ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರ ವಿಭಾಗದ ವಾರ್ಷಿಕ ಮಹಾಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು. ಸಿದ್ದಯ್ಯ, ಸಂತೋಷ್ ಮೂಳೆಯುರು, ತಾರಾ ಕುಮಾರ್, ಹೆಡತಲೆ ಮಂಜುನಾಥ್ ಇನ್ನಿತರರಿದ್ದರು.
- ಕಾಂಗ್ರೆಸ್ ಸಮಿತಿ ಸಹಕಾರ ವಿಭಾಗದ ವಾರ್ಷಿಕ ಮಹಾಸಭೆ
ಮೈಸೂರು: ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆ ಓದಿಕೊಳ್ಳದೆ ಹೋದರೆ ಕಾಂಗ್ರೆಸ್ ಕಟ್ಟುವುದು ಕಷ್ಟ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರ ವಿಭಾಗದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳಿಗೆ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ‘ಮೌಲ್ಯಯುತ ರಾಜಕಾರಣದ ಅನಿವಾರ್ಯತೆ’ ಕುರಿತು ಮಾತನಾಡಿದರು.
ರಾಜಕಾರಣಿಯ ಬದುಕಿನ ಯಶಸ್ಸಿಗೆ ಗಾಂಧಿ, ಅಂಬೇಡ್ಕರ್, ನೆಹರೂ, ಲೋಹಿಯಾ ಚಿಂತನೆ ಬೇಕು. ಇವರ ಕುರಿತು ಅಧ್ಯಯನ ಮಾಡದೆ ಹೋದರೆ ಬಿಜೆಪಿ, ಆರ್‌ಎಸ್‌ಎಸ್ ಅನ್ನು ಹಿಮ್ಮೆಟ್ಟಿಸಲು ಸಹ ಸಾಧ್ಯವಿಲ್ಲ. ವರ್ತಮಾನ ವಿಚಾರಕ್ಕೆ ಅನಿವಾರ್ಯವಾಗಿರುವ ಇವರ ಚಿಂತನೆಯನ್ನು ಮೊದಲು ಪಕ್ಷದ ಕಾರ್ಯಕರ್ತರು ಓದಿ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಬುದ್ಧನ ನಂತರದಲ್ಲಿ ಇವರೆಲ್ಲರೂ ಬಂದವರು. ಇವರ ಚಿಂತನೆ ಸದಾ ಕಾಲ ಪ್ರಸ್ತುತ. ಕಾಂಗ್ರೆಸ್‌ನವರು ಇಂತಹ ಮಹನೀಯರ ವಿಚಾರಧಾರೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ರಾಜಕಾರಣದ ಮೌಲ್ಯವನ್ನು ಕುಲಗೇಡಿಸುತ್ತಿರುವವರು ತಿಳಿದವರು ಮತ್ತು ವಿದ್ಯಾವಂತರೇ ಹೊರತು ರೈತರು, ಕಾರ್ಮಿಕರಲ್ಲ. ತನ್ನ ಒಳಿತಿಗಾಗಿ, ಸ್ವಲಾಭಕ್ಕಾಗಿ ರಾಜಕಾರಣವನ್ನು ಬಳಸಿಕೊಂಡು ಅಡ್ಡದಾರಿ ಹಿಡಿದು ರಾಜಕಾರಣದ ಮೌಲ್ಯವನ್ನು ಹಾಳು ಮಾಡಿದ್ದಾರೆ. ಹಣ ಗಳಿಸುವುದೇ ಪ್ರಸ್ತುತ ರಾಜಕಾರಣದ ಮೂಲ ಮಂತ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಂತವೇರಿ ಗೋಪಾಲಗೌಡ ಹೆಸರಿನಲ್ಲಿ ಒಂದು ಅಡಿ ಜಾಗ ಇರಲಿಲ್ಲ. ಬ್ಯಾಂಕ್‌ನಲ್ಲಿ ಖಾತೆ ಇರಲಿಲ್ಲ. ಪ್ರತಿ ಅಧಿವೇಶನದಲ್ಲೂ ಅವರ ಹೆಸರು ಪ್ರಸ್ತಾಪವಾಗುತ್ತದೆ.
ಇದು ಅವರು ಬಿಟ್ಟು ಹೋಗಿರುವ ನೈತಿಕ ಸಿದ್ಧಾಂತಕ್ಕೆ ಸಾಕ್ಷಿ. ಈಗಿನ ರಾಜಕೀಯ ಎನ್ನುವುದು ವಿಭಿನ್ನ ವ್ಯವಸ್ಥೆ. ಇದರಲ್ಲಿ ಆದರ್ಶ, ಸಿದ್ಧಾಂತ ಮೌಲ್ಯವನ್ನು ಅನುಸರಿಸುವುದು ಬಹಳ ಕಷ್ಟ. ಮೌಲಿಕ ರಾಜಕಾರಣಿಗಳಿಗೆ ಭವಿಷ್ಯ ಕಡಿಮೆ ಎಂದು ಹೇಳಿದರು.
ಈಗ ಎಲ್ಲವೂ ಇದ್ದು, ಜ್ಞಾನ ವಿಷಯದಲ್ಲಿ ನಾವುಗಳೆಲ್ಲ ಬಡವರು. ಆದರೆ, ಏನು ಸೌಲಭ್ಯವಿಲ್ಲದ ಕಾಲದಲ್ಲಿ ಅವರು ಅಷ್ಟೆಲ್ಲ ವಿಚಾರ ಹೊಂದಿದವರಾಗಿದ್ದರು.
ಹೆಚ್ಚು ಓದಿ, ಅಧ್ಯಯನ ಮಾಡಿ. ಹಣ ಮತ್ತು ಹುದ್ದೆಯ ಹಿಂದೆ ಓಡಬೇಡಿ. ಅಧಿಕಾರ ಇದ್ದರೆ ಮಾತ್ರ ಮರ್ಯಾದೆ ಸಿಗುತ್ತದೆ ಎಂಬ ಭ್ರಮೆ ತೆಗೆದು ಹಾಕಿ. ಮೊದಲು ನಿಮ್ಮ ದುಡಿಮೆಯನ್ನು ನೀವು ಮಾಡಿ ಎಂದು ಕಿವಿಮಾತು ಹೇಳಿದರು.
ಮನುಸ್ಮತಿಯಲ್ಲಿ ಜಾತಿ ವ್ಯವಸ್ಥೆ ಇರಬೇಕು ಎಂದು ಹೇಳುತ್ತದೆ. ಅದರ ವಿರುದ್ಧ ನಾವು ಇದ್ದೇವೆ. ಅಂತರ್ಜಾತಿ ವಿವಾಹ, ಮೀಸಲಾತಿ ವಿರುದ್ಧ ಆರ್‌ಎಸ್‌ಎಸ್ ಇದೆ. ಇದನ್ನು ನಾವು ಪ್ರಬಲವಾಗಿ ತಿಳಿದುಕೊಳ್ಳದೆ ಹೋದರೆ ನಮ್ಮ ಸೋಲು ಖಚಿತ ಎಂದು ಎಚ್ಚರಿಸಿದರು.
ಕೆಪಿಸಿಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ್ ತಾಳಂಪಳ್ಳಿ ಮಾತನಾಡಿ, ಈಗ ಹಣ, ತೋರಿಕೆ ಹಾಗೂ ಬೋಗಸ್ ವ್ಯಕ್ತಿತ್ವಗಳು ರಾಜಕಾರಣದ ವೇಗವನ್ನು ಹಿಮ್ಮಡಿಗೊಳಿಸಿದೆ. ಮೌಲ್ಯಯುತ ಹಾಗೂ ನಂಬಿಕಸ್ಥ ರಾಜಕಾರಣ ಹಿನ್ನಡೆ ಅನುಭವಿಸುತ್ತಿದೆ. ಈ ಎರಡರ ನಡುವಿನ ವ್ಯತ್ಯಾಸವನ್ನು ಸಮಾಜವೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮೌಲ್ಯಯುತ ರಾಜಕಾರಣಕ್ಕೆ ಸಾವಿಲ್ಲ, ಹೊಸ ತಲೆಮಾರು ಅದರತ್ತ ಚಿಂತಿಸಬೇಕು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಸಹಕಾರ ವಿಭಾಗದ ಜಿಲ್ಲಾಧ್ಯಕ್ಷ ಸಿದ್ದಯ್ಯ, ಕಾರ್ಯಾಧ್ಯಕ್ಷ ಸಂತೋಷ್ ಮೂಳೆಯುರು, ಮಹಿಳಾ ವಿಭಾಗದ ಅಧ್ಯಕ್ಷೆ ತಾರಾ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್, ಡಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮ ಶಂಕರ್, ಜಿಪಂ ಮಾಜಿ ಸದಸ್ಯ ತಲಕಾಡು ಮಂಜುನಾಥ್ ಇನ್ನಿತರರಿದ್ದರು.