ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಉದ್ಘಾಟಿಸಿದರು. ಪರಶುರಾಮ್, ಬಾಲಕೃಷ್ಣ, ಶ್ರೀಕಂಠ, ಡಾ.ಎಸ್.ಶ್ರೀಕಾಂತ್ ಇತರರಿದ್ದರು. 
ಮೈಸೂರು

ಸೇವಾ ಮನೋಭಾವ ಇದ್ದಲ್ಲಿ ಸಾಧನೆ ಸಾಧ್ಯ

ಹುಣಸೂರು : ಸಮಾಜ ಕಾರ್ಯ(ಎಂಎಸ್‌ಡಬ್ಲ್ಯು)ವಿಭಾಗದ ವಿದ್ಯಾರ್ಥಿಗಳು ಕ್ಷೇತ್ರದ ಜ್ಞಾನ, ವೃತ್ತಿ ಕೌಶಲ ಮತ್ತು ಸೇವಾ ಮನೋಭಾವ ಹೊಂದಿದಲ್ಲಿ ಮಾತ್ರ ಅವರ ವೃತ್ತಿಯಲ್ಲಿ ಸಾಧನೆಯ ಶಿಖರವೇರಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಅಭಿಪ್ರಾಯಪಟ್ಟರು.
ನಗರದ ಡೀಡ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಎಸ್‌ಡಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಬುಡಕಟ್ಟು ಅಧ್ಯಯನ ಶಿಬಿರವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಭಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಇಂದು ನಿತ್ಯಜೀವನದಲ್ಲೂ ಹಾಸುಹೊಕ್ಕಿದೆ. ಸಮಾಜ ಕಾರ್ಯದ ಪರಿಕಲ್ಪನೆಯೂ ಬದಲಾಗುತ್ತಿದೆ. ಸರ್ಕಾರದ ಯೋಜನೆಗಳ ಸಮರ್ಪಕ ಜಾರಿ ಸರ್ಕಾರದಿಂದಾಗುವುದಿಲ್ಲ. ನಿಜವಾದ ಫಲಾನುಭವಿಗೆ ಅದರ ಅರಿವೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ತಳಮಟ್ಟದ ಜನರಿಗೆ ಸೇವೆ ನೀಡಲು ನೀವು ಮುಂದಾಗಬೇಕು. ಕೃತಕ ಬುದ್ಧಿಮತ್ತೆ(ಎಐ) ಇಂದಿನ ಟ್ರೆಂಡ್ ಆಗಿದ್ದು, ಅದರ ಸದ್ಬಳಕೆಯಿಂದ ಸೇವಾ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಬಹುದೇ ಎಂಬುದನ್ನು ಅರಿತುಕೊಳ್ಳಿ. ತಾಲೂಕಿನಲ್ಲಿ ನೀವು ಭೇಟಿ ನೀಡಲಿರುವ ಆದಿವಾಸಿ ಗಿರಿಜನರ ಹಾಡಿಗಳು, ಅವರ ಜೀವನ, ಸಂಸ್ಕೃತಿ, ಪರಂಪರೆಯ ಅಧ್ಯಯನ ನಿಮ್ಮಿಂದಾಗಲಿ. ಅವರು ಅನುಭವಿಸುತ್ತಿರುವ ನೋವು ಸಂಕಟಗಳಿಗೆ ಪರಿಹಾರ ಒದಗಿಸುವತ್ತ ಸರ್ಕಾರದೊಂದಿಗೆ ಸೇತುವೆಯಾಗಿ ನೀವು ಕಾರ್ಯ ನಿರ್ವಹಿಸುವ ಮನೋಭಾವ ಹೊಂದಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಮಾತನಾಡಿ, ಸರ್ಕಾರದ 34 ಇಲಾಖೆಗಳಲ್ಲಿ ಜಾರಿಯಲ್ಲಿರುವ ಕಾರ್ಯಕ್ರಮದ ಕುರಿತಾದ ಅರಿವು ನಿಮಗಿರಬೇಕು. ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಯದ್ದಾದರೂ ಸಮಾಜ ಕಾರ್ಯಕರ್ತರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ಸಮುದಾಯಕ್ಕೂ ಸರ್ಕಾರಿ ಯೋಜನೆಗಳ ಫಲ ದೊರಕುವಂತೆ ಜನರಿಗೆ ಹತ್ತಿರವಾಗಿ ಕಾರ್ಯ ಮಾಡಬೇಕು ಎಂದರು.
ಒಡನಾಡಿ ಸಂಸ್ಥೆಯ ಪರಶುರಾಮ್ ಮಾತನಾಡಿ, ಸೇವಾ ಕಾರ್ಯ ಮಾಡಲು ದೊಡ್ದ ಮನಸ್ಸು ಬೇಕು. ಕಠಿಣ ಪರಿಸ್ಥಿತಿ ಎದುರಿಸುವ ಛಲ ಬೇಕು. ಹಸಿದವರು, ಶೋಷಿತರ ಹಾಗೂ ನೊಂದವರ ಪರ ನಿಲ್ಲಬೇಕು ಎಂದರು.
ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಭರತವಾಡಿ ಲಕ್ಷ್ಮೀ ಮಾತನಾಡಿ, ನಮ್ಮ ಜನ್ಮಸಿದ್ಧ ಹಕ್ಕುಗಳನ್ನು ಸರ್ಕಾರವೇ ಹರಣ ಮಾಡಿದೆ. ಅರಣ್ಯ ಹಕ್ಕು ಕಾಯ್ದೆ, ಪೇಸಾ ಕಾಯ್ದೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಸರ್ಕಾರಗಳು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವ ಮಂದಿರದ ಶ್ರೀಕಂಠ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಅತುಲ್, ಪ್ರಾಧ್ಯಾಪಕಿ ಡಾ.ಧನೇಶ್ವರಿ ಮಾತನಾಡಿದರು. ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ನಂತರ ಮರದೂರಿಗೆ ಭೇಟಿ ನೀಡಿ, ಐತಿಹಾಸಿಕ ಮಹತ್ವವುಳ್ಳ ಶಿಥಿಲಾವಸ್ಥೆಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ವೀಕ್ಷಿಸಿ, ಸ್ವಚ್ಛತೆ ಕುರಿತ ಬೀದಿನಾಟಕ ಪ್ರದರ್ಶಿಸಿದರು.
ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ದೇವಸ್ಥಾನ ಸುಸ್ಥಿತಿಯಲ್ಲಿಡಲು ಸರ್ಕಾರಕ್ಕೆ ಒತ್ತಡ ಹೇರಲು ಕೈಜೋಡಿಸುವುದಾಗಿ ಶಿಬಿರದ ಮುಖ್ಯಸ್ಥೆ ಡಾ. ಧನೇಶ್ವರಿ ತಿಳಿಸಿದರು.