ನಾಗರಹೊಳೆ ಉದ್ಯಾನದ ಸಫಾರಿ ಲೈನ್‌ನಿಂದ ಪುಟಾಣಿ ಆನೆಮರಿಯು ತಾಯಿಯೊಂದಿಗೆ ಕಬಿನಿ ಹಿನ್ನೀರಿನ ಕಡೆಗೆ ಗಜಪಡೆ ಹೆಜ್ಜೆ ಹಾಕಿದವು.  
ಮೈಸೂರು

ಸಫಾರಿ ದಾರಿಯಲ್ಲಿ ಗಜಪಡೆಯ ದಂಡು

ಪ್ರಮುಖ ಮುಖ್ಯಾಂಶಗಳು

  • ಆನೆಗಳ ಹಿಂಡು ನೋಡಿ ರೋಮಾಂಚನಗೊಂಡ ಪ್ರವಾಸಿಗರು
ಹುಣಸೂರು: ಸಫಾರಿ ದಾರಿಯಲ್ಲಿ ಕಾಣಿಸಿಕೊಂಡ ಗಜಪಡೆಯ ದಂಡನ್ನು ನೋಡಿ ರೋಮಾಂಚನಗೊಂಡ ಪ್ರವಾಸಿಗರು...
ಪುಟಾಣಿ ಮರಿಯ ಸುತ್ತ ಆನೆಗಳ ಹಿಂಡು ಸುರಕ್ಷಿತವಾಗಿ ಕರೆದುಕೊಂಡು ಹೋದ ಪರಿ ಕಂಡು ಮೂಕವಿಸ್ಮಿತರಾದ ಮಂದಿ..
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದ ಇತ್ತೀಚೆಗೆ ಸಫಾರಿಗೆ ತೆರಳಿದ ಪ್ರವಾಸಿಗರು ಈ ದೃಶ್ಯವನ್ನು ಕಂಡು ಅವರ ಖುಷಿಗೆ ಎಣೆಯೇ ಇಲ್ಲದಂತಾಯಿತು. ಒಂದೇ ಬಾರಿ ಹತ್ತಾರು ಆನೆಗಳ ಹಿಂಡು ಸಫಾರಿ ದಾರಿಯನ್ನು ದಾಟಿ ಕಬಿನಿ ಹಿನ್ನೀರಿನತ್ತ ದಾಂಗುಡಿಯಿಟ್ಟದ್ದನ್ನು ಕಂಡರು. ಆನೆಗಳ ಹಿಂಡು ಬಂದ ಕೂಡಲೇ ಪ್ರವಾಸಿಗರು ತಮ್ಮ ವಾಹನಗಳನ್ನು ಸ್ತಬ್ದಗೊಳಿಸಿದರು. ನಿಶ್ಶಬ್ಧವಾಗಿನಿಂತು ಆನೆ ಕುಟುಂಬ ದಾಟುತ್ತಿರುವ ದೃಶ್ಯ ಕಣ್ತುಂಬಿಕೊಂಡರು. ಅದರಲ್ಲೂ ಗುಂಪಿನಲ್ಲಿದ್ದ ಮರಿಯಾನೆಯನ್ನು ತಾಯಿ, ಅಕ್ಕ, ತಮ್ಮ, ತಂಗಿ ಎಲ್ಲರೂ ಸೈನಿಕರಂತೆ ಸುತ್ತುವರೆದು ಸುರಕ್ಷಿತವಾಗಿ ಕರೆದೊಯ್ದ ದೃಶ್ಯ ಅವರನ್ನು ಮೂಕವಿಸ್ಮಿತರನ್ನಾಗಿಸಿತು. ಇದೇ ವೇಳೆ ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ಅವರು ಕ್ಯಾಮೆರಾದಲ್ಲಿ ಮರಿಯನ್ನು ರಕ್ಷಣೆ ಮಾಡುತ್ತಾ ಹಿನ್ನೀರಿಗೆ ಕರೆದೊಯ್ಯುತ್ತಿರುವುದನ್ನು ವಿಡಿಯೋ ಮಾಡಿಕೊಂಡರು. ಒಟ್ಟೊಟ್ಟಿಗೆ ಆನೆ ಕಂಡು ಭಯದಿಂದ ಉಸಿರು ಕೈಯಲ್ಲಿ ಹಿಡಿದು ವೀಕ್ಷಿಸುವುದು ಒಂದಡೆಯಾದರೆ, ಮತ್ತೊಂದೆಡೆ ಅಪರೂಪದಲ್ಲಿ ಅಪರೂಪಕ್ಕೆಂಬಂತೆ ಇಷ್ಟೊಂದು ಗುಂಪಾನೆಗಳನ್ನು ನೋಡಿದೆವಲ್ಲ ಎನ್ನುವ ಖುಷಿಯಿಂದ ಪ್ರವಾಸಿಗರು ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.
ಬೇಸಿಗೆಯಲ್ಲಿ ಯಾವಾಗಲೂ ಉದ್ಯಾನದಿಂದ ಕಬಿನಿ ಹಿನ್ನೀರಿನ ಕಡೆ ಬೆಳಗ್ಗೆ-ಸಂಜೆ ವೇಳೆ ಆನೆಗಳು ಸಾಗುವುದು ಸರ್ವೆ ಸಾಮಾನ್ಯ, ಆದರೆ ಇಲ್ಲಿ ಚಿಕ್ಕ ಮರಿಯನ್ನು ರಕ್ಷಣೆಯಲ್ಲಿ ಗುಂಪಾಗಿ ಕರೆದೊಯ್ಯುತ್ತಿದೆ. ವನ್ಯಪ್ರಾಣಿಗಳು ರಸ್ತೆ ದಾಟುವಾಗಿ ವಾಹನ ಸವಾರರು ಸಂಯಮದಿಂದ ವಾಹನ ನಿಲ್ಲಿಸಿ ದಾಟಲು ಅವಕಾಶ ಮಾಡಿಕೊಟ್ಟು ಇಲಾಖೆಯೊಂದಿಗೆ ಸಹಕರಿಸಬೇಕು. ಎಂದು ಡಿಆರ್‌ಎಫ್‌ಓ ನವೀನ್ ಕೋರುತ್ತಾರೆ.