ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಯಿಂದ ಆಯೋಜಿಸಿರುವ ‘ಚಿಂತನ ಮಂಥನ-50’ನೇ ಸಂಚಿಕೆ ಕಾರ್ಯಕ್ರಮದಲ್ಲಿ ಎಚ್.ಜಿ.ಬಸವಲಿಂಗಪ್ಪ, ಚಿನ್ನಸ್ವಾಮಿ ವಡ್ಡಗೆರೆ, ಕಿರಗಸೂರು ಪುರುಷೋತ್ತಮ್, ಲಕ್ಷ್ಮೀಕಿರಣ್, ರಾಜೇಶ್ ಇತರರಿದ್ದರು. 
ಮೈಸೂರು

ರಾಮಕೃಷ್ಣ ಸಾಂಸ್ಕೃತಿಕ, ಕ್ರೀಡಾಸಂಸ್ಥೆಯಿಂದ ಮನ ತಣಿಸಿದ ಸುಗಮ ಸಂಗೀತ ಗಾಯನ

ಪ್ರಮುಖ ಮುಖ್ಯಾಂಶಗಳು

  • ಸಂಗೀತ, ಉಪನ್ಯಾಸದಿಂದ ಜನರಲ್ಲಿ ದೈನಂದಿನ ಬದುಕಿಗೆ ತಿಳಿವಳಿಕೆ ಹೆಚ್ಚಾಗಲಿದೆ
  • ನಾಗರಿಕರಲ್ಲಿ ವೈಚಾರಿಕ, ವೈಜ್ಞಾನಿಕ ಅರಿವು ಮಾಡಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿ
ಮೈಸೂರು:ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾಸಂಸ್ಥೆಯ ಚಿಂತನ ಮಂಥನ 50ನೇ ಸಂಚಿಕೆಯ ಅಂಗವಾಗಿ ಕಿರಗಸೂರು ಪುರುಷೋತ್ತಮ್ ಮತ್ತು ತಂಡದವರಿಂದ ಸುಗಮ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ರಾಮಕೃಷ್ಣ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಳುಗರು ಭಾವಗೀತೆ, ಜನಪದಗೀತೆ, ರಂಗಗೀತೆಗಳ ಗಾಯನದಲ್ಲಿ ಮಿಂದೆದ್ದರು.
ಚಿಂತನ ಮಂಥನ 50ನೇ ಸಂಚಿಕೆ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಎಚ್.ಜಿ.ಬಸವಲಿಂಗಪ್ಪ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ರಾಮಕೃಷ್ಣ ನಗರ ಬಡಾವಣೆ ನಾಗರಿಕರಿಗಾಗಿ ಉಪನ್ಯಾಸ ಏರ್ಪಡಿಸಿಕೊಂಡು ಬರಲಾಗುತ್ತಿದೆ. 2022ರಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಕಾರ್ಯಕ್ರಮದಲ್ಲಿ ಚಿಂತಕರು, ಸಾಹಿತಿಗಳು, ವೈದ್ಯರು, ಸಂಗೀತಗಾರರು ಉಪನ್ಯಾಸ ನೀಡುತ್ತಾ ಬಂದಿದ್ದಾರೆ ಎಂದರು.
ಇಂತಹ ಕಾರ್ಯಕ್ರಮ ನಡೆಸುವುದರಿಂದ ಜನರಲ್ಲಿ ದೈನಂದಿನ ಬದುಕಿಗೆ ತಿಳಿವಳಿಕೆ ಹೆಚ್ಚಾಗಲಿದೆ. ಬಡಾವಣೆಯ ನಾಗರಿಕರು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಒಟ್ಟಾಗಿ ನೆಮ್ಮದಿಯಿಂದ ಬದಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಸಂಸ್ಥೆಯ ನಿರ್ದೇಶಕ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿಂತನ ಮಂಥನ ನಡೆಸಿಕೊಂಡು ಬರಲಾಗುತ್ತಿದೆ. ನಾಗರಿಕರಲ್ಲಿ ವೈಚಾರಿಕ, ವೈಜ್ಞಾನಿಕ ಅರಿವು ಮಾಡಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ. ನಗರಕ್ಕೆ ಮಾದರಿಯಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಅಧ್ಯಕ್ಷ ಬಸವಲಿಂಗಪ್ಪ ಅವರ ಶ್ರಮ, ತಾಳ್ಮೆ ಶ್ಲಾಘನೀಯ ಎಂದರು.
ಆರೋಗ್ಯ ಶಿಬಿರಗಳು, ನಾಡಿನ ಸಾಂಸ್ಕೃತಿಕ ಹಬ್ಬಗಳ ಆಚರಣೆ ಜತೆಗೆ ಹಿರಿಯ ನಾಗರಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಧ್ಯಕ್ಷ ಬಸವಲಿಂಗಪ್ಪ ಅವರು ಕಾರ್ಯಕ್ರಮ ರೂಪಿಸಿ ಎಲ್ಲರನ್ನೂ ಒಗ್ಗಟ್ಟಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಸುಸಜ್ಜಿತವಾದ ಷಟಲ್ ಕೋರ್ಟ್ ಕ್ರೀಡಾಂಗಣ ನಿರ್ಮಿಸಿ ಸದಸ್ಯರ ದೈಹಿಕ ಆರೋಗ್ಯ ಕಾಪಾಡುವುದರ ಜತೆಗೆ ಮಹಿಳೆಯರಿಗಾಗಿ ಪ್ರತಿನಿತ್ಯ ಯೋಗ ತರಗತಿ ನಡೆಸುವ ಮೂಲಕ ಮಹಿಳೆಯರಲ್ಲಿ ಮಾನಸಿಕ ದೃಢತೆ ಬೆಳೆಸುತ್ತಿದ್ದಾರೆ. ಗ್ರಂಥಾಲಯವನ್ನು ಮಾಡಿದ್ದು ಜ್ಞಾನದ ಹಸಿವು ನೀಗಿಸುತ್ತಿದ್ದಾರೆ. ಚಿಂತನ ಮಂಥನದ ಮೂಲಕ ಹಿರಿಯ ನಾಗರಿಕರಲ್ಲಿ ಅರಿವು ಉಂಟುಮಾಡುತ್ತಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎನ್.ರಾಜೇಶ್ ಸ್ವಾಗತಿಸಿದರು. ನಗರಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್ ಇತರರಿದ್ದರು.