ಹಾಲು, ಮೊಸರು, ಹಾಗೂ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಸೋಮವಾರ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಈ ದರ ಏರಿಕೆ ಮತ್ತಷ್ಟು ಹೊರೆಯಾಗಲಿದೆ. ಹಾಲಿನ ದರ ಲೀಟರ್ಗೆ 8 ರೂ ಹೆಚ್ಚಳ ಎಂದು ಹೇಳಿ ಒಟ್ಟು 12 ರೂ ಏರಿಕೆ ಮಾಡಲಾಗಿದೆ. ಇದರಲ್ಲಿ 7 ರೂ ರೈತರಿಗೆ ದೊರೆತರೆ, ಉಳಿದ 5 ರೂ ಯಾರ ಪಾಲಾಗುತ್ತಿದೆ ಎಂದು ಪ್ರಶ್ನಿಸಿದರು.
ಮೊಸರಿನ ದರ ಲೀಟರ್ಗೆ 14 ರೂ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಹಣ ರೈತರಿಗೆ ಸಿಗುತ್ತಿಲ್ಲವಾದರೆ ಎಲ್ಲಿಗೆ ಹೋಗುತ್ತಿದೆ? ಈ ಕುರಿತು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಾರ್ವಜನಿಕರಿಗೆ ಸೂಕ್ತ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಹಾಲು ಉತ್ಪಾದಿಸುವ ರೈತರಿಗೆ ನ್ಯಾಯಯುತ ಬೆಲೆ ನೀಡುವ ಜತೆಗೆ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗದಂತೆ ಸರ್ಕಾರ ಸಮತೋಲನ ಕಾಯ್ದುಕೊಳ್ಳಬೇಕು. ರೈತರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ತಕ್ಷಣವೇ ದರ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಫೌಂಡೇಶನ್ ಅಧ್ಯಕ್ಷ ಆರ್ಯನ್ ಗಂಧದಗುಡಿ, ಪದಾಧಿಕಾರಿಗಳಾದ ಯಶೋದ, ಮಹದೇವ್ ಶೆಟ್ಟಿ, ಶಿವಶಂಕರ್, ವಿನೋದ್, ವಿಲಿಯಂ, ಮಹೇಶ್ ಬೋವಿ, ಸೌಮ್ಯಾ ಮಂಜು, ಯಶವಂತ್, ಪೃಥ್ವಿರಾಜ್, ವಿದ್ಯಾ, ಅಪ್ಪು, ಅಕ್ಷಯ್, ಜಗದೀಶ್ ಇದ್ದರು.