ಎಚ್.ಡಿ.ಕೋಟೆ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಬಸವಣ್ಣನವರ 893ನೇ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿದರು. ಧರಣೇಶ್, ಮಹೇಶ್, ನಂಜರಾಜು, ಕಿರಣ್ ಶಿಡ್ಲೇಳ್ಳಿ, ರುದ್ರಪ್ಪ, ಸುಮಾ ಸಂತೋಷ್, ಶಿವಕುಮಾರ್,  
ಮೈಸೂರು

ಸಮಾನತೆಗಾಗಿ ಶ್ರಮಿಸಿದ ವಿಶ್ವಗುರು

ಲೋಕೇಶ್ ಮನು. ಡಿ
ಎಚ್.ಡಿ.ಕೋಟೆ: ವಚನಗಳ ಮೂಲಕ ಅಸಮಾನತೆ ಹೋಗಲಾಡಿಸಿ ನಾವೆಲ್ಲರೂ ಒಂದು ಎಂಬ ಸಮಾನತೆ ಬೀಜ ಬಿತ್ತಿದವರು ವಿಶ್ವ ಗುರು ಬಸವಣ್ಣ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬಸವಣ್ಣನ 893ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಸಂದೇಶ ಸಾರಿದವರು ಬಸವಣ್ಣನವರು. ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ತಂದು ಕೊಟ್ಟ ಮೊದಲ ವ್ಯಕ್ತಿ ಬಸವಣ್ಣ ಎಂದರು.
ಇಂದಿನ ಕ್ಯಾಬಿನೆಟ್, ಸಂಸತ್ತು ಎಂದು ಏನೂ ಕರೆಯುತ್ತೇವೋ ಅದನ್ನು ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು ಎಂದರು.
ಹನ್ನೆರಡನೆಯ ಶತಮಾನವನ್ನು ಕನ್ನಡ ಸಾಹಿತ್ಯದಲ್ಲಿ ಪರಿವರ್ತನೆಯ ಯುಗ ಎಂದು ಕರೆಯಬಹುದು. ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿವರ್ತನೆಯ ಹಾದಿ ನಮಗೆ ಪ್ರಶಂಸನೀಯ. ಇಂತಹ ಮಹನ್ ಪುರಷರು ಸಮಾಜದಲ್ಲಿ ಜನಿಸದೆ ಇದ್ದಿದ್ದರೆ ಇಂದಿಗೂ ನಾವು ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ಮಾಡಬೇಕಾಗಿತ್ತು ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಮೂವರು ಮಹನೀಯರ ವಿಚಾರಧಾರೆಯನ್ನು ಅಧ್ಯಯನ ಮಾಡಲೇ ಬೇಕು. ಅದರಲ್ಲೂ ಡಾ.ಬಿ.ಆರ್ .ಅಂಬೇಡ್ಕರ್ ಅವರ ಸಂವಿಧಾನ, ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿದರೆ ಉನ್ನತ ಮಟ್ಟದ ಅಧಿಕಾರಿಯಾಗಿ ಆಯ್ಕೆ ಆಗಿ ಉತ್ತಮ ಆಡಳಿತ ನಡೆಸಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಬಸವಣ್ಣನವರು ಕೇವಲ ರಾಜ್ಯ, ದೇಶಕ್ಕೆ ಅಲ್ಲ ಅವರು ಇಡೀ ವಿಶ್ವಕ್ಕೆ ಬೇಕಾದ ವಿಶ್ವ ಗುರು. ಹಾಗಾಗಿ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಹೋಗೋಣ ಎಂದರು.
ಸಾಹಿತಿ ಕಿರಣ್ ಶಿಡ್ಲೇಳ್ಳಿ ಮಾತನಾಡಿ, ಸಮಾಜದ ನೋವುಗಳು ಅರ್ಥ ಆಗದೇ ಇದ್ದರೆ ಬಸವಣ್ಣನವರು ಅರ್ಥ ಆಗುವುದಿಲ್ಲ. ಕೇವಲ ಆಚರಣೆ ಮಾಡಿದರೆ ಸಾಲದು ಅನುಸರಣೆ ಮಾಡುವುದು ಮುಖ್ಯ. ಇಂದಿನ ಯುವ ಪೀಳಿಗೆ ಮತ್ತು ವಿದ್ಯಾವಂತರಿಗೆ ಬಸವಣ್ಣನವರ ವಿಚಾರಧಾರೆಯನ್ನು ಅರ್ಥ ಮಾಡಿಸದರೆ ಜಯಂತಿ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಹನ್ನೆರಡನೆಯ ಶತಮಾನದ ಯುಗ ಪುರುಷ ಬಸವಣ್ಣ ಎಂದು ತಿಳಿಸಿದರು.
ಇಒ ಧರಣೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ್, ಶಿಕ್ಷಣ ಇಲಾಖೆ ನಂಜರಾಜು, ಕಿರಣ್ ಶಿಡ್ಲೇಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರುದ್ರಪ್ಪ, ಸುಮಾ ಸಂತೋಷ್, ಶಿವಕುಮಾರ್, ಆಳತ್ತಾಲಹುಂಡಿ ಸುರೇಶ್, ಮಹಾದೇವಪ್ಪ, ಸುರೇಶ್ ಕೆ.ಎ. ಹಳ್ಳಿ, ದೇವ ಮಣಿ, ವಕೀಲ ಮೋಹನ್, ಚಂದ್ರಣ್ಣ, ಮಲ್ಲೇಶ್, ಜಗದೀಶ್, ಮಹಾದೇವಸ್ವಾಮಿ, ಸೋಮಚಾರಿ, ಚಿನ್ನಮ್ಮ, ನಾಗರಾಜು, ವೇದ ಕುಮಾರ್, ನಾಗರಾಜಪ್ಪ ಇದ್ದರು.