ಊಟಿಯಲ್ಲಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರವನ್ನು ನಿವೃತ್ತ ಐಜಿಪಿ ಡಿ.ಎನ್. ಮುನಿಕೃಷ್ಣ ಉದ್ಛಾಟಿಸಿದರು.ಕರ್ನಲ್ ಪಿ.ಎಲ್ ರಾಘವೇಂದ್ರ, ಮಹೇಶ್ ಮಾಶಾಳ, ಕೆ.ಸಿ. ವಿರೂಪಾಕ್ಷ ಇನ್ನಿತರರಿದ್ದರು 
ಮೈಸೂರು

ಮಾನವೀಯತೆ ಜಾಗೃತಿಗೆ ಜೀವನೋತ್ಸಾಹ ಶಿಬಿರ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಐಜಿಪಿ ಡಿ.ಎನ್. ಮುನಿಕೃಷ್ಣ ಅಭಿಮತ
  • ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸಲು ಸದ್ಭಾವನೆ ಮುಖ್ಯ.
  • ಪದವಿ, ಪುರಸ್ಕಾರಗಳಿಗಿಂತ ನಿಸ್ವಾರ್ಥ ಸೇವೆಯೇ ನಿಜವಾದ ಸಾಧನೆ
ಮೈಸೂರು: ಮಾನವೀಯ ಮೌಲ್ಯಗಳಿಂದ ಜೀವನ ಸುಂದರವಾಗಿಸಲು ಸಾಧ್ಯ ಎಂದು ನಿವೃತ್ತ ಐಜಿಪಿ ಡಿ.ಎನ್. ಮುನಿಕೃಷ್ಣ ಹೇಳಿದರು.
ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಮಾನವೀಯತೆ ಜಾಗೃತಗೊಳ್ಳಲು ಜೀವನೋತ್ಸಾಹ ಶಿಬಿರ ಅಗತ್ಯ. ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸಲು ಸದ್ಭಾವನೆ ಮುಖ್ಯ. ಪದವಿ, ಪುರಸ್ಕಾರಗಳಿಗಿಂತ ನಿಸ್ವಾರ್ಥ ಸೇವೆಯೇ ನಿಜವಾದ ಸಾಧನೆಯಾಗಿದೆ. ಆಧುನಿಕ ಯುಗದಲ್ಲಿ ಜನರು ಜೀವನೋತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳಿಂದ ಉತ್ಸಾಹ ತುಂಬಲು ಸಾಧ್ಯ ಎಂದು ಹೇಳಿದರು.
ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ. ವಿರೂಪಾಕ್ಷ ಮಾತನಾಡಿ, ಬದುಕು ಪ್ರಾಮಾಣಿಕವಾಗಿರಬೇಕು. ಮಾಡುವ ಕೆಲಸಗಳಲ್ಲಿ ಆಸಕ್ತಿ ಮತ್ತು ಶ್ರದ್ಧೆ ಇರಬೇಕು. ವೈಯಕ್ತಿಕ ಬದುಕು ಆದರ್ಶವಾಗಿದ್ದು, ಎಲ್ಲರನ್ನೂ ಪ್ರೀತಿಸುವ ಗುಣ ಮತ್ತು ಸಹಜ ಬದುಕನ್ನು ರೂಢಿಸಿಕೊಳ್ಳಲು ಶರಣರ ಚಿಂತನೆಗಳು ಸ್ಫೂರ್ತಿಯಾಗಿವೆ ಎಂದು ತಿಳಿಸಿದರು.
ಭಾರತೀಯ ಸೇನೆಯ ಸೇನಾ ಪದಕ ಪುರಸ್ಕೃತ ಕರ್ನಲ್ ಪಿ.ಎಲ್. ರಾಘವೇಂದ್ರ ಮಾತನಾಡಿ, ಜನರ ಮನಸ್ಥಿತಿ ಚಂಚಲವಾಗುತ್ತಿದೆ. ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಕೊಟ್ಟು ಅವರ ಬೌದ್ಧಿಕತೆಗೆ ವಿಷವನ್ನು ನೀಡಲಾಗುತ್ತಿದೆ. ಮಕ್ಕಳಲ್ಲಿ ತಾಳ್ಮೆ ಕಡಿಮೆಯಾಗುತ್ತಿದ್ದು, ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಬೆಳೆಸಬೇಕು. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧ ಗಾಢವಾಗಿದ್ದಲ್ಲಿ ದೈವತ್ವ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಬಸವ ಮಂದಿರದ ಅಧ್ಯಕ್ಷ ಶ್ರೀ ಬಸವ ಮರುಳಸಿದ್ದಸ್ವಾಮಿ ಮಾತನಾಡಿ, ಭಾರತೀಯ ತತ್ವಜ್ಞಾನ ಮತ್ತು ಯೋಗ ಪರಂಪರೆಯಲ್ಲಿ ಯೋಗಗಳ ರಾಜನೆಂದು ಶಿವಯೋಗವನ್ನು ಕರೆಯಲಾಗಿದೆ. ಇದು ಕರ್ಮಯೋಗ, ಹಠಯೋಗ ಮತ್ತು ಭಕ್ತಿಯೋಗಳ ಸಮನ್ವಯವಾಗಿದೆ. ಶಿವಯೋಗವು ಅಂತರಂಗದ ದೇವನನ್ನು ಇಷ್ಟಲಿಂಗದ ಮೂಲಕ ಸಾಕ್ಷಾತ್ಕರಿಸಿಕೊಳ್ಳುವ ಅತ್ಯುನ್ನತ ಯೋಗ ಮಾರ್ಗವಾಗಿದೆ ಎಂದು ತಿಳಿಸಿದರು. 
ಶಿಕ್ಷಣ ತಜ್ಞರು ಹಾಗೂ ವಾಗ್ಮಿ ಮಹೇಶ್ ಮಾಶಾಳ ಮಾತನಾಡಿ, ಕಷ್ಟದ ಸಂದರ್ಭಗಳಲ್ಲಿ ಕೋಪ ಅಥವಾ ಅಸಮಾಧಾನ ತೋರಿಸಬಾರದು. ಸಮಸ್ಯೆಗಳನ್ನು ಸ್ಥಿರ ಹಾಗೂ ಶಾಂತಿಯುತ ಮನಸ್ಸಿನಿಂದ ಎದುರಿಸಬೇಕು. ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬದುಕುವುದೇ ನಿಜವಾದ ಸಹನಶೀಲತೆ ಎಂದು ತಿಳಿಸಿದರು.
ಶಿಬಿರದಲ್ಲಿ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನ ಹಾಗೂ ಸಂಜೆ ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಮೈಸೂರು, ಬೆಂಗಳೂರು, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ರಾಯಚೂರು, ಬಾಗಲಕೋಟೆ, ಗದಗ, ಬೆಳಗಾವಿ, ಕಲಬುರಗಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಿಂದ 235 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.