ಹುಣಸೂರು ತಾ.ಬಿಳಿಕೆರೆಯಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಕಾರ್ಯಕ್ರಮವನ್ನು ಮಾದಳ್ಳಿ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಹಂದನಹಳ್ಳಿ ಸೋಮಶೇಖರ್, ಪ್ರೀತಿ, ದಿನೇಶ್ ಪೂಜಾರಿ ಇತರರಿದ್ದರು. 
ಮೈಸೂರು

ದೇವರ ಆರಾಧನೆಯಿಂದ ನೆಮ್ಮದಿ, ಶಾಂತಿ ಪ್ರಾಪ್ತಿ

ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅಭಿಪ್ರಾಯ

ಹುಣಸೂರು: ದೇವರ ಆರಾಧನೆಯ ಮೂಲಕ ಗ್ರಾಮ ಮತ್ತು ಪ್ರತಿಮನೆಗಳಲ್ಲಿ ನೆಮ್ಮದಿ, ಶಾಂತಿಯೊಂದಿಗೆ ಸಂತ್ಸಂಗದ ಅನುಭವ ಸಾಧ್ಯವೆಂದು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹುಣಸೂರು-2 ಯೋಜನಾ ಕಚೇರಿಯ ಕಚೇರಿ ವತಿಯಿಂದ ಬಿಳಿಕೆರೆಯ ಶ್ರೀಲಕ್ಷ್ಮೀ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸ್ವಾಮೀಜಿ ಅವರು ಮಾತನಾಡಿ, ಪ್ರತಿಯೊಂದು ಕುಟುಂಬದವರು ತಮ್ಮ ಸಂಪ್ರದಾಯ, ಸಂಸ್ಕಾರವನ್ನು ಪಾಲಿಸಬೇಕು. ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು. ನಮ್ಮ ಹಬ್ಬ ಹರಿದಿನ, ಜಾತ್ರೆ, ಗ್ರಾಮಗಳ ಹಬ್ಬಗಳು ಹಾಗೂ ಸತ್ಯನಾರಾಯಣ ಪೂಜೆಯ ಮಹತ್ವವನ್ನು ತಿಳಿಸಿಕೊಡಬೇಕು. ಪೂಜೆ ಪುನಸ್ಕಾರಗಳು ಕೇವಲ ಧಾರ್ಮಿಕ ವಿಷಯವಲ್ಲ. ಅದು ನಮ್ಮ ಮನೋಬಲ ಹೆಚ್ಚಿಸುವ, ಸಾತ್ವಿಕ ಗುಣಗಳನ್ನು ಉದ್ದೀಪನಗೊಳಿಸುವ ಅಂಶಗಳಾಗಿದ್ದು, ಅಶಾಂತಿಯೇ ಮೈವೆತ್ತು ಕುಳಿತಿರುವ ಇಂದಿನ ಸಮಾಜಕ್ಕೆ ಇದು ಅನಿವಾರ್ಯವೆಂದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ ಅಧ್ಯಕ್ಷೆ ಪ್ರೀತಿ, ಯೋಜನೆಯ ಮಾನವ ಸಂಪನ್ಮೂಲ ತರಬೇತಿ ಸಂಸ್ಥೆಯ ಪ್ರಾಂಶುಪಾಲ ದಿನೇಶ್‌ಪೂಜಾರಿ, ತಾಲೂಕು ಯೋಜನಾಧಿಕಾರಿ ಶುಭಾದೇವಿ ವಲಯದ ಮೇಲ್ವಿಚಾರಕಿ ವೀಣಾ ಮಾತನಾಡಿದರು. ಅರ್ಚಕರಾದ ಮಹದೇವಸ್ವಾಮಿ ಅವರು ಪೂಜಾ ಕಾರ್ಯ ನೆರವೇರಿಸಿ ಪೂಜೆಯ ಮಹತ್ವ ಮತ್ತು ಧಾರ್ಮಿಕ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಸಮುದಾಯ ಭವನದ ಮಾಲೀಕರಾದ ಜಗದೀಶ್-ಅಂಬಿಕಾ ದಂಪತಿ, ನವಜೀವನ ಸಮಿತಿಯ ಸದಸ್ಯ ಚಂದ್ರಕುಮಾರ್ ಸೇವಾ ಪ್ರತಿನಿಧಿಗಳಾದ ಕುಮಾರಿ, ಪಂಕಜಾ, ಜ್ಯೋತಿ, ಅಪ್ಸಲ್ ಕಾವಲ್, ಗೌರಮ್ಮ, ಶಿಲ್ಪಾ, ಮಂಗಳಾ, ಪೂಜಾ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ 600ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.