ಶೀಗವಾಳು ಗ್ರಾಮ ಪಂಚಾಯಿತಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ರುಕಿಯ ಬೇಗಂ, ಉದಯ್ ಶಂಕರ್, ಎಂ.ಎಸ್.ಮಹದೇವ್ ಇತರರು ಇದ್ದರು. 
ಮೈಸೂರು

ಸಕಾಲದಲ್ಲಿ ಜನರ ಕೆಲಸ ಮಾಡಿಕೊಡದಿದ್ದರೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ, ಸಿಬ್ಬಂದಿಗೆ ಶಾಸಕ ಡಿ.ರವಿಶಂಕರ್ ಖಡಕ್ ಎಚ್ಚರಿಕೆ
  • ಬೆಟ್ಟಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆ
ಸಾಲಿಗ್ರಾಮ: ಸಕಾಲದಲ್ಲಿ ಜನರ ಕೆಲಸ ಮಾಡಿಕೊಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಎಚ್ಚರಿಕೆ ನೀಡಿದರು.
ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಪೌತಿ ಖಾತೆ ಸೇರಿದಂತೆ ಇನ್ನಿತರ ಜಮೀನು ಕೆಲಸಗಳಿಗೆ ರೈತರು ಅರ್ಜಿ ನೀಡಿ ವರ್ಷಗಳೇ ಕಳೆದರೂ ಅರ್ಜಿಗಳು ವಿಲೇವಾರಿಯಾಗಿಲ್ಲ. ರೈತರಿಗೆ ಸರಿಯಾದ ಮಾಹಿತಿಯನ್ನು ಗ್ರಾಮಲೆಕ್ಕಿಗರು ಕೊಡುತ್ತಿಲ್ಲ. ಇನ್ನಷ್ಟು ಗ್ರಾಮಲೆಕ್ಕಿಗರು ರೈತರಿಂದ ಹಣ ಪಡೆದು ಕೆಲಸ ಮಾಡಿಕೊಟ್ಟಿಲ್ಲ ಎಂಬ ದೂರುಗಳು ಕೇಳಿ ಬರುತ್ತವೆ. ಆದರೂ ಮುಂದೊಂದು ದಿನ ಸರಿ ಮಾಡಿಕೊಳ್ಳುತ್ತಾರೆ ಎಂದು ತಾಳ್ಮೆಯಿಂದ ಇದ್ದೇನೆ. ಇದೇ ದೂರುಗಳು ಮುಂದುವರಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಕೆಲ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಗುಂಪುಗಾರಿಕೆ ಮಾಡಿಕೊಂಡು ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಜನರನ್ನು ಮತ್ತು ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂಬ ದೂರುಗಳೂ ಬಂದಿದೆ. ಸರ್ಕಾರ ಕೊಡುತ್ತಿರುವ ಸಂಬಳಕ್ಕೆ ಋಣ ತೀರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ನಿಮ್ಮನ್ನು ಸರ್ಕಾರಿ ಅಧಿಕಾರಿಗಳಾಗಿ ನೇಮಕ ಮಾಡಿದರೆ ಜನರು ನನ್ನನ್ನು ವೋಟು ಹಾಕಿ ಶಾಸಕರನ್ನಾಗಿ ಮಾಡಿದ್ದಾರೆ. ನಮ್ಮಿಬ್ಬರ ಕೆಲಸ ಒಂದೇ ಜನರ ಸೇವೆ. ಕೆಲಸ ಮಾಡುವುದರಲ್ಲಿ ವಿಳಂಬವಾದರೆ ಜನರು ರೊಚ್ಚಿಗೇಳುತ್ತಾರೆ. ಇದನ್ನ ಅರಿತು ಅಧಿಕಾರಿಗಳು ಕೆಲಸ ಮಾಡಬೇಕು, ಮಾಡದಿದ್ದರೆ ನಿಮಗೆ ಇಷ್ಟ ಬಂದ ಕಡೆ ಹೋಗಬಹುದು ಎಂದು ಹೇಳಿದರು.
ಸೆಸ್ಕ್ ನಲ್ಲಿ ಸಮಸ್ಯೆಗಳ ಸುರಿಮಳೆ
ಸೆಸ್ಕ್‌ನಲ್ಲಿ ಅಧಿಕಾರಿಗಳು ಸರಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನೀಡಿದ ಅರ್ಜಿಗೆ ಉತ್ತರ ಕೊಡಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸದ ದೂರುಗಳು ಬಂದಿವೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು. ಮಳೆಗಾಲ ಶುರುವಾಗುತ್ತಿರುವುದರಿಂದ ವಿದ್ಯುತ್ ಸಮಸ್ಯೆಗಳು ಹೆಚ್ಚಾಗಬಹುದು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಾವುದೇ ಗ್ರಾಮಕ್ಕೂ ವಿದ್ಯುತ್ ಸಮಸ್ಯೆ ಆಗಬಾರದು. ಕಂಬಗಳು ಮತ್ತು ತಂತಿಗಳನ್ನು ಈಗಲೇ ಸರಿಪಡಿಸಿಕೊಂಡು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಗ್ರಾಮದಲ್ಲಿ ಈಗಾಗಲೇ ಎರಡು ದೇವಸ್ಥಾನಗಳನ್ನು ಉದ್ಘಾಟನೆ ಮಾಡಲಾಗಿದೆ. ಐದು ಕೋಟಿ ರೂ.ವೆಚ್ಚದಲ್ಲಿ ಮುಂಡೂರು ಕುಲುಮೇಹೊಸೂರು ಮತ್ತು ಬೆಟ್ಟಳ್ಳಿ ಗ್ರಾಮಕ್ಕೆ ಜನ ಸಂಪರ್ಕ ಕಲ್ಪಿಸುವ ರಸ್ತೆಗೆ ಈಗಾಗಲೇ ಭೂಮಿ ಪೂಜೆ ಮಾಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮನುಗನಹಳ್ಳಿ-ಬೆಟ್ಟಳ್ಳಿ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಗುಂಡಿಗಳಿಂದ ಕೂಡಿತ್ತು. ಇದರಿಂದ ಜನರಿಗೆ ಸಾಕಷ್ಟು ತೊಂದರೆ ಆಗಿತ್ತು.ಈಗ ಅದೂ ಕೂಡ ಪೂರ್ಣಗೊಂಡಿದೆ ಎಂದರು.
ತಹಸೀಲ್ದಾರ್ ರುಕಿಯ ಬೇಗಂ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯ್ ಶಂಕರ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಂಗ್ರೆಸ್ ವಕ್ತಾರ ಸೈಯದ್ ಜಾಬಿರ್, ನಗರ ಅಧ್ಯಕ್ಷ ಪ್ರಭಾಕರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದು, ಹರದನಹಳ್ಳಿ ಮಂಜಪ್ಪ, ಹಾಡ್ಯ ಮಹದೇವಸ್ವಾಮಿ, ಅಂಕನಹಳ್ಳಿ ನಟರಾಜ್, ಕೃಷಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ಪಶು ಸಂಗೋಪನ ಇಲಾಖೆ ಅಧಿಕಾರಿ ರಾಮು, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ರಾಜೇಗೌಡ, ಸಣ್ಣಯ್ಯ, ಹರ್ಷ, ಮಂಜು, ಗ್ರಾಮಲೆಕ್ಕಿಗ ತುಕರಾಂ, ಧನಂಜಯ್, ಮಂಜು, ಮನುಗನಹಳ್ಳಿ ದೇವರಾಜ್, ಲೋಕೋಪಯೋಗಿ ಇಲಾಖೆ ಪ್ರಸಾದ್ ಇತರರು ಇದ್ದರು.