ಕೆ.ಆರ್.ನಗರ ಪುರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಮಾತನಾಡಿದರು. ಕಛೇರಿ ಲೆಕ್ಕ ಪರಿಶೋಧಕಿ ಸ್ವಪ್ನಾ, ಹಿರಿಯ ಆರೋಗ್ಯ ನಿರೀಕ್ಷಕ ರಾಜೇಂದ್ರ, ಪರಿಸರ ಇಂಜಿನಿಯರ್ ಬಿ.ಎಸ್.ಮಧುಸೂದನ್, ಕಂದಾಯಾಧಿಕಾರಿ ಆರ್.ರಘು ಇನ್ನಿತರರು ಇದ್ದರು.
ಕೆ.ಆರ್.ನಗರ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಸ್ವೀಕಾರ ಮಾಡಿ ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಹೇಳಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾರ್ಷಿಕ ಅನುದಾನ ಹಂಚಿಕೆ ಮಾಡುವಾಗ ಜನರ ಬೇಡಿಕೆ ಮತ್ತು ಅನುಕೂಲಕ್ಕೆ ತಕ್ಕ ಹಾಗೆ ಹಣ ಮೀಸಲಿಡಲಾಗುತ್ತದೆ. ಪ್ರಮುಖ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಮತ್ತು ಸಾರ್ವಜನಿಕರು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದು ಇದರೊಂದಿಗೆ ಎಲ್ಲ ವಿಚಾರಗಳನ್ನು ಪರಿಗಣಿಸಿ ಉತ್ತಮ ಬಜೆಟ್ ಮಂಡಿಸುವ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್ ಮಾತನಾಡಿ, ಪಟ್ಟಣದ ಜನತೆಗೆ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದು ಇದಕ್ಕೆ ಯಾರು ಹೊಣೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದ್ದು ಇದರೊಂದಿಗೆ ಸ್ವಚ್ಛತೆಗೂ ಕಾಣದಂತಾಗಿರುವುದರಿಂದ ಅಧಿಕಾರಿಗಳ ವಿರುದ್ಧ ಜನತೆ ಆಕ್ರೋಶಗೊಂಡಿದ್ದು ಇದನ್ನು ಸರಿಪಡಿಸಿಕೊಂಡು ಬಜೆಟ್‌ನಲ್ಲಿ ಜನಪರ ಕೆಲಸಗಳಿಗೆ ಅಗತ್ಯ ಹಣ ಒದಗಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಕಸಾಪ ಉಪಾಧ್ಯಕ್ಷ ಕೆ.ಎಚ್.ಕೃಷ್ಣಯ್ಯ ಮಾತನಾಡಿ ಪಟ್ಟಣದ ಸಾರ್ವಜನಿಕ ರಸ್ತೆಗಳು ಮತ್ತು 23 ವಾರ್ಡುಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಂಭೀರವಾಗಿ ಚರ್ಚಿಸಿ ಅಗತ್ಯ ಸಲಹೆ ನೀಡಿ ಆಡಳಿತ ಮಂಡಳಿಯ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ಉತ್ತಮ ಬಜೆಟ್ ಮಂಡಿಸಬೇಕೆಂದರು.
ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ಯೋಗಾನಂದ್ ಮಾತನಾಡಿ, ಪಟ್ಟಣದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಸುಳ್ಳು ನೆಪ್ಪ ಹೂಡಿ ಬಾಡಿಗೆ ಪಾವತಿ ಮಾಡುತ್ತಿಲ್ಲ ಮತ್ತು ಪ್ರಭಾವಿ ಉದ್ಯಮಿ ಮತ್ತು ವ್ಯಾಪಾರಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು ಕೂಡಲೇ ವಿದ್ಯುತ್ ಸಂಪರ್ಕ ಕಡಿತ ಮಾಡಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್ ಮಾತನಾಡಿ, ಬಜೆಟ್ ಸಂಬಂಧ ಹಲವು ಸಲಹೆ-ಸೂಚನೆ ನೀಡಿದರು. ಕಛೇರಿ ಲೆಕ್ಕ ಪರಿಶೋಧಕಿ ಸ್ವಪ್ನಾ, ಹಿರಿಯ ಆರೋಗ್ಯ ನಿರೀಕ್ಷಕ ರಾಜೇಂದ್ರ, ಪರಿಸರ ಇಂಜಿನಿಯರ್ ಬಿ.ಎಸ್.ಮಧುಸೂದನ್, ಕಂದಾಯಾಧಿಕಾರಿ ಆರ್.ರಘು, ಕೆ.ಸಿ.ಗಣೇಶ್ ಮತ್ತಿತರರು ಇದ್ದರು.