ಬಹುಮುಖಕ್ಕೆ ತೆರೆದುಕೊಂಡ ರಂಗಾಯಣದ ಅಂಗಳ. 
ಮೈಸೂರು

ರಂಗಾಯಣದಲ್ಲಿ ಬಹುಮುಖ ಅನಾವರಣ

ಅವಿನಾಶ್ ಜೈನಹಳ್ಳಿ
ಮೈಸೂರು: ರಂಗಕಲೆಯ ವೈಭೋಗ, ಜನಪದ ಉತ್ಸವದ ಸೊಗಡು, ಸಿನಿಮಾಗಳ ರಸಗವಳ, ಆಕರ್ಷಿಸಿದ ದೇಸಿ ಆಹಾರ ಮೇಳ, ಕರಕುಶಲ ಪ್ರದರ್ಶನ... ಒಟ್ಟಾರೆ ಬಹುಮುಖಕ್ಕೆ ತೆರೆದುಕೊಂಡ ರಂಗಾಯಣದ ಅಂಗಳ...
ಇದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕಂಡು ಬಂದ ಚಂದದ ದೃಶ್ಯಾವಳಿ... ಗುರುವಾರವಷ್ಟೇ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಕಲಾ ರಸಿಕರು ರಂಗಾಯಣದ ಅಂಗಳದಲ್ಲಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಿ ಪುಳಕಿತರಾದರು.
ನಾಟಕೋತ್ಸವದಲ್ಲಿ ಶುಕ್ರವಾರ ಬಹುಕಲೆಗಳ ರಂಗಿನ ಸಂಭ್ರಮ ಮೇಳೈಸಿತು. ಚಲನಚಿತ್ರೋತ್ಸವ, ನಾಟಕ ಪ್ರದರ್ಶನ ಮತ್ತು ಜನಪದ ಕಾರ್ಯಕ್ರಮವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರಂಗಾಯಣ ಆವರಣದಲ್ಲಿ ಬೆಳಗ್ಗೆ ಹೆಚ್ಚಿನ ಚಟುವಟಿಕೆ ಇರಲಿಲ್ಲ. ಒಂದು ವೇಳೆ ಚಲನಚಿತ್ರೋತ್ಸವವಿಲ್ಲದಿದ್ದರೆ, ಸಂಜೆವರೆಗೂ ಇಲ್ಲಿ ಬಣಬಣ ಎನ್ನುತ್ತಿತ್ತು. ಚಲನಚಿತ್ರೋತ್ಸವದಿಂದಾಗಿ ರಂಗಾಯಣ ಅಂಗಳ ಬೆಳಗಿನ ವೇಳೆ ಸ್ವಲ್ಪ ಲವಲವಿಕೆಯಿಂದ ಕೂಡಿತು. ಸಂಜೆಯಾಗುತ್ತಿದ್ದಂತೆಯೇ ರಂಗಾಸಕ್ತರು, ಹಿರಿಯರು, ಯುವಮನಸುಗಳು ತಮ್ಮ ಸ್ನೇಹಿತರು ಮತ್ತು ಹಿತೈಷಿಗಳ ಜತೆಗೂಡಿ ರಂಗಾಯಣ ಅಂಗಳದಲ್ಲಿ ಜಮಾಯಿಸಿದರು. ತಂಡೋಪತಂಡವಾಗಿ ಹೆಚ್ಚು ಜನರು ಭಾಗಿಯಾದ ಕಾರಣ ನಾಟಕ, ಜನಪದ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನೀಲಗಾರರ ಮೇಳಕ್ಕೆ ಜನ ಫಿದಾ:

ಕಿಂದರಿಜೋಗಿ ಆವರಣದಲ್ಲಿ ಜನಪದ ಕಾರ್ಯಕ್ರಮ ಮೋಡಿ ಮಾಡುವಲ್ಲಿ ಯಶಸ್ವಿಯಾಯಿತು. ಗುರುರಾಜ್ ಮತ್ತು ತಂಡದ ನೀಲಗಾರರ ಮೇಳಕ್ಕೆ ಸಾರ್ವಜನಿಕರು ಫಿದಾ ಆದರು. ಗುರುರಾಜ್ ಮತ್ತು ತಂಡ ಬಾಬಾ ಸಾಹೇಬ ಇನ್ನೊಮ್ಮೆ ಬಾ ಬಾ, ಸತ್ಯವಂತರ ಕಥೆಯ ಉತ್ತಮ ಉತ್ತಮರು ಕೇಳಿ ಹೀಗೆ ನಾನಾ ಗೀತೆಗಳ ಮೂಲಕ ಡಾ.ಅಂಬೇಡ್ಕರ್ ಜೀವನ ಚರಿತ್ರೆಯ ದರ್ಶನ ಮಾಡಿಸಿದರು. ಇದಕ್ಕೂ ಮುನ್ನ ನಡೆದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬಸವರಾಜ್ ಮತ್ತು ತಂಡ ಪ್ರಸ್ತುತ ಪಡಿಸಿದ ನಂದಿ ಕೋಲು ನೃತ್ಯ ಪ್ರದರ್ಶನ ಜನಪದ ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿತು.

ನಾಟಕಗಳಿಗೂ ಉತ್ತಮ ಪ್ರತಿಕ್ರಿಯೆ:

ನಾಟಕಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಲಾಮಂದಿರದಲ್ಲಿ ಉಜ್ಜೈನ್‌ನ ಅಂಕೂರ್ ರಂಗಮಂಚ್ ಸಮಿತಿ ತಂಡದ ಅಂಬೇಡ್ಕರ್ ಕ ಬಚ್ಚನ್(ಹಿಂದಿ) ನಾಟಕ, ಭೂಮಿಗೀತ ವೇದಿಕೆಯಲ್ಲಿ ಮಹಾರಾಷ್ಟ್ರದ ಲೋಕ್‌ಜಾಗೃತಿ ನಾಟ್ಯ ಸಂಸ್ಥೆಯ ತೃತೀಯ ರತ್ನ(ಮರಾಠಿ) ನಾಟಕ, ವನರಂಗದಲ್ಲಿ ನಾಲ್ವಡಿ ಸೋಶಿಯಲ್ ಕಲ್ಚರಲ್ ಮತ್ತು ಎಜುಕೇಷನಲ್ ಟ್ರಸ್ಟ್‌ನ ಆಳಿದ ಮಾಸ್ವಾಮಿಗಳು(ಕನ್ನಡ) ನಾಟಕ, ಕಿರುರಂಗಮಂದಿರದಲ್ಲಿ ಮುಂಬೈನ ಶಬ್ಧ್ ಥಿಯೇಟರ್ ಗ್ರೂಪ್ ತಂಡದ ಸಿಫಾರ್(ಹಿಂದಿ) ನಾಟಕ ದ ಪ್ರದರ್ಶನ ನಡೆದವು. ಬಹುತೇಕ ಎಲ್ಲ ರಂಗಮಂದಿರಗಳು ಬಹುತೇಕ ತುಂಬಿದವು.
ಶ್ರೀರಂಗದಲ್ಲಿ ನಡೆಯುತ್ತಿರುವ ಬಹುರೂಪಿ ಚಲನಚಿತ್ರೋತ್ಸವಕ್ಕೂ ಉತ್ತಮ ಪ್ರತಿಕ್ರಿಯೆ ಕಂಡುಬಂತು. ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆಗಳು, ಋತುಮತಿ ಹಾಗೂ ಪಲ್ಲಟ ಸಿನಿಮಾಗಳು ಪ್ರದರ್ಶನಗೊಂಡವು. ಉಳಿದಂತೆ ಕರಕುಶಲ ವಸ್ತುಗಳು, ಪುಸ್ತಕ ಹಾಗೂ ಆಹಾರ ಮಳಿಗೆಗಳ ಮುಂದೆ ಜನಸಮೂಹ ಕಂಡುಬಂತು. ನಾಟಕ ನೋಡಿದ ಕಲಾರಸಿಕರು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ನೆಚ್ಚಿನ ಪುಸ್ತಕಗಳನ್ನು ಖರೀದಿಸಿದರು. ಜತೆಗೆ ಆಹಾರ ಮೇಳದಲ್ಲಿ ಬಗೆ-ಬಗೆಯ ರುಚಿ ಸವಿದರು.