ಮನೆಯೊಳಗೆ ನುಗ್ಗಿದ್ದ ಚಿರತೆ.
- ವೃದ್ಧೆ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!
- ಮನೆಯರಿಗೆ ಆತಂಕ ಮೂಡಿಸಿದ ವನ್ಯಜೀವಿ
ಮೈಸೂರು: ಮೈಸೂರಿನ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ಧಾರ್ಥನಗರದ ಮನೆಯೊಂದಕ್ಕೆ ಹಾಡಹಗಲೇ 4 ವರ್ಷದ ಗಂಡು ಚಿರತೆ ನುಗ್ಗಿ ಆತಂಕ ಮೂಡಿಸಿತು.
ಬಡಾವಣೆಯ ವಿನಯಮಾರ್ಗ ಸುರೇಶ್ ಅವರ ಮನೆಯೊಳಗೆ ಸೇರಿಕೊಂಡ ಚಿರತೆಯು ಕೊಠಡಿಯ ಮಂಚದ ಕೆಳಗೆ ಎರಡೂ ಗಂಟೆಗೂ ಹೆಚ್ಚು ಕಾಲ ವಿರಮಿಸಿತ್ತು. ಮೈಸೂರು ಮಹಾನಗರ ಪಾಲಿಕೆ ನಿವೃತ್ತ ಇಂಜಿನಿಯರ್ ಆಗಿರುವ ಸುರೇಶ್, ಪತ್ನಿ ಸುಜಾತಾ ಹಾಗೂ ತಾಯಿ ಶೈಲಜಾ ಅವರೊಂದಿಗೆ ವಾಸಿಸುತ್ತಿದ್ದಾರೆ.
ಶೈಲಜಾ ವಯೋಸಹಜ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದು, ವ್ಹೀಲ್‌ಚೇರ್ ಸಹಾಯವಿಲ್ಲದೆ ಎಲ್ಲೂ ಹೋಗಲಾರರು. ಬೆಳಗ್ಗೆ ಉಪಾಹಾರ ಸೇವಿಸಿ ಶೈಲಜಾ ಅವರು ರೂಮ್‌ನಲ್ಲಿ ಮಂಚದ ಮೇಲೆ ಮಲಗಿದ್ದಾಗ ಬೆಳಗ್ಗೆ 10.30ರಲ್ಲಿ ಸದ್ದಿಲ್ಲದೆ ಚಿರತೆ ಮನೆ ಪ್ರವೇಶಿಸಿ ಮಂಚದ ಕೆಳಗೆ ಸೇರಿಕೊಂಡಿದೆ.
ಇದು ಯಾರ ಗಮನಕ್ಕೂ ಬಂದಿಲ್ಲ. ಇದು ರೂಮ್‌ನಲ್ಲಿರುವಾಗಲೇ ಮನೆಯವರು 2-3 ಬಾರಿ ಬಂದು ಹೋದರೂ ಚಿರತೆ ಇರುವಿಕೆ ಯಾರಿಗೂ ತಿಳಿಯಲಿಲ್ಲ.
ತುಸು ಸಮಯದ ಬಳಿಕ ಚಿರತೆ ಇರುವಿಕೆ ಗೊತ್ತಾಗುತ್ತಿದ್ದಂತೆ ಮಂಚದ ಮೇಲೆ ಮಲಗಿದ್ದ ಅತ್ತೆ ಶೈಲಜಾ ಅವರನ್ನು ಸೊಸೆ ಸುಜಾತ ಎತ್ತಿಕೊಂಡು ರೂಮ್‌ನಿಂದ ಹೊರಗೆ ಕರೆತಂದು ಸಮಯಪ್ರಜ್ಞೆ ಮೆರೆದಿದ್ದಾರೆ. ಗಾಬರಿಗೊಳಗಾಗಿದ್ದ ಸುಜಾತಾ ಅವರು ಅತ್ತೆಯೊಂದಿಗೆ ಹಾಲ್‌ನಲ್ಲಿ ಎಡವಿ ಬಿದ್ದಿದ್ದಾರೆ.
ನಂತರ ಕೆಲಸದವರ ಸಹಾಯದಿಂದ ಇಬ್ಬರು ಸುರಕ್ಷಿತವಾಗಿ ಮನೆಯಿಂದ ಹೊರಬಂದಿದ್ದಾರೆ. ಬಳಿಕ ಸುಜಾತಾ ಮತ್ತೆ ಕೊಠಡಿಯೊಳಗೆ ಹೋಗಿ ಬಾಗಿಲ ಬಳಿ ನಿಂತು ಮಂಚದ ಕೆಳಗೆ ನೋಡಿದಾಗ ಚಿರತೆ ತಲೆ ಆಡಿಸಿದ್ದು ಕಂಡುಬಂದಿದೆ. ತಕ್ಷಣ ರೂಮ್ ಬಾಗಿಲು ಹಾಕಿದ್ದಾರೆ.
ನಿದ್ರೆಗೆ ಜಾರಿದ ಚಿರತೆ!
ಬಿಸಿಲಿನ ಧಗೆಗೆ ಬಸವಳಿದಿದ್ದ ಚಿರತೆ ಕೊಠಡಿ ಸೇರುತ್ತಿದ್ದಂತೆ ಫ್ಯಾನ್ ಗಾಳಿ ಹಾಗೂ ತಂಪಾದ ನೆಲೆದಿಂದಾಗಿ ನಿದ್ರೆಗೆ ಜಾರಿದೆ. ರೂಮ್‌ನಲ್ಲಿ ಕುಟುಂಬದ ಸದಸ್ಯರು ಎರಡ್ಮೂರು ಬಾರಿ ಓಡಾಡಿದರೂ ಚಿರತೆಯ ಗಮನಕ್ಕೂ ಬಂದಿಲ್ಲ. ಮಂಚದ ಮೇಲೆ ವೃದ್ಧೆ ಶೈಲಜಾ ಮಲಗಿದ್ದರೂ, ಅವರ ತಂಟೆಗೆ ಹೋಗದೆ ಚಿರತೆ ನಿದ್ರೆ ಮಾಡಿದೆ.
2 ನಿಮಿಷ ವಿಡಿಯೋದಲ್ಲಿ ಪತ್ತೆ:
ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಕೊಠಡಿ ಬಾಗಿಲು ತೆರೆಯದೆ ಹಿಂಭಾಗದ ಕಿಟಿಕಿ ಮೂಲಕ ಪರಿಶೀಲಿಸಿದರೂ ಚಿರತೆ ಮಂಚದ ಕೆಳಗಿರುವುದು ಗೊತ್ತಾಗಲಿಲ್ಲ. ಹೀಗಾಗಿ ಮಂಚದ ಕೆಳಗೆ ಏನಿದೆ ಎಂದು ಪರಿಶೀಲಿಸಲು ಅರಣ್ಯ ಸಿಬ್ಬಂದಿ ಕಡ್ಡಿಯೊಂದಕ್ಕೆ ಮೊಬೈಲ್‌ವೊಂದನ್ನು ಕಟ್ಟಿ, ಕಿಟಕಿಯಿಂದ ಮಂಚದ ಕೆಳಗೆ ಇಟ್ಟು ವಿಡಿಯೋ ಮಾಡಿದರು. ಎರಡು ನಿಮಿಷ ವಿಡಿಯೋ ಮಾಡಿದ ಮೇಲೆ ಕಡ್ಡಿಯನ್ನು ಹೊರಗೆ ತಂದು ಮೊಬೈಲ್ ಪರಿಶೀಲಿಸಿದಾಗ ವಿಡಿಯೋದಲ್ಲಿ ಚಿರತೆ ಇರುವುದು ಗೊತ್ತಾಯಿತು.
ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ
ಬಳಿಕ ಚಾಮರಾಜೇಂದ್ರ ಮೃಗಾಲಯದ ಪಶುವೈದ್ಯ ಶಶಿಧರ್ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ಡಾರ್ಟ್ ಮಾಡುವಲ್ಲಿ ಯಶಸ್ವಿಯಾದರು. ಕೆಲ ನಿಮಿಷದ ಬಳಿಕ ಚಿರತೆ ಮಂಪರಿಗೆ ಜಾರಿತು. ನಂತರ ಚಿರತೆ ಕಾರ್ಯಪಡೆ ಸಿಬ್ಬಂದಿ ರೂಂ ಪ್ರವೇಶಿಸಿ ಚಿರತೆಯನ್ನು ಹೊರಗೆ ತಂದು ಬಲೆಯಲ್ಲಿ ಸುತ್ತಿದರು.
ಮನೆ ಹೊರತಂದು ವಾಹನದಲ್ಲಿದ್ದ ಬೋನಿನೊಳಗೆ ಹಾಕಿದರು. ಮಂಪರಿನಿಂದ ಚಿರತೆಯನ್ನು ಹೊರಗೆ ತರಲು ಮತ್ತೊಂದು ಚುಚ್ಚುಮದ್ದು ನೀಡಿ, ಕೂರ್ಗಳ್ಳಿಯಲ್ಲಿರುವ ಚಾಮರಾಜೇಂದ್ರ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು.
ಕಾಯಾಚರಣೆಯಲ್ಲಿ ಎಸಿಎಫ್ ರವೀಂದ್ರ, ಎಲ್‌ಟಿಎಫ್ ಆರ್‌ಎಫ್‌ಒ ಎಚ್.ಪುಟ್ಟಸ್ವಾಮಿ ಸೇರಿದಂತೆ 30ಕ್ಕೂ ಹೆಚ್ಚು ಎಲ್‌ಟಿಎಫ್ ಸಿಬ್ಬಂದಿ ಪಾಲ್ಗೊಂಡಿದ್ದರು.