ಮೈಸೂರು ತಾಲೂಕಿನ ದೂರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ ಇತರರಿದ್ದರು. 
ಮೈಸೂರು

ಮೈಸೂರು ತಾಲೂಕಿನ ದೂರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಧಾರ್ಮಿಕ ಕಾರ್ಯಕ್ರಮ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಹಾಗೂ ಶ್ರೀ ಮಹಾಂತ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು
  • ನೂತನವಾಗಿ ನಿರ್ಮಿಸಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಮಹಾದ್ವಾರ, ವ್ನಿೇಶ್ವರ ದೇವಸ್ಥಾನ, ನವಗ್ರಹ ದೇವಸ್ಥಾನ, ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಮೂಗಪ್ಪಸ್ವಾಮೀಜಿ ಗದ್ದುಗೆ ಹಾಗೂ ಶಿವಭವನದ ಉದ್ಘಾಟನೆ
  • ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ
ಮೈಸೂರು: ತಾಲೂಕಿನ ದೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಮಹಾದ್ವಾರ, ವ್ನಿೇಶ್ವರ ದೇವಸ್ಥಾನ, ನವಗ್ರಹ ದೇವಸ್ಥಾನ, ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಮೂಗಪ್ಪಸ್ವಾಮೀಜಿ ಗದ್ದುಗೆ ಹಾಗೂ ಶಿವಭವನದ ಉದ್ಘಾಟನೆ ಸಮಾರಂಭವು ಸೋಮವಾರ ಅದ್ದೂರಿಯಾಗಿ ನೆರವೇರಿತು.
ಮಹಾದ್ವಾರದ ಉದ್ಘಾಟನೆ ಹಾಗೂ ಶ್ರೀ ಶಿವರಾತ್ರೀಶ್ವರರ ಭಾವಚಿತ್ರವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣ ಮಾಡಿದರು. ದೇವಸ್ಥಾನಗಳ ಉದ್ಘಾಟನೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣ ಮಾಡಿದರು. ಶಿವಭವನ ಉದ್ಘಾಟನೆ ಹಾಗೂ ಶ್ರೀ ಗುರುಮಲ್ಲೇಶ್ವರ ಭಾವಚಿತ್ರವನ್ನು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ ಅನಾವರಣಗೊಳಿಸಿದರು.

ಧಾರ್ಮಿಕ ಸಭೆ

ಬಳಿಕ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಹಾಗೂ ಶ್ರೀ ಮಹಾಂತ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ದೈಹಿಕವಾಗಿ ಎಷ್ಟೇ ದೂರದಲ್ಲಿದ್ದರೂ ಮನಸ್ಸಿಗೆ ಹತ್ತಿರವಾಗಿದ್ದರೆ ಅದು ದೂರ ಎನಿಸುವುದಿಲ್ಲ. ಅಂತಹ ಮನಸ್ಸಿಗೆ ತುಂಬ ಹತ್ತಿರವಾದ ಹಾಗೂ ಭಕ್ತಿ, ಶ್ರದ್ಧೆ ನಿಷ್ಠೆ , ಕಾಯಕಕ್ಕೆ ಹೆಸರಾದ ಊರು ಈ ದೂರ ಗ್ರಾಮ. 2009ಕ್ಕಿಂತ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಶಂಭುಲಿಂಗೇಶ್ವರ ದೇವಸ್ಥಾನವನ್ನು ವಕೀಲ ಡಿ.ಬಿ.ರಾಜಶೇಖರ ಮೂರ್ತಿ ಜೀರ್ಣೋದ್ಧಾರ ಮಾಡಿದ್ದರು. ಈಗ ಶಂಭುಲಿಂಗೇಶ್ವರ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಹಾದ್ವಾರ ಹಾಗೂ ವಿವಿಧ ದೇವಾಲಯಗಳು ಹಾಗೂ ಶಿವಭವನ ಅತ್ಯುತ್ತಮವಾಗಿ ನಿರ್ಮಾಣಗೊಂಡಿದೆ ಎಂದರು.
ದೇವರು ಕಲ್ಲು, ಮಣ್ಣು, ಕಟ್ಟಿಗೆಯಲ್ಲಿಲ್ಲ. ಆದರೆ ದೇವರು ನಾವು ನೋಡುವ ಭಾವನೆಯಲ್ಲಿದ್ದಾನೆ. ದೇವರಿಗೆ ಹೆಸರು ಏನೇ ಇದ್ದರೂ ಭಾವನೆಯಲ್ಲಿ ದೇವರಿದ್ದಾನೆ. ಎಷ್ಟೇ ಕಷ್ಟ ಬಂದರೂ ಭಕ್ತಿಯನ್ನು ಬಿಡಬಾರದು ಎಂಬ ನಂಬಿಕೆ ನಮ್ಮ ಭಾರತ ಸಂಸ್ಕೃತಿಯಲ್ಲಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಗ್ರಾಮದ ಅಭಿವೃದ್ಧಿಗೆ ಪಾತ್ರರಾಗಬೇಕು ಎಂದು ಹೇಳಿದರು.

ದೇಗುಲಗಳಿಂದ ನೆಮ್ಮದಿ ಪ್ರಾಪ್ತಿ

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನೆಯಲ್ಲಿ ಎಷ್ಟೇ ಕಷ್ಟ, ದುಃಖ ದುಮ್ಮಾನಗಳು ಇದ್ದರೂ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಎಲ್ಲವೂ ದೂರವಾಗುತ್ತವೆ. ಅಂತಹ ಒಂದು ಉತ್ತಮವಾದ ವಾತಾವರಣ ಕೆರೆ ಸಮೀಪವಿರುವ ಈ ದೇವಸ್ಥಾನದಲ್ಲಿದೆ. ಭಾರತ ಧಾರ್ಮಿಕವಾಗಿ ಶ್ರೀಮಂತವಾದ ದೇಶ. 21 ನೇ ಶತಮಾನದಲ್ಲಿಯೂ ಇಡೀ ಜಗತ್ತು ಭಾರತದ ಕಡೆ ನೋಡಲು ಆಧ್ಯಾತ್ಮಿಕ ಶಕ್ತಿಯೇ ಮುಖ್ಯ ಕಾರಣ ಎಂದರು.
ಪ್ರತಿಯೊಂದು ಕೆಲಸದಲ್ಲೂ ಭಗವಂತನನ್ನು ಕಾಣಬೇಕು. ಆದರೆ ಮಾಡಿದ ಕೆಲಸವನ್ನು ತಾನು ಮಾಡಿದೆ ಎಂದು ಅಹಂ ಇರಬಾರದು. ದೇವಸ್ಥಾನಕ್ಕೆ ಬರುವಾಗ ದ್ವೇಷ, ಮತ್ಸರ, ಅಸೂಯೆ ಎಲ್ಲವನ್ನು ದ್ವಾರದಲ್ಲಿಯೇ ಬಿಟ್ಟು ಬರಬೇಕು ಆ ರೀತಿ ಈ ಮಹಾದ್ವಾರ ನಿರ್ಮಾಣಗೊಂಡಿದೆ. ಈ ರೀತಿ ಕಾರ್ಯ ನಿರ್ವಹಿಸಿ ಗ್ರಾಮಸ್ಥರು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಕುಂದೂರು ಮಠದ ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಚನ್ನಮಲ್ಲದೇಶಿಕೇಂದ್ರ ಸ್ವಾಮೀಜಿ, ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಬರಡನಪುರ ಶ್ರೀ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ , ಡಾ.ಶ್ರೀ ಷಡಕ್ಷರಿ ಸ್ವಾಮೀಜಿ , ಹಂಚಿಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಿಡಗಲು ಮಠದ ಶ್ರೀ ಮಹದೇವ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ದೇವಸ್ಥಾನ ಸಮಿತಿಯ ಸದಸ್ಯರು, ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು. ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

ಸಾಧಕರಿಗೆ ಸನ್ಮಾನ

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ವಕೀಲ ದೂರ ಡಿ.ಬಿ ರಾಜಶೇಖರ್ ಮೂರ್ತಿ, ಯು.ಎಸ್.ಶೇಖರ್, ಎಂ. ಪ್ರದೀಪ್ ಕುಮಾರ್, ಕೆ.ವಿ.ಮಲ್ಲೇಶ್, ಕೆ.ಎನ್.ರವಿಶಂಕರ್, ಬಿ.ಎಸ್.ಪ್ರಶಾಂತ್, ಕೆ.ಎಚ್.ಕಿರಣ್ ಕುಮಾರ್, ಎಸ್.ಎಂ. ಶಿವಪ್ರಕಾಶ್, ಎ.ಸಿ. ಜಗದೀಶ್, ತ್ರಿಶೂಲಧರ ಹಾಗೂ ಶಂಭುಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯರಾದ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡಿ.ಬಿ ನಾಗರಾಜು ಹಾಗೂ ನಿವೃತ್ತ ಇನ್‌ಸ್ಪೆಕ್ಟರ್ ಡಿ.ಎಂ ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.