ಶಿವರಾತ್ರಿ ಮಹೋತ್ಸವದ ಅಂಗವಾಗಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿಶೇಷ ಅಭಿಷೇಕ, ಮಂಗಳಾರತಿ ಸಲ್ಲಿಸಿದರು.
- ಶಿವ ಸ್ಮರಣೆ, ಜಾಗರಣೆ, ಸಂಗೀತ ಮತ್ತು ಭಜನೆ
- ಗಣಪತಿ ಸಚ್ಚಿದಾನಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಶಿವರಾತ್ರಿ ಆಚರಣೆ
ಮೈಸೂರು: ಅವಧೂತ ದತ್ತ ಪೀಠದ 60ನೇ ವರ್ಷದ ಶಿವರಾತ್ರಿ ಮಹೋತ್ಸವದ ಅಂಗವಾಗಿ ಗಣಪತಿ ಸಚ್ಚಿದಾನಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ಶ್ರೀ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಂಗಳಾರತಿ ಸಲ್ಲಿಸಲಾಯಿತು.
ಇದೇ ಸಂದರ್ಭ 24 ಗಂಟೆಗಳ ಕಾಲ ನಿರಂತರ ಶಿವ ಸ್ಮರಣೆ, ಜಾಗರಣೆ, ಸಂಗೀತ ಮತ್ತು ಭಜನೆ ಆಯೋಜಿಸಲಾಗಿತ್ತು.
ತಮಿಳುನಾಡಿನಿಂದ ಆಗಮಿಸಿದ್ದ ಕಲಾವಿದರು ಪಂಚಭೂತಗಳಿಗೆ ಸಂಬಂಧಿಸಿದಂತೆ 11 ಬಗೆಯ ವಿಶೇಷ ಅಲಂಕಾರ ಮಾಡಿದ್ದರು. ಭಕ್ತರ ಅನುಕೂಲಕ್ಕಾಗಿ ಒಳಗೆ ಮತ್ತು ಹೊರಗೆ ಶಿವಲಿಂಗ ದರ್ಶನ ಮತ್ತು ಅಭಿಷೇಕಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹರಿ ಹರರಲ್ಲಿ ಭೇದವಿಲ್ಲ:
ಶಿವ ನಿರ್ವಿಕಾರ ಸ್ವರೂಪಿ. ಆತನು ಭಕ್ತರು ಬೇಡಿದ ರೂಪದಲ್ಲಿ ಕಾಣಿಸಿಕೊಳ್ಳುವ ವಿಶ್ವರೂಪಿ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಂದೇಶ ನೀಡಿದರು.
ಇಡೀ ಪ್ರಪಂಚವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ 3 ಭಾಗ ಒಳಗೊಂಡಿದೆ. ಹರಿ ಮತ್ತು ಹರರಲ್ಲಿ ಯಾವುದೇ ಭೇದವಿಲ್ಲ, ಶಂಕರನಾರಾಯಣ ತತ್ವವೇ ಶ್ರೇಷ್ಠ ಎಂದು ಅವರು ಹೇಳಿದರು.
ಶನಿವಾರ ನಡೆದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಸಂಪೂರ್ಣ ಯಶಗೊಂಡಿದೆ. ಈ ಯಶಸ್ಸಿಗೆ ಆಟೋ ರಿಕ್ಷಾ ಚಾಲಕರು, ಕಾರ್ಯಕರ್ತರು ಮತ್ತು ಭಕ್ತರು ನಡೆಸಿದ ನಿರಂತರ ಪ್ರಚಾರವೇ ಕಾರಣ ಎಂದರು.