ಯೋಗ ದಿನಾಚರಣೆಯ ಅಂಗವಾಗಿ ನಗರದ ಮಹಾರಾಜ ಕ್ರಿಕೆಟ್ ಮೈದಾನದಲ್ಲಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗಿಯಾದ ಮೈವಿವಿ ವಿದ್ಯಾರ್ಥಿಗಳು, ಸಿಬ್ಬಂದಿ, ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳು, ವಿದ್ಯಾರ್ಥಿಗಳು, ಶಿಕ್ಷಕರು.
- ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ಪ್ರದರ್ಶನ
- 12ನೇ ಅಂತಾರಾಷ್ಟ್ರೀಯ ಯೋಗ ದಿನ
ಮೈಸೂರು: ಯೋಗ ನಗರಿ ಮೈಸೂರಿನಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದೈಹಿಕ, ಮಾನಸಿಕ ಆರೋಗ್ಯದ ಸಮತೋಲನ, ಒತ್ತಡ ನಿವಾರಣೆ, ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಉತ್ತೇಜಿಸುವ ಯೋಗವನ್ನು ಸಾಮೂಹಿಕವಾಗಿ ಪ್ರದರ್ಶಿಸುವ ಮೂಲಕ ಗಮನ ಸೆಳೆಯಲಾಯಿತು. ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಯೋಗ ಪ್ರದರ್ಶನದೊಂದಿಗೆ ಯೋಗದ ಮಹತ್ವ ಸಾರಿದವು.
ಮಹಾರಾಜ ಕ್ರಿಕೆಟ್ ಮೈದಾನ:
ನಗರದ ಮಹಾರಾಜ ಕ್ರಿಕೆಟ್ ಮೈದಾನವು ಸಾವಿರಾರು ಯೋಗಾಸಕ್ತರಿಂದ ಕಂಗೊಳಿಸಿತು. ವಿವಿಧ ಯೋಗ ಸಂಸ್ಥೆಗಳು, ವಿದ್ಯಾರ್ಥಿಗಳು, ಶಿಕ್ಷಕರು, ವಿಶ್ವವಿದ್ಯಾಲಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರಿದರು.
ಬೆಳಗಿನ ಆಹ್ಲಾದಕರ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಾಸನ ಅಭ್ಯಾಸ ಮಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಯೋಗವು ಭಾರತದ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಪ್ರತೀಕ. ವಿಶ್ವ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿದೆ. ಯೋಗವು ಕೇವಲ ದೇಹದ ವ್ಯಾಯಾಮವಲ್ಲ; ಅದು ವ್ಯಕ್ತಿಯ ಮನಸ್ಸು, ಚಿಂತನೆ ಮತ್ತು ಜೀವನ ಮೌಲ್ಯ ರೂಪಿಸುವ ಸಮಗ್ರ ಸಾಧನೆಯಾಗಿದೆ ಎಂದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ನಾಗರಾಜ್, ಜಿಎಸ್‌ಎಸ್ ಸಂಸ್ಥೆಯ ಮುಖ್ಯಸ್ಥ ಡಿ.ಶ್ರೀಹರಿ ಇನ್ನಿತರರಿದ್ದರು
ಮುಕ್ತ ವಿಶ್ವವಿದ್ಯಾಲಯ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆ ನಡೆಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎಂ.ಡಿ.ರಾಧಾ ಮಾತನಾಡಿ, ಪ್ರಸ್ತುತ ವಿದ್ಯಾಮಾನಗಳಿಗೆ ಯೋಗ ಎಷ್ಟು ಅವಶ್ಯಕತೆ ಎಂದರು. ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್ ಅವರು ತಾಳ್ಮೆ, ಏಕಾಗ್ರತೆಗೆ ಯೋಗ ಎಷ್ಟು ಪರಿಣಾಮಕಾರಿ ಬೀರುತ್ತದೆ ಎಂದರು. ಡೀನ್(ಶೈಕ್ಷಣಿಕ) ಪ್ರೊ.ಎಂ.ರಾಮನಾಥಂ ನಾಯುಡು, ಕುಲಸಚಿವ(ಪರೀಕ್ಷಾಂಗ) ಡಾ.ಸಿ.ಎಸ್.ಆನಂದಕುಮಾರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎನ್.ಕೃಷ್ಣಪ್ಪ ಇನ್ನಿತರರಿದ್ದರು.
ನ್ಯಾಯಾಲಯದ ಆವರಣ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಆಯುಷ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದ ಎ.ಡಿ.ಆರ್.ಕೇಂದ್ರದ ಮುಂಭಾಗದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಆಯುಷ್ ಇಲಾಖೆಯ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನ, ಪ್ರಾಣಾಯಾಮ ಪ್ರದರ್ಶನ ನಡೆಯಿತು. ನ್ಯಾಯಾಧೀಶರು, ವಕೀಲರು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿ ಜಂಟಿಯಾಗಿ ಯೋಗಾಸನ ಮಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಉಷಾರಾಣಿ ಮಾತನಾಡಿ, ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಾಗ ಮಾತ್ರ ಒಂದು ಸದೃಢ, ಆರೋಗ್ಯವಂತ, ಶಾಂತಿಪ್ರಿಯ ಸಮಾಜ ನಿರ್ಮಿಸಲು ಸಾಧ್ಯ. ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಅತ್ಯಗತ್ಯವಾಗಿದ್ದು, ಯೋಗವು ಅದಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ತಿಳಿಸಿದರು.
ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ, ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಜೋಡಿಸುವ ಅದ್ಭುತ ಕಲೆ. ನ್ಯಾಯಾಂಗ ವಲಯದಲ್ಲಿ ಕೆಲಸ ಮಾಡುವ ನಮಗೂ ಮಾನಸಿಕ ಒತ್ತಡ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಯೋಗ ಮಾಡುವುದರಿಂದ ಮನಸ್ಸು ಪ್ರಶಾಂತಗೊಳ್ಳುತ್ತದೆ. ತಾರ್ಕಿಕ ಚಿಂತನೆ ಹೆಚ್ಚುತ್ತದೆ ಎಂದು ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶ ಸಮಾಜಕ್ಕೆ ನ್ಯಾಯ ಒದಗಿಸುವುದಾಗಿದೆ. ಆರೋಗ್ಯವಂತ ಶರೀರ, ಆರೋಗ್ಯವಂತ ಮನಸ್ಸಿನಿಂದ ಮಾತ್ರ ನಾವು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಹೇಳಿದರು.
ಕೇವಲ ಒಂದು ದಿನ ಯೋಗ ಮಾಡಿ ಮರೆಯದೆ, ಯೋಗವನ್ನು ದೈನಂದಿನ ಜೀವನದ ಒಂದು ಅವಿಭಾಜ್ಯ ಭಾಗವಾಗಿಸಿಕೊಳ್ಳಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ರೈಲ್ವೆ ಭವನ:
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಯೋಗ ದಿನವನ್ನು ನಗರದ ರೈಲ್ವೆ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಮಾತನಾಡಿ, ಆರೋಗ್ಯಕರ ಮತ್ತು ಸಮತೋಲನಯುತ ಸಮಾಜ ನಿರ್ಮಾಣದಲ್ಲಿ ಯೋಗದ ಪಾತ್ರ ಮುಖ್ಯವಾಗಿದೆ. ಇದು ದೈಹಿಕ ಆರೋಗ್ಯ, ಮಾನಸಿಕ ಸಮತೋಲನ, ಆಂತರಿಕ ಶಾಂತಿಯನ್ನು ಉತ್ತೇಜಿಸುವ ಸಮಗ್ರ ವಿಧಾನವಾಗಿದ್ದು, ಸಮತೋಲನಯುತ, ಅರ್ಥಪೂರ್ಣ ಜೀವನಶೈಲಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಇಂದಿನ ವೇಗದ ಮತ್ತು ಒತ್ತಡಭರಿತ ಜೀವನಶೈಲಿಯಲ್ಲಿ ಉತ್ತಮ ಆರೋಗ್ಯ, ಮಾನಸಿಕ ಶಾಂತಿ, ಸಮಗ್ರ ಕಲ್ಯಾಣವನ್ನು ಸಾಧಿಸಲು ಯೋಗವನ್ನು ನಿತ್ಯದ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದರು. ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯೋಗ ತರಬೇತುದಾರ ರಘು ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿಯೂ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಜೆಎಸ್‌ಎಸ್ ಕಾಲೇಜು:
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಯೋಗ ಸಂಕಲ್ಪವಿಧಿಯನ್ನು ಬೋಧಿಸಲಾಯಿತು.
ಪತಂಜಲಿ ಯೋಗ ಶಿಕ್ಷಣ ಹಾಗೂ ಸಂಶೋಧನ ಸಂಸ್ಥೆಯ ಸದಸ್ಯ ರಮೇಶ್ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾರ್ಗದರ್ಶನ ಮಾಡಿದರು. ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಯೋಗಾಭ್ಯಾಸವು ವಿಶ್ವಾದ್ಯಂತ ಆರೋಗ್ಯ, ಶಾಂತಿ ಮತ್ತು ಮಾನವೀಯ ಮೌಲ್ಯ ಸಂಕೇತವಾಗಿ ಬೆಳೆಯುತ್ತಿದೆ. ಸದೃಢ ದೇಹ, ಮಾನಸಿಕ ಆರೋಗ್ಯಕ್ಕಾಗಿ ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜೀವನದ ಪ್ರತಿ ಹಂತದಲ್ಲೂ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯವನ್ನು ಕಾಪಾಡುವಲ್ಲಿ ಯೋಗವು ಶಕ್ತಿಯುತ ಸಾಧನ. ಯೋಗವು ಆರೋಗ್ಯದ ದಾರಿ, ಆರೋಗ್ಯವು ಯಶಸ್ಸಿನ ದಾರಿ ಎಂದರು. ಪ್ರಾಂಶುಪಾಲ ಡಾ. ಪ್ರಭು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಪಿ. ಮಹಾದೇವಸ್ವಾಮಿ ಇನ್ನಿತರರಿದ್ದರು.