದರನ್ನು ಆರ್ಥಿಕ, ಸಾಮಾಜಿಕವಾಗಿ ಮುನ್ನೆಲೆಗೆ ತರುವ ಅಗತ್ಯವಿದೆ. ದಸರೆಯಂತಹ ದೊಡ್ಡ ಕಾರ್ಯಕ್ರಮಕ್ಕೆ ಬೇರೆಡೆಯಿಂದ ಕಲಾವಿದರನ್ನು ಕರೆಸುತ್ತಾರೆ. ಸ್ಥಳೀಯ ಕಲಾವಿದರಿಗೂ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಅವರನ್ನು ದೊಡ್ಡ ವೇದಿಕೆಯಲ್ಲಿ ಮುನ್ನೆಲೆಗೆ ತರಲಾಗುವುದು ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಲೋಕಸಭೆ ಚುನಾವಣೆ ವೇಳೆ ಡಿ.ಕೆ.ಸುರೇಶ್ ಅವರ ಪರ ಪ್ರಚಾರಕ್ಕೆಂದು ನನ್ನನ್ನು ಕರೆತಂದರು. ಇದರಿಂದ ನಾನು ಪಕ್ಷದಲ್ಲಿ ಗುರುತಿಸಿಕೊಂಡು ಇಲ್ಲೇ ದುಡಿಯುವಂತಾಯಿತು. ಬಡವರು, ಕೆಳವರ್ಗದವರಿಗೆ ಒಂದೇ ಪಕ್ಷ ಅದೇ ಕಾಂಗ್ರೆಸ್ ಎಂದು ನನ್ನ ತಾಯಿ ಹೇಳಿದ್ದು ಎಂದಿಗೂ ಮರೆಯುವಂತಿಲ್ಲ. ಇಂದಿರಾಗಾಂಧಿ ಜಾರಿಗೆ ತಂದ ಹಾಲು, ಬ್ರೆಡ್ ವಿತರಣೆಯನ್ನು ನನ್ನ ಶಾಲಾ ದಿನಗಳಲ್ಲಿ ಮರೆಯುವಂತಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ನಾನು ಋಣಿ ಎಂದರು.
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಸ್ಥಳೀಯ ಕಲಾವಿದರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಬೇರೆ ಬೇರೆ ಇದೆ. ಸ್ವಾತಂತ್ರ್ಯ ಹೋರಾಟದಲ್ಲೂ ಕಲಾವಿದರ ಪಾತ್ರವಿದೆ. ಕಲೆ ಎಂಬುದು ಕೇವಲ ಮನರಂಜನೆಯಲ್ಲ. ಸಾಹಿತ್ಯ, ಸಂಸ್ಕೃತಿಯೂ ಕೂಡ ದೇಶದ ಸಂಪತ್ತು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಜಿಲ್ಲಾಧ್ಯಕ್ಷ ಕಂದೇಗಾಲ ನಾಗೇಶ್ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಕಲಾ ಸಂಗಮ ಕಾರ್ಯಕ್ರಮವನ್ನು ಮಾಡುವ ಉದ್ದೇಶ ನಮಗಿದೆ ಎಂದು ಹೇಳಿದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಡಿಸಿಸಿ ಮೈಸೂರು ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಬಿ.ಬೋರೇಗೌಡ, ಮಾಜಿ ಅಧ್ಯಕ್ಷ ಹೊಸುಂಡಿ ರಘು, ಮುಖಂಡರಾದ ಗಿರೀಶ್, ಸಂತೋಷ್‌ಗೌಡ, ಹೆಳವರ ಹುಂಡಿ ಸೋಮು, ದೇವಾನಂದ, ಸಿದ್ದಯ್ಯ, ಮಲ್ಲೇಶ್ ಕೋಟೆ, ರಮೇಶ್, ಪ್ರವೀಣ್ ಸಿದ್ದಲಿಂಗಪುರ, ಸುರೇಶ್, ಸಂಜಯ್ ಮಿರ್ಲೆ, ಶುಭಾ, ಶೋಭಾ ಬಿಳಕೆರೆ, ಸುಶೀಲಾ, ಮನೋಜ್ ವರುಣ ಇದ್ದರು