ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಜಯಂತಿ ಸಮಾರಂಭದಲ್ಲಿ ಗಣ್ಯರು ರಾಷ್ಟ್ರಕವಿ ಕುವೆಂಪುರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್, ಗಣೇಶ್‌ಗೌಡ, ಬೆಂಕಿಪುರ ಚಿಕ್ಕಣ್ಣ, ಎಸ್.ಜಯರಾಂ ಇತರರಿದ್ದರು.
ಹುಣಸೂರು: ಈ ನೆಲದ ಪರಂಪರೆ, ಸಂಸ್ಕೃತಿಯನ್ನು ಒಳಗೊಂಡು ಎಲ್ಲ ವಿಚಾರಗಳಿಗೆ ಆಧುನಿಕತೆಯ ಸ್ಪರ್ಷ ನೀಡಿ ಕನ್ನಡದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮೇರು ಸಾಹಿತಿ ಕುವೆಂಪು ಆಗಿದ್ದಾರೆ ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಬಣ್ಣಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಮಾನವ ಜಯಂತಿ ಸಮಾರಂಭದಲ್ಲಿ ಮಾತನಾಡಿದರು
ಕುವೆಂಪು ನಮ್ಮ ಪರಂಪರೆ, ಧಾರ್ಮಿಕ ಆಚರಣೆಗಳನ್ನು ವಿರೋಧಿಸಲಿಲ್ಲ. ಧಾರ್ಮಿಕತೆಯ ಹೆಸರಿನಲ್ಲಿ ಆಚರಿಸುವ ಮೂಢನಂಬಿಕೆಗಳನ್ನು ಪ್ರಬಲವಾಗಿ ವಿರೋಧಿಸಿದರು. ಕಂದಾಚಾರಗಳನ್ನು ಮೂಲೆಗಟ್ಟಿ ಎಂದರು. ಸರಳ ಬದುಕಿಗಾಗಿ ಮಂತ್ರ ಮಾಂಗಲ್ಯ ಪ್ರತಿಪಾದಿಸಿದರು. ಶ್ರೀರಾಮಾಯಣದರ್ಶನಂ ರಚನೆ ಸಾಧ್ಯವಿಲ್ಲವೆನ್ನುವ ಕಾಲಘಟ್ಟದಲ್ಲಿ ಮಹಾಕಾವ್ಯವನ್ನು ರಚಿಸಿ ವಾಲ್ಮೀಕಿ ರಾಮಾಯಣದಲ್ಲಿನ ಗೌಣ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿ ಪಾತ್ರಗಳ ಅನಿವಾರ್ಯತೆಯನ್ನು ಪ್ರತಿಪಾದಿಸಿದರು ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ ಮಾತನಾಡಿದರು. ಮುಖಂಡರಾದ ವಿ.ಎನ್.ದಾಸ್, ಕಿರಂಗೂರು ಬಸವರಾಜು, ಅಸ್ವಾಳ್ ಕೆಂಪೇಗೌಡ, ಕಸಾಪ ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ, ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಗುರುಪುರ ಖಾಲಿದ್, ಡಿ.ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಎಸ್.ಜಯರಾಂ ಇತರರು ಇದ್ದರು.