ಆಧ್ಯಾತ್ಮಿಕ ಕಾರ್ಯಕ್ರಮ 
ಮೈಸೂರು

ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಿಂದ ಆಧ್ಯಾತ್ಮಿಕ ಕಾರ್ಯಕ್ರಮ

ಕ್ರಿಯಾ ಯೋಗ ಧ್ಯಾನ, ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನ

ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ವತಿಯಿಂದ ವಿರಾಜಪೇಟೆಯ ಶ್ರೀ ಕಾವೇರಿ ಆಶ್ರಮದಲ್ಲಿ ಮಂಗಳವಾರ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರೀ ಶ್ರೀ ಪರಮಹಂಸ ಯೋಗಾನಂದರು 1917ರಲ್ಲಿ ಸ್ಥಾಪಿಸಿದ ವೈಎಸ್ಎಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಾಚೀನ ವೈಜ್ಞಾನಿಕ ಕ್ರಿಯಾ ಯೋಗ ಧ್ಯಾನವನ್ನು ಪರಿಚಯಿಸುವುದು ಹಾಗೂ ಅಂತರಂಗದ ಶಾಂತಿ, ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅನುಕೂಲಕರ ವಾತಾವರಣ ಕಲ್ಪಿಸುವುದು ಉದ್ದೇಶವಾಗಿದೆ.

ಬೆಳಿಗ್ಗೆ 9.30ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ವೈಎಸ್ಎಸ್‌ನ ಹಿರಿಯ ಸನ್ಯಾಸಿಗಳ ನೇತೃತ್ವದಲ್ಲಿ ಮಾರ್ಗದರ್ಶಿತ ಧ್ಯಾನ, ಭಜನೆಗಳು ಹಾಗೂ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಕ್ರಿಯಾ ಯೋಗ ಕಲಿಯಲು ಮತ್ತು ವೈಎಸ್ಎಸ್ ಪಾಠಗಳಿಗೆ ನೋಂದಾಯಿಸಿಕೊಳ್ಳಲು ಆಸಕ್ತರಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ವೈಎಸ್ಎಸ್ ಪರಂಪರೆಯಲ್ಲಿ ಬೋಧಿಸಲಾಗುವ ಕ್ರಿಯಾ ಯೋಗವು ಅಂತರಂಗದ ಶಾಂತಿ, ದೈವಿಕ ಆನಂದ, ಜ್ಞಾನ ಹಾಗೂ ವ್ಯಕ್ತಿಯೊಳಗಿನ ದೈವಿಕ ಚೈತನ್ಯದ ಅರಿವನ್ನು ಬೆಳೆಸುವ ಧ್ಯಾನ ಪದ್ಧತಿಯಾಗಿದೆ. ಮಹಾವತಾರ್ ಬಾಬಾಜಿ ಅವರಿಂದ ಆಧುನಿಕ ಯುಗಕ್ಕೆ ಬಂದ ಕ್ರಿಯಾ ಯೋಗವನ್ನು ಪರಮಹಂಸ ಯೋಗಾನಂದರು ವಿಶ್ವದಾದ್ಯಂತ ಪರಿಚಯಿಸಿದರು ಎಂದು ಸಂಸ್ಥೆ ತಿಳಿಸಿದೆ.

ಯೋಗಾನಂದರ ಪ್ರಸಿದ್ಧ ಕೃತಿ ‘ಯೋಗಿಯ ಆತ್ಮಕಥೆ’ ಮೂಲಕವೂ ಕ್ರಿಯಾ ಯೋಗ ಹಾಗೂ ಭಾರತದ ಪ್ರಾಚೀನ ಆಧ್ಯಾತ್ಮಿಕ ಪರಂಪರೆ ವಿಶ್ವದಾದ್ಯಂತ ಪರಿಚಿತವಾಗಿದೆ.

ಕಾರ್ಯಕ್ರಮದ ಅಂಗವಾಗಿ ಆಧ್ಯಾತ್ಮಿಕ ಪುಸ್ತಕಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ. ಭಾಗವಹಿಸುವವರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 98456 53196, 82963 35455, 98863 75157