ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಗಣ್ಯರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹುಣಸೂರು
ಮೈಸೂರು

ಭುವನದ ಕವಿಯಾಗಿ ಜನಮನದಲ್ಲಿ ನೆಲೆ

ತಹಸೀಲ್ದಾರ್ ಜೆ.ಮಂಜುನಾಥ್ ಬಣ್ಣನೆ

ಹುಣಸೂರು: ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಗ್ರಂಥದಲ್ಲಿ ಎಂದಿಗೂ ಸಲ್ಲುವ ಜೀವನದ ಮೌಲ್ಯಗಳು, ಕುಟುಂಬ ಜೀವನ, ಬಂಧನಗಳು, ಭಾವನೆಗಳನ್ನು ಸುಂದರವಾಗಿ ರೂಪಿಸುವ ಮೂಲಕ ಭುವನ ಕವಿಯಾಗಿ ಭಾರತೀಯರ ಮನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಬಣ್ಣಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ರಾಮಾಯಣದಲ್ಲಿ ಮೂಡಿಬಂದಿರುವ ಪಾತ್ರಗಳ ಬಿಂಬವನ್ನು ನಮ್ಮ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಕಾಣುತ್ತೇವೆ. ಬದುಕಿನ ಉದಾತ್ತ ಮೌಲ್ಯ ತಿಳಿಸುವ, ಹೇಗೆ ಬದುಕಬೇಕೆಂದು ಅರಿವು ನೀಡುವ ಮಹಾಗ್ರಂಥವಾಗಿ ರಾಮಾಯಣ ಸರ್ವ ಕಾಲಕ್ಕೂ ಸಲ್ಲುತ್ತದೆ ಎಂದು ಹೇಳಿದರು.

ರಾಮಾಯಣದ ಪ್ರಭಾವದೊಂದಿಗೆ ದೇಶಾದ್ಯಂತ ಮತ್ತಷ್ಟು ವಿಭಿನ್ನ ಅಂಶಗಳನ್ನೊಳಗೊಂಡು ಗ್ರಂಥವನ್ನು ಹಲವು ಕವಿಗಳು ಬರೆದಿದ್ದಾರೆ. ಅದರಲ್ಲಿ ಕುವೆಂಪು ಅವರ ಶ್ರೀ ರಾಮಾಯಣದರ್ಶನಂ ಕೂಡ ಒಂದಾಗಿದೆ. ಕುವೆಂಪು ರಾಮಾಯಣದಲ್ಲಿ ಸೀತೆಯನ್ನು ಒಯ್ದ ರಾವಣನಿಗೂ ಗೌರವ ನೀಡಲಾಗಿದೆ. ಒಟ್ಟಿನಲ್ಲಿ ವಾಲ್ಮೀಕಿ ರಾಮಾಯಣ ನಮ್ಮ ನಿತ್ಯ ಜೀವನದ ಸಂದಿಗ್ಧತೆಗೆ ಉತ್ತರ ನೀಡುವ ಗ್ರಂಥವಾಗಿದೆ ಎಂದು ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಸಮಾಜ ಅಪ್ಪಿಕೊಳ್ಳುವ ಮಹನೀಯ: ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಅಣ್ಣಯ್ಯನಾಯಕ ಮಾತನಾಡಿ, ಬೇಡನಾಗಿದ್ದ ವಾಲ್ಮೀಕಿ ಮಹರ್ಷಿ ವಾಲ್ಮೀಕಿಯಾಗಿ ಇಡೀ ಹಿಂದು ಸಮಾಜವೇ ಅಪ್ಪಿಕೊಳ್ಳುವಂತಹ ಮಹಾಗ್ರಂಥ ನೀಡುವ ಮೂಲಕ ವಾಲ್ಮೀಕಿ ಸಮಾಜಕ್ಕೆ ಹೆಮ್ಮೆ ತಂದರು. ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಸಮಾಜಕ್ಕೆ ನಾಗಮೋಹನದಾಸ್ ವರದಿಯನ್ವಯ ನೀಡಿದ್ದ ಶೇ.7ರ ಮೀಸಲಾತಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ಕಾರಣಾಂತರಗಳಿಂದ ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿದೆ. ರಾಜ್ಯ ಸರ್ಕಾರ ಅನುಭವಿ ವಕೀಲರನ್ನು ನೇಮಿಸಿ ಸಮುದಾಯಕ್ಕೆ ಮತ್ತೆ ಶೇ.7ರ ಮೀಸಲಾತಿ ದೊರಕಿಸಿಕೊಡುವಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಪುಟ್ಟರಾಜು, ನಿಂಗರಾಜ ಮಲ್ಲಾಡಿ, ಖಾಲಿದ್, ಡಿ.ಕುಮಾರ್, ಸತ್ಯಪ್ಪ, ಡಿ.ಕೆ.ಕುನ್ನೇಗೌಡ ಇತರರು ಮಾತನಾಡಿದರು. ಇಒ ಕೆ.ಹೊಂಗಯ್ಯ, ಗ್ರೇಡ್ 2 ತಹಸೀಲ್ದಾರ್ ಪುಷ್ಪಾ, ಮುಖಂಡರಾದ ರಾಮಚಂದ್ರ, ಕಾಳಿದಾಸನಾಯ್ಕ, ಮಯೂರ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಚಿಕ್ಕಸ್ವಾಮಿ, ಹೊನ್ನಪ್ಪ, ನೇರಳಕುಪ್ಪೆ ಮಹದೇವ್, ಆರ್‌ಎಫ್‌ಒ ಸಂತೋಷ್ ಹೂಗಾರ್, ನಗರಸಭೆ ಪೌರಾಯುಕ್ತೆ ಎಂ.ಮಾನಸ, ಸಮಾಜ ಕಲ್ಯಾಣಾಧಿಕಾರಿ ಗಂಗಾಧರ್ ಇತರರು ಇದ್ದರು.

ಗೊಂದಲದ ಗೂಡಾದ ಸಭೆ: ಸಮಾರಂಭಕ್ಕೆ ಶಾಸಕ ಹರೀಶ್‌ಗೌಡ ಗೈರಾಗಿರುವ ಕುರಿತು ಸಮುದಾಯದ ಬಿಳಿಕೆರೆ ಚೌಡಪ್ಪ ಸೇರಿದಂತೆ ಹಲವರು ಪ್ರಶ್ನಿಸಿ, ಶಾಸಕರು ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ದೂರಿ ತಹಸೀಲ್ದಾರ್ ಉತ್ತರಿಸಬೇಕೆಂದು ಒತ್ತಾಯಿಸಿದರು. ಸಮಾಜದ ಅಧ್ಯಕ್ಷ ಅಣ್ಣಯ್ಯನಾಯಕ ಮಧ್ಯೆ ಪ್ರವೇಶಿಸಿ, ಮುಂದಿನ ದಿನಗಳಲ್ಲಿ ಸಮುದಾಯದಿಂದ ದೊಡ್ಡಮಟ್ಟದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು. ಶಾಸಕರು, ಮಾಜಿ ಶಾಸಕರು ಇನ್ನಿತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ಸಮುದಾಯದ ಎರಡು ಗುಂಪುಗಳ ನಡುವೆ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ವಾಕ್ಸಮರ ಮುಂದುವರಿಯಿತು. ಸಭೆಯಲ್ಲಿದ್ದ ಪೊಲೀಸರು ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದರು. ನಂತರ ತಹಸೀಲ್ದಾರ್ ಜೆ.ಮಂಜುನಾಥ್ ಮಧ್ಯಪ್ರವೇಶಿಸಿ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯಗಳ ಕುರಿತು ಶಾಸಕರಿಗೆ ತಿಳಿಸುವುದಾಗಿ ಭರವಸೆ ನೀಡಿದರು.