ಮೈಸೂರು: ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಂಡು ಕಾರು ಮತ್ತು ಅದರ ದಾಖಲೆಗಳನ್ನು ಬಲವಂತವಾಗಿ ಕಸಿದುಕೊಂಡು ವಂಚಿಸಿರುವ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆನಂದನಗರ ನಿವಾಸಿ ಎಸ್. ಮೋಹನಲಕ್ಷ್ಮೀ ಸಲ್ಲಿಸಿರುವ ದೂರಿನ ಪ್ರಕಾರ, ನಗರದ ರಾಜ್ ಕಾರ್ಸ್‌ನಿಂದ ಟೊಯೋಟಾ ಫಾರ್ಚೂನರ್ ಕಾರನ್ನು 18.78 ಲಕ್ಷ ರೂ.ಗೆ ಖರೀದಿಸಿದ್ದರು. ಇದರಲ್ಲಿ 16.06 ಲಕ್ಷ ರೂ.ವನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸಾಲ ಪಡೆದು ಹಾಗೂ ಉಳಿದ ಮೊತ್ತವನ್ನು ಸ್ವಂತ ಹಣದಿಂದ ಪಾವತಿಸಿದ್ದರು. ನಂತರ ಆರ್‌ಟಿಒ ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ಹೆಸರಿಗೆ ವಾಹನವನ್ನು ನೋಂದಾಯಿಸಿಕೊಂಡಿದ್ದರು.
ದೂರಿನ ಪ್ರಕಾರ, 2020ರ ಅಕ್ಟೋಬರ್ 2ರಂದು ಟೊಯೋಟಾ ಕಂಪನಿಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ ಕಾರನ್ನು ಪರಿಶೀಲಿಸಬೇಕಿದೆ ಎಂದು ಮನೆಗೆ ಬರಲು ಸೂಚಿಸಲಾಗಿತ್ತು. ಮರುದಿನ ಮೂವರು ವ್ಯಕ್ತಿಗಳು ಹಾಗೂ ಕಾರಿನ ಹಿಂದಿನ ಮಾಲೀಕರಾಗಿದ್ದ ಹಂಸವಣೆ ಎಂಬ ಮಹಿಳೆ ಮನೆಗೆ ಬಂದಿದ್ದರು. ತಮ್ಮನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ಅವರು, ಕಾರಿನ ಕುರಿತು ದೂರು ದಾಖಲಾಗಿರುವುದಾಗಿ ಹೇಳಿ, ಕಾರು ಹಾಗೂ ಅದರ ಆರ್‌ಸಿ ದಾಖಲಾತಿಗಳನ್ನು ಬಲವಂತವಾಗಿ ಪಡೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಆ ವಾಹನವನ್ನು ಹಂಸವಣೆ ಅವರೇ ಬಳಕೆ ಮಾಡುತ್ತಿರುವುದು ತಿಳಿದುಬಂದಿದೆ. ವಂಚಿಸುವ ಉದ್ದೇಶದಿಂದ ತಮ್ಮ ಹೆಸರಿನಲ್ಲಿದ್ದ ಕಾರನ್ನು ಕಸಿದುಕೊಂಡು ಅಕ್ರಮವಾಗಿ ಬಳಕೆ ಮಾಡುತ್ತಿರುವ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮೋಹನಲಕ್ಷ್ಮೀ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ಪಿಸಿಆರ್ ಆದೇಶದಂತೆ ಸರಸ್ವತಿಪುರಂ ಪೊಲೀಸರು ಕಳವು, ಸುಲಿಗೆ ಮತ್ತು ವಂಚನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.