ಮೈಸೂರು: ನಗರದ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅದಮ್ಯ ರಂಗ ಶಾಲೆಯು ಒಂದು ತಿಂಗಳ ಅವಧಿಯ ಅಭಿನಯ ಕಾರ್ಯಾಗಾರ ಆಯೋಜಿಸಿದ್ದು, ಅಭಿನಯ ಕಲಿಯಲು ಇಚ್ಛಿಸುವ ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ ಎಂದು ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದರು.
ಅಭಿನಯ ಕಾರ್ಯಾಗಾರವು ಫೆ. 16 ರಿಂದ ಮಾ.14 ರವರೆಗೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಜಯಲಕ್ಷ್ಮೀಪುರಂನ ಅದಮ್ಯ ರಂಗಶಾಲೆಯಲ್ಲಿ ಶಿಸ್ತುಬದ್ಧವಾಗಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅಭಿನಯ ಕಲೆ’ಗೆ ಒತ್ತು ನೀಡಿ ಕಲಿಸುವ ಪರಮ ಧ್ಯೇಯ ಹೊಂದಿರುವ ಅಭಿನಯ ಕಾರ್ಯಾಗಾರದಲ್ಲಿ ಹಿರಿಯರೊಟ್ಟಿಗೆ ಕಿರಿಯರೂ ಕಲೆತು ಅಭಿನಯಕ್ಕೆ ಸಂಬಂಧಿಸಿದ ಬಹುಮುಖಿ ಮಜಲುಗಳನ್ನು ಅರಿಯಲು ಅವಕಾಶವಿದೆ. ಕನ್ನಡ ಮತ್ತು ಜಾಗತಿಕ ರಂಗಭೂಮಿ, ವಿವಿಧ ನಾಟಕಗಳು, ಅಭಿನಯ ಕಲೆ, ತೆರೆಯ ಹಿಂದಿನ ರಂಗತಾಂತ್ರಿಕ ವಿಷಯಗಳ ಬಗ್ಗೆ ನುರಿತ ರಂಗತಜ್ಞರು ಶಿಬಿರಾರ್ಥಿಗಳಿಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವರು ಎಂದು ಮಾಹಿತಿ ನೀಡಿದರು.
18 ವರ್ಷ ಮೀರಿದ ಎಲ್ಲ ವಯೋಮಿತಿಯೊಳಗಿನ ಮಹಿಳೆಯರು ಮತ್ತು ಪುರುಷರು ಈ ಅಭಿನಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಕಾರ್ಯಗಾರದ ಅವಧಿಯಲ್ಲಿ ನಾಟಕವೊಂದನ್ನು ಆಯ್ಕೆ ಮಾಡಿಕೊಂಡು, ಶಿಬಿರಾರ್ಥಿಗಳಿಂದಲೇ ಅಭಿನಯ ಮಾಡಿಸಿ ಸಮಾರೋಪದಲ್ಲಿ ಪ್ರದರ್ಶನ ಮಾಡಲಾಗುವುದು. ಕಾರ್ಯಾಗಾರ ಪೂರ್ಣಗೊಳಿಸಿದ ಎಲ್ಲರಿಗೂ ಅಧಿಕೃತ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ಅಭಿನಯ ಕಲಿಕೆಯಲ್ಲಿ ಆಸಕ್ತಿ ಇರುವವರು ಫೆ.15ರೊಳಗೆ ಅದಮ್ಯ ರಂಗಶಾಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.