ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮದಲ್ಲಿ ಡಾ.ನಯಾಜ್ ಪಾಷಾ, ಡಾ.ಹರೀಶ್ ಪ್ರಶಾಂತ್, ದಿನೇಶ್, ಡಾ.ಹನುಮಂತ ಆಚಾರ್ಯ ಜೋಶಿ ಇದ್ದರು.
- ಯಾವುದೇ ದೇಶ ಮುಂದುವರಿಯಬೇಕಾದರೆ ಅಲ್ಲಿನ ಜನ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ
- ಔಷಧಗಳ ಸಂಶೋಧನೆ ಮತ್ತು ಸಂಸ್ಕರಣೆಗೆ ತುಂಬಾ ಅವಕಾಶಗಳಿವೆ
ಮೈಸೂರು: ವಿದ್ಯಾರ್ಥಿಗಳು ದೇಶದ ಪ್ರಗತಿಗೋಸ್ಕರ ಆರೋಗ್ಯ ಕ್ಷೇತ್ರದಲ್ಲಿ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಕೆ.ಆರ್.ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ. ನಯಾಜ್ ಪಾಷಾ ಹೇಳಿದರು.
ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ದೇಶ ಮುಂದುವರಿಯಬೇಕಾದರೆ ಅಲ್ಲಿನ ಜನ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಭಾರತದ ಆರೋಗ್ಯ ಕ್ಷೇತ್ರ ಹಲವಾರು ಸವಾಲುಗಳಿಂದ ಕೂಡಿದ್ದು, ಔಷಧಗಳ ಸಂಶೋಧನೆ ಮತ್ತು ಸಂಸ್ಕರಣೆಗೆ ತುಂಬಾ ಅವಕಾಶಗಳಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಮತ್ತು ತರಬೇತಿ ಪಡೆಯಬೇಕು ಎಂದು ಹೇಳಿದರು.
ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಹರೀಶ್ ಪ್ರಶಾಂತ್ ಮಾತನಾಡಿ, ವಿಜ್ಞಾನಿಗಳು ದೇಶದ ಆರೋಗ್ಯ ಮತ್ತು ಆಹಾರ ಕ್ಷೇತ್ರದಲ್ಲಿ ಇನ್ನೂ ಸಂಶೋಧನೆಗಳನ್ನು ಮಾಡಬೇಕಾದ ಅವಶ್ಯಕತೆ ಇದೆ. ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಸಂಶೋಧನೆಗಾಗಿ ಫಾರ್ಮಸಿ ಪದವೀಧರರ ಅವಶ್ಯಕತೆ ಇನ್ನೂ ಹೆಚ್ಚಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮ ಶಿಕ್ಷಣದ ಜತೆಗೆ ಸಂಶೋಧನೆಯಲ್ಲೂ ತೊಡಗಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಹಲವಾರು ಸಂಶೋಧನಾ ಪ್ರಬಂಧ ಮತ್ತು ಪೇಟೆಂಟ್‌ಗಳನ್ನು ಪಡೆದಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ದಿನೇಶ್, ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತ ಆಚಾರ್ಯ ಜೋಶಿ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಫಾರ್ಮಸಿ ಪ್ರಮಾಣ ಬೋಧಿಸಲಾಯಿತು.