ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ತರಬೇತಿ ಪಡೆದು ಅರಣ್ಯ ರಕ್ಷಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶ, ಜಾರ್ಖಂಡ್ ರಾಜ್ಯಗಳಿಗೆ ಹಸ್ತಾಂತರಿಸಲು ಮುಂದಾಗಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕಳೆದ ವರ್ಷ ಮೇ 21ರಂದು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಮಿ ಆನೆಗಳನ್ನು ಹಸ್ತಾಂತರಿಸಲಾಗಿತ್ತು. ಚಿಕ್ಕಮಗಳೂರು ಭಾಗದಲ್ಲಿ ಸೆರೆಹಿಡಿಯಲಾಗಿದ್ದ ಕೃಷ್ಣ, ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಭಾಗದಲ್ಲಿ ಸೆರೆಹಿಡಿಯಲಾಗಿದ್ದ ಅಭಿಮನ್ಯು, ಕೊಡಗು ಭಾಗದಲ್ಲಿ ಸೆರೆಹಿಡಿಯಲಾಗಿದ್ದ ದೇವ ಹಾಗೂ ದುಬಾರೆ ಆನೆ ಶಿಬಿರದಲ್ಲಿ ಜನಿಸಿದ್ದ ರಂಜನ್ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಈಗ ಮತ್ತೆ 6ರಿಂದ 10 ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶ, ಜಾರ್ಖಂಡ್ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿಯೇ ಹಲವು ವರ್ಷಗಳಿಂದ ಸಾಕಿ, ತರಬೇತಿ ನೀಡಿ ಬೆಳೆಸಿರುವ, ಅರಣ್ಯ ಇಲಾಖೆಯ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆನೆಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸುವ ನಿರ್ಧಾರ ಖಂಡನೀಯ ಎಂದು ಕಿಡಿ ಕಾರಿದರು.
ಅರಣ್ಯ ಇಲಾಖೆಯಲ್ಲಿ ಕಾವಾಡಿಗರು, ಮಾವುತರ ನೇಮಕಾತಿ ವಿಚಾರದಲ್ಲಿಯೂ ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಫೌಂಡೇಷನ್ ಆಗ್ರಹಿಸಿದೆ. ತಲೆಮಾರುಗಳಿಂದ ಆನೆಗಳ ಆರೈಕೆ, ಪೋಷಣೆ ಮತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಕಾವಾಡಿಗರು ಹಾಗೂ ಮಾವುತರ ಕುಟುಂಬದವರಿಗೆ ಉದ್ಯೋಗಾವಕಾಶ ಕಲ್ಪಿಸುವ ಬದಲು, ಆನೆಗಳ ಆರೈಕೆ ಮತ್ತು ನಿರ್ವಹಣೆಯಲ್ಲಿ ನೇರ ಅನುಭವ ಅಥವಾ ಸಂಬಂಧವಿಲ್ಲದವರಿಗೆ ಹುದ್ದೆಗಳನ್ನು ನೀಡಬಾರದು ಎಂದು ಆಗ್ರಹಿಸಿದರು.
ಗಂಧದಗುಡಿ ಫೌಂಡೇಷನ್ ಅಧ್ಯಕ್ಷ ಆರ್ಯನ್ ಗಂಧದಗುಡಿ, ಪದಾಧಿಕಾರಿಗಳಾದ ಮಹದೇವ ಶೆಟ್ಟಿ, ಯಶೋದಾ, ವಿದ್ಯಾ, ಶಿವಶಂಕರ್, ನಂದನ್ ಕದಂಬ, ಪ್ರಮೋದ್, ಹರೀಶ್, ಯಶವಂತ, ಸೌಮ್ಯಾ, ಮಂಜು, ಪಾಲಾಕ್ಷ, ಶ್ವೇತಾ, ಗುರುದತ್, ವಿನೋದ್ ಮತ್ತಿತರರು ಭಾಗವಹಿಸಿದ್ದರು.