ವಿಜಯನಗರದಲ್ಲಿರುವ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಗೆ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಚಾಲನೆ ನೀಡಿದರು. ಡಾ. ಮಾನಸ, ಅಂಶಿ ಪ್ರಸನ್ನಕುಮಾರ್, ಚಂದ್ರಶೇಖರ್ ಇನ್ನಿತರರಿದ್ದರು 
ಮೈಸೂರು

ಪ್ರೀತಿ ಬೆಳೆಯಲು ಸಾಹಿತ್ಯಾಭಿರುಚಿ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಮನೆಗೊಂದು ಗ್ರಂಥಾಲಯ ಯೋಜನೆಗೆ ಚಾಲನೆ
  • ಗ್ರಂಥಾಲಯ ಸಂಸ್ಕೃತಿ ಉಳಿಯಬೇಕು
  • ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 25 ಗ್ರಂಥಾಲಯಗಳ ಆರಂಭಕ್ಕೆ ಸಿದ್ಧತೆ
 ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯ 
ವಿಜಯವಾಣಿ ಸುದ್ದಿಜಾಲ ಮೈಸೂರು 
ಜನರಲ್ಲಿ ಸಾಹಿತ್ಯ ಅಭಿರುಚಿ ಬೆಳೆಯಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ವಿಜಯನಗರದ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಅಭಿರುಚಿಯಿಂದ ಜ್ಞಾನ ಹೆಚ್ಚುತ್ತದೆ. ಇದರಿಂದ ಸಂಘರ್ಷ, ದ್ವೇಷ ಮಾಯವಾಗಿ ಪರಸ್ಪರ ಪ್ರೀತಿ, ಸಾಮರಸ್ಯ, ಸೌಹಾರ್ದತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಹಿತ್ಯ ಕೃತಿ ಓದುತ್ತಿದ್ದೇನೆ. ಯುವರಾಜ ಕಾಲೇಜು, ಎಂಡಿಟಿಬಿಸಿ ಕಾಲೇಜಿನಲ್ಲಿ ಓದುವಾಗ ಪಠ್ಯಕ್ಕಿಂತ ಸಾಹಿತ್ಯ ಕೃತಿ ಓದಿದ್ದೆ ಹೆಚ್ಚು. ನಂತರ ದಾವಣಗೆರೆಯಲ್ಲಿ ಮೆಡಿಕಲ್ ಸೀಟು ಸಿಕ್ಕಿದ್ದರಿಂದ ಮೈಸೂರಿನಲ್ಲಿ ಹೆಚ್ಚು ಓದಲಾಗಲಿಲ್ಲ. ಆದರೆ ಎಲ್ಲೆಡೆ ಹೋದಾಗ ಸಾಕಷ್ಟು ಪುಸ್ತಕ ತರುತ್ತಿದ್ದೆ. ಇದರಿಂದ ಮನೆಯಲ್ಲಿ ಸಾವಿರಾರು ಪುಸ್ತಕಗಳಿವೆ ಎಂದರು.
ಅಂಬೇಡ್ಕರ್ ಅವರು ಸುಮಾರು ಐವತ್ತು ಸಾವಿರ ಪುಸ್ತಕ ಓದಿ ಜ್ಞಾನಿಯಾದರು. ಹೀಗಾಗಿ ಅವರ ಹೆಸರಿನಲ್ಲಿ ಇಡೀ ಪ್ರಪಂಚದಾದ್ಯಂತ ವಿಶ್ವಜ್ಞಾನಿ ದಿನ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.
ಹಿರಿಯ ಸಾಹಿತಿ ಡಾ.ಸಿಪಿಕೆ ಮಾತನಾಡಿ, ಗ್ರಂಥಾಲಯ ಸಂಸ್ಕೃತಿ ಉಳಿಯಬೇಕು ಹಾಗೂ ಬೆಳೆಯಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಜನರಲ್ಲಿ ಓದುವ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದಲೇ ಮನೆಗೊಂದು ಗ್ರಂಥಾಲಯ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿಗಳನ್ನು ರಚಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 25 ಗ್ರಂಥಾಲಯಗಳ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ ಚಾಲನೆ ನೀಡಲಾಗಿದೆ ಎಂದರು.
ಇದಕ್ಕಾಗಿ ವಿಭಾಗವಾರು ನಂಜನಗೂಡು ತಿರುಮಲಾಂಬ, ಡಾ.ಹಾ.ಮಾ. ನಾಯಕ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಗಳಗನಾಥ ಅವರ ಹೆಸರಿನಲ್ಲ ಪ್ರಶಸ್ತಿಗಳನ್ನು ಪ್ರತಿವರ್ಷ ಪ್ರಾಧಿಕಾರದಿಂದ ನೀಡಲಾಗುವುದು. ಮನೆಗೊಂದು ಗ್ರಂಥಾಲಯ ಯೋಜನೆಯಿಂದ ಅಂಗಡಿಯಿಂದ ಹಿಡಿದು ಪುಸ್ತಕಗಳ ಮುದ್ರಣಕಾರರವರೆಗೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಾಗೃತ ಸಮಿತಿಯ ಸದಸ್ಯರಾದ ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು, ದೇವರಾಜ್ ಪಿ. ಚಿಕ್ಕಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್  ಪಾಟೀಲ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸುಗಮ ಸಂಗೀತಗಾರ ಪ್ರೊ.ಎಸ್. ಮಲ್ಲಣ್ಣ, ಪ್ರೊ.ಕೆ.ಆರ್. ಪ್ರೇಮಲೀಲಾ, ಕನ್ನಡ ಹೋರಾಟಗಾರ ಬಿ.ಎ. ಶಿವಶಂಕರ್, ಕೋಟಹುಂಡಿ ಮಹದೇವ್ ಇನ್ನಿತರರಿದ್ದರು