ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸಂಧಿವಾತ ದಿನಾಚರಣೆಯಲ್ಲಿ ಸಾರ್ವಜನಿಕರಿಗಾಗಿ ವಿಶೇಷ ರಿಯಾಯಿತಿ ದರದ ಆರೋಗ್ಯ ತಪಾಸಣಾ ಪ್ಯಾಕೇಜ್‌ಅನ್ನು ಬಿಡುಗಡೆಗೊಳಿಸಲಾಯಿತು. ಡಾ.ಸಿ.ಪಿ.ಮಧು, ಆರ್.ಮಹೇಶ್, ಡಾ.ಆರ್.ಸುಬ್ರಮಣಿಯನ್, ಡಾ. ಶಿವಪ್ರಸಾದ್ ಇತರರಿದ್ದರು. 
ಮೈಸೂರು

ಸಂಧಿವಾತ ಸಮಸ್ಯೆ ತಪ್ಪು ಕಲ್ಪನೆ ಬೇಡ

- ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ.ಮಧು ಹೇಳಿಕೆ

ಕೀಲುನೋವು, ಸಂಧಿವಾತ ಸಮಸ್ಯೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಂಧಿವಾತ ದಿನವನ್ನು ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಬುಧವಾರ ಆಚರಿಸಲಾಯಿತು.

ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ.ಮಧು ಮಾತನಾಡಿ, ಸಂಧಿವಾತ ಎಂದರೆ ಕೇವಲ ವೃದ್ಧರನ್ನಷ್ಟೇ ಕಾಡುವ ಕಾಯಿಲೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ, ಬದಲಾದ ಜೀವನಶೈಲಿಯಿಂದಾಗಿ ಯುವ ಪೀಳಿಗೆಯೂ ಈ ಸಮಸ್ಯೆಗೆ ತುತ್ತಾಗುತ್ತಿದೆ. ಕೀಲುಗಳ ಊತ, ದೀರ್ಘಕಾಲದ ನೋವು ಮತ್ತು ಕೀಲುಗಳು ಬಿಗಿಯಾಗುವುದು ಇದರ ಪ್ರಮುಖ ಲಕ್ಷಣ. ಆರಂಭಿಕ ಹಂತದಲ್ಲೇ ರೋಗ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕೀಲುಗಳ ಶಾಶ್ವತ ಹಾನಿ ತಡೆಯಬಹುದು. ರೋಗಿಗಳು ತಮ್ಮ ಸಾಮಾನ್ಯ ಜೀವನ ಮುಂದುವರಿಸಬಹುದು ಎಂದು ತಿಳಿಸಿದರು.

ಕ್ಲಿನಿಕಲ್ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗದ ಹೊಸ ಸೆಮಿನಾರ್ ಕೊಠಡಿ ಉದ್ಘಾಟಿಸಿದರು.

ಈ ವಿಭಾಗವು 2011ರಲ್ಲಿ ಆರಂಭಗೊಂಡು, ಈಗ ಪ್ರಾದೇಶಿಕ ರೆಫರಲ್ ಕೇಂದ್ರವಾಗಿ ರೂಪುಗೊಂಡಿದೆ. ಮೈಸೂರು, ನೆರೆಯ ಜಿಲ್ಲೆಗಳಾದ ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಸೇರಿದಂತೆ ವಿವಿಧ ಪ್ರದೇಶಗಳಿಂದ ರೋಗಿಗಳು ಆಗಮಿಸುತ್ತಿದ್ದು, ಪ್ರತಿ ತಿಂಗಳು ಸುಮಾರು 1,200 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಭಾಗದ ಮಟ್ಟದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿ, ಜೆಎಸ್‌ಎಸ್ ವೈದ್ಯಕೀಯ ಕಾಲೇಜು 2026-27ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ಇಮ್ಯುನಾಲಜಿ ಮತ್ತು ರುಮಾಟಾಲಜಿಯಲ್ಲಿ ಡಿಎಂ (ಆಒ) ಕೋರ್ಸ್‌ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮೋದನೆ ಪಡೆದ ರಾಜ್ಯದ ಮೊದಲ ಕಾಲೇಜು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಪಾತ್ರವಾಗಿದೆ.

ಸಂಧಿವಾತ ಆಚರಣೆಯ ಅಂಗವಾಗಿ ಸಂಧಿವಾತ ಮತ್ತು ರುಮಾಟಿಕ್ ಕಾಯಿಲೆಗಳಿಂದ ಬಳಲುತ್ತಿರುವ ಆಯ್ದ ರೋಗಿಗಳಿಗೆ ಉಚಿತ ಔಷಧ ಕಿಟ್‌ಗಳನ್ನು ವಿತರಿಸಲಾಯಿತು. ಸಾರ್ವಜನಿಕರಿಗಾಗಿ ವಿಶೇಷ ರಿಯಾಯಿತಿ ದರದ ಆರೋಗ್ಯ ತಪಾಸಣಾ ಪ್ಯಾಕೇಜ್ ಬಿಡುಗಡೆ ಮಾಡಲಾಯಿತು.

ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಕ್ಲಿನಿಕಲ್ ಇಮ್ಯುನಾಲಜಿ ಹಾಗೂ ರುಮಟಾಲಜಿ ವಿಭಾಗದ ಮುಖ್ಯಸ್ಥ ಡಾ. ಆರ್.ಸುಬ್ರಮಣಿಯನ್, ಸಹ ಪ್ರಾಧ್ಯಾಪಕ ಡಾ. ಶಿವಪ್ರಸಾದ್, ಸಹಾಯಕ ಪ್ರಾಧ್ಯಾಪಕ ಡಾ. ಮಹಾಬಲೇಶ್ವರ್ ಇತರರಿದ್ದರು.