ಹುಣಸೂರು ನಗರದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ತಾಪಂ ಇಒ ಕೆ.ಹೊಂಗಯ್ಯ ಉದ್ಘಾಟಿಸಿದರು. ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್, ರಾಜೇಶ್, ರಾಜೇಶ್ವರಿ ಇತರರಿದ್ದಾರೆ.
ಹುಣಸೂರು: ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ವತಿಯಿಂದ ಜಾರಿಗೊಂಡಿರುವ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಸೋಮವಾರ ಚಾಲನೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆದಿವಾಸಿ ಬುಡಕಟ್ಟು ಸಮುದಾಯದ ಸಮಗ್ರ ಏಳಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿವೆ. ಆಬಾ ಜನ ಜಾತೀಯ ಉತ್ಕರ್ಷ ಅಭಿಯಾನದಡಿ ಗಿರಿಜನ ಹಾಡಿಗಳಿಗೆ ಅಧಿಕಾರಿಗಳ ತಂಡ ತೆರಳಿ ಅವರಿಗೆ ಅವಶ್ಯವಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್‌ನಿಂದ ಆರಂಭಗೊಂಡು ಗ್ರಾಪಂ ವ್ಯಾಪ್ತಿಯ ಎಲ್ಲ ಇಲಾಖೆಗಳಿಂದ ಅವಶ್ಯವಿರುವ ದಾಖಲೆಗಳನ್ನು ವಿತರಿಸುವುದು ಮತ್ತು ಸರ್ಕಾರದ ಯೋಜನಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಒಂದು ವಾರ ಕಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿಯಾನ ಆಯೋಜನೆಗೊಂಡಿದೆ. ಕಾಡಿನಿಂದ ಹೊರಬಂದು ಮುಖ್ಯವಾಹಿನಿಗೆ ಸೇರಿ ಬದುಕಬೇಕೆನ್ನುವ ಮೂಲ ನಿವಾಸಿಗಳನ್ನು ನಮ್ಮಂತೆಯೇ ನಮ್ಮೊಳಗೆ ಒಂದಾಗಿಸಿಕೊಳ್ಳುವತ್ತ ನಾವೆಲ್ಲರೂ ಕ್ರಮ ವಹಿಸೋಣ ಎಂದರು.
ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್ ಮಾತನಾಡಿ, ಅಭಿಯಾನವು ಇಂದಿನಿಂದ ಆರಂಭಗೊಂಡಿದ್ದು, ತಾಲೂಕಿನ ವೀರನಹೊಸಹಳ್ಳಿ, ಕೊಳವಿಗೆ ಮತ್ತು ಕೊಟ್ಟಿಗೆ ಕಾವಲ್ ಹಾಡಿಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 19ರಂದು ಉಡುವೆಪುರ (ಅಯ್ಯನಕೆರೆ), ಮೇ 20ರಂದು ಶೆಟ್ಟಳ್ಳಿ, ದಾಸನಪುರ, ತರೀಕಲ್ ರಂಗಯ್ಯನಕೊಪ್ಪಲು, ಮೇ 21ರಿಂದ 23ರವರೆಗೆ ನೇರಳಕುಪ್ಪೆ ಗ್ರಾಪಂ, ವೀರನಹೊಸಹಳ್ಳಿ ಆಶ್ರಮ ಶಾಲೆ, ಗುರುಪುರ ಗ್ರಾಪಂ ವ್ಯಾಪ್ತಿಯ ಕುರುಬರಹೊಸಹಳ್ಳಿ (ನಾಗಪುರ 1, 4 ಮತ್ತು 5ನೇ ಘಟಕ), ಮೇ 24ರಂದು ನಗರದ ಗಿರಿಜನ ಕಲ್ಯಾಣಾಧಿಕಾರಿಗಳ ಕಚೇರಿ ಮತ್ತು ಮೇ 25ರಂದು ವಾರಂಚಿ ಮತ್ತು ಗುರುಪುರಗಳಲ್ಲಿ ಆಯೋಜನೆಗೊಂಡಿದೆ. ಆರೋಗ್ಯ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂಯೋಜನಾಧಿಕಾರಿ ರಾಜೇಶ್, ಲೆಕ್ಕ ಸಹಾಯಕಾಧಿಕಾರಿ ಹರಿಣಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.