ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಭಾನುವಾರ ತಾಯಿ ಹಾಲಿನ ಬ್ಯಾಂಕನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಶರಣ ಪ್ರಕಾಶ ಆರ್.ಪಾಟೀಲ್, ಟಿ.ಎಸ್.ಶ್ರೀವತ್ಸ, ಪಿ.ಎಂ.ನರೇಂದ್ರಸ್ವಾಮಿ, ಪ್ರೊ.ಎಸ್.ಪಿ.ಮಂಜುನಾಥ್ ಇದ್ದರು. 
ಮೈಸೂರು

ಜಿಲ್ಲೆಗೊಂದು ಸೂಪರ್ ಸ್ಷೆಷಾಲಿಟಿ, ಕ್ಯಾನ್ಸರ್ ಆಸ್ಪತ್ರೆ

ರಾಜ್ಯ ಸರ್ಕಾರವು ಜಿಲ್ಲೆಗೊಂದು ಸೂಪರ್ ಸ್ಷೆಷಾಲಿಟಿ, ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ್ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಕ್ಯಾತ್‌ಲ್ಯಾಬ್, ಆತ್ಯಾಧುನಿಕ ಎಐ ಆಧಾರಿತ ಸಿಟಿ ಸ್ಕ್ಯಾನರ್, ಉನ್ನತೀಕರಿಸಿದ ಎಂಆರ್‌ಐ, ನರಶಸ್ತ್ರ ಚಿಕಿತ್ಸಾ ಸೂಕ್ಷ್ಮದರ್ಶಕ ಯಂತ್ರ ಹಾಗೂ ತಾಯಿ ಹಾಲಿನ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ರಾಜ್ಯದ ಹಲವೆಡೆ ಸ್ಥಾಪನೆಯಾಗಿವೆ. ಮುಂದಿನ ಐದು-ಹತ್ತು ವರ್ಷಗಳಲ್ಲಿ ಎಲ್ಲರಿಗೂ ಉನ್ನತ ಸಾರ್ವತ್ರಿಕ ಸೇವೆಯೂ ಸಿಗುವಂತೆ ಮಾಡುವುದೇ ಸರ್ಕಾರದ ಗುರಿಯಾಗಿದೆ ಎಂದರು.
ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ. ಈಗಾಗಲೇ ಈ ಮಾರ್ಗದಲ್ಲಿ ಶೇ.70 ಕ್ರಮಿಸಿದ್ದೇವೆ. ಸುಮಾರು 22 ಕಾಲೇಜು ಸ್ಥಾಪನೆ ಮಾಡಿದ್ದೇವೆ. ಇದರಿಂದಾಗಿ ಕಾಲೇಜು ಸ್ಥಾಪನೆಯಾಗಿರುವ ಜಿಲ್ಲೆಗಳಲ್ಲಿ ಇರುವ ಬಡ-ಮಧ್ಯಮ ವರ್ಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ-ಚಿಕಿತ್ಸೆ ದೊರಕುತ್ತಿದೆ ಎಂದರು.
ದೇಶದಲ್ಲಿ ವರ್ಷಕ್ಕೆ 1.15 ಲಕ್ಷ ಮೆಡಿಕಲ್ ಸೀಟುಗಳು ಲಭ್ಯವಿದ್ದು, ಇದರಲ್ಲಿ ಕರ್ನಾಟಕ ಒಂದರಲ್ಲಿಯೇ 14 ಸಾವಿರ ಸೀಟುಗಳಿವೆ. 71 ಮೆಡಿಕಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ದೇಶ ಹಾಗೂ ಪ್ರಪಂಚಕ್ಕೆ ಗುಣಮಟ್ಟದ ವೈದ್ಯರು ಹಾಗೂ ಸಿಬ್ಬಂದಿಯನ್ನು ನೀಡುತ್ತಿವೆ. ವೈದಕೀಯ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಗುಣಮಟ್ಟದ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯವು ವೈದ್ಯಕೀಯ ಹಬ್ ಆಗಿದ್ದು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸರ್ಕಾರಿ ಸೇವೆಯೂ ತಲುಪದ ಜಾಗಗಳಲ್ಲಿ ಖಾಸಗಿ ಸಂಸ್ಥೆಯವರು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು ತೆರೆದು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕ, ಕರಾವಳಿ, ದಕ್ಷಿಣ ಭಾಗದಲ್ಲಿ ಹತ್ತು-ಹಲವು ಸಂಸ್ಥೆಗಳು ಮುಂಚೂಣಿಯಲ್ಲಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ತಾಯಿ ಹಾಲಿನ ಬ್ಯಾಂಕ್ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿ, ತಾಯಿಯ ಹಾಲು ಅಮೃತಕ್ಕೆ ಸಮಾನ. ನವಜಾತ ಶಿಶುವಿಗೆ ಬಹಳ ಅತ್ಯಗತ್ಯ. ಆದ್ದರಿಂದ ಎದೆ ಹಾಲು ನೀಡುವ ದಾನಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಏಕೆಂದರೆ ಶೇ.30 ಮಕ್ಕಳು ಅವಧಿ ಪೂರ್ವ ಪ್ರಸವದಲ್ಲಿ ಜನಿಸುತ್ತಿವೆ. ಇಂತಹ ಮಕ್ಕಳಿಗೆ ತಾಯಿ ಹಾಲು ಬೇಕೇ ಬೇಕು. ಇದಕ್ಕಾಗಿ ಇಂತಹ ಬ್ಯಾಂಕ್‌ಗಳಿಂದ ಅನುಕೂಲವಾಗುತ್ತದೆ ಎಂದರು.
ತಾಯಿಯ ಹಾಲು ಸಮರ್ಪಕವಾಗಿ ದೊರಕದೆ, ಬೇರೆ ಹಾಲು, ಬೇರೆ ಉತ್ಪನ್ನಗಳನ್ನು ನೀಡುವುದರಿಂದ ಶೇ.8 ಶಿಶುಗಳು ಮರಣ ಹೊಂದುತ್ತಿವೆ. ಆದ್ದರಿಂದ ತಾಯಂದಿರಿಗೆ ಅರಿವು ಮೂಡಿಸಿ, ಇಂತಹ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಬೇಕು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಟಿ.ಎಸ್.ಶ್ರೀವತ್ಸ, ಪಿ.ಎಂ.ನರೇಂದ್ರಸ್ವಾಮಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಪಿ.ಮಂಜುನಾಥ್, ತಾಂತ್ರಿಕ ವಿಭಾಗದ ನಿರ್ದೇಶಕ ಪ್ರೊ.ಬಿ.ಸುರೇಶ್, ಜೆಎಸ್‌ಎಸ್-ಎಎಚ್‌ಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಡಾ.ಸಿ.ಪಿ.ಮಧು ಇದ್ದರು.