ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. 
ಮೈಸೂರು

ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ರಾಷ್ಟ್ರನಾಯಕ

ಎಚ್.ಡಿ.ಕೋಟೆ: ಸಂವಿಧಾನದಿಂದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಮೂಲಕ ವಿಶ್ವದಲ್ಲಿ ಭಾರತ ದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ ರಾಷ್ಟ್ರ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಭಾರತದ ಸುತ್ತಮುತ್ತಲಿನ ದೇಶಗಳಲ್ಲಿ ನಡೆಯುತ್ತಿರುವ ಆಡಳಿತ ವ್ಯವಸ್ಥೆಯ ಹರಾಜಕತೆಯಿಂದ ಅಲ್ಲಿನ ಆರ್ಥಿಕ ಹಿನ್ನಡೆಯಿಂದ ದಿವಾಳಿ ಹೊಂದುತ್ತಿರುವುದು ಕಂಡುಬಂದಿದೆ. ಆದರೆ ಭಾರತದಲ್ಲಿ ಸುಭದ್ರ ಸಂವಿಧಾನ ಜಾರಿಯಲ್ಲಿ ಇರುವ ಕಾರಣ ದೇಶ ಸುಭದ್ರವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಂತರದಲ್ಲಿ ದೇಶದ ಮಹಿಳೆಯರಿಗೆ ಮತದಾನದ ಹಕ್ಕು ಸೇರಿದಂತೆ ಅನೇಕ ಸ್ಥಾನಮಾನಗಳನ್ನು ನೀಡಲಾಗಿದೆ. ಹಾಗಾಗಿ ಮಹಿಳೆಯರು ಅಂಬೇಡ್ಕರ್ ಕುರಿತು ಹೆಚ್ಚು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು ಎಂದರು.
ಸರ್ಕಾರದ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ತಾಲೂಕಿನಲ್ಲಿ ಇದುವರೆಗೆ ನಡೆದಿರುವ ಅಭಿವೃದ್ಧಿ ಕೆಲಸಕ್ಕೆ ಜನರು ಸಹಕಾರ ನೀಡಿದ್ದಾರೆ. ತಾಲೂಕಿನ ಕೆಂಚನಹಳ್ಳಿ ಭೂ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಮಹೇಶ್ ಮಾತನಾಡಿ, ಪ್ರಪಂಚದ ಬಹುತೇಕ ದೇಶಗಳು ಅಂಬೇಡ್ಕರ್ ಅವರನ್ನು ಜ್ಞಾನದ ಸಂಕೇತವಾಗಿ ಒಪ್ಪಿಕೊಂಡು ಅವರ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ ಎಂದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ರಾಷ್ಟ್ರ ನಾಯಕರ ಜಯಂತಿ ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತ ಮಾಡದೆ ಅವರ ತತ್ವ, ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಧರಣೇಶ್, ಬಿಇಒ ಸಿ.ಎನ್ ರಾಜು, ತಾಲೂಕು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಪುರಸಭಾ ಮಾಜಿ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಚಿಕ್ಕನಾಯಕ, ಪರಶಿವಮೂರ್ತಿ, ಎಂ.ಡಿ.ಮಂಚಯ್ಯ, ಚಾ.ನಂಜುಂಡ ಮೂರ್ತಿ, ಪಿ.ನಾಗರಾಜು, ವಡ್ಡರಗುಡಿ ಚಿಕ್ಕಣ್ಣ, ಸಣ್ಣಕುಮಾರ್, ಕಾಳಪ್ಪಾಜಿ, ಭೀಮನಹಳ್ಳಿ ಸೋಮೇಶ್, ಬಿಆರ್‌ಸಿ ಕೃಷ್ಣಯ್ಯ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್, ನಾಗರಾಜು, ಶಿಕ್ಷಕಿ ರೂಪ ಪ್ರಮೋದ್, ಸೌಮ್ಯಾ ಮಂಜುನಾಥ್, ಡಾ.ರವಿಕುಮಾರ್, ಉಪನ್ಯಾಸಕ ಮಹೇಶ್ ಇದ್ದರು.