ಹನುಮ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹನುಮೋತ್ಸವದಲ್ಲಿ ವಿರಾಜವಾನರಾಗಿ ಗಮನ ಸೆಳೆದ ಹನುಮ ಮೂರ್ತಿಗಳು.
- ಗಮನ ಸೆಳೆದ ಆಂಜನೇಯ ಮೂರ್ತಿಗಳು
- ಶಾಂತಿಯುತವಾಗಿ ನಡೆದ ಬಜರಂಗಬಲಿಯ ಮೆರವಣಿಗೆ
- ಮೈಸೂರು ಹನುಮಂತೋತ್ಸವ ಸಮಿತಿಯಿಂದ ಆಯೋಜನೆ
ಮೈಸೂರು: ಮೈಸೂರು ಹನುಮಂತೋತ್ಸವ ಸಮಿತಿಯಿಂದ ನಗರದಲ್ಲಿ ಶನಿವಾರ 7ನೇ ವರ್ಷದ ಹನುಮಂತೋತ್ಸವ ಮೆರವಣಿಗೆ ಶ್ರದ್ಧಾಭಕ್ತಿಯೊಂದಿಗೆ ಅತ್ಯಂತ ವೈಭವದಿಂದ ನೆರವೇರಿತು.
ಹನುಮ ಜಯಂತಿಯ ಪ್ರಯುಕ್ತ ‘ಮೈಸೂರು ಹನುಮ ಹಬ್ಬದ’ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಗನ್‌ಹೌಸ್ ವೃತ್ತದವರೆಗೆ ಅಲಂಕೃತ ರಥದಲ್ಲಿ ಶ್ರೀಮಾರುತಿ ಉತ್ಸವ ಮೂರ್ತಿಯನ್ನು ಕೂರಿಸಿ ಸಹಸ್ರಾರು ಸಾರ್ವಜನಿಕರ ಸಮ್ಮುಖದಲ್ಲಿ ಮೆರವಣಿಗೆ ಮಾಡಲಾಯಿತು.
ತೆರೆದ ವಾಹನದಲ್ಲಿ ವಿರಾಜಮಾನರಾಗಿ ನಿಂತಿದ್ದ ಹನುಮಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.
ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟ ಆಂಜನೇಯಸ್ವಾಮಿ ಮೂರ್ತಿಗಳ ಮೆರವಣಿಗೆ ದೊಡ್ಡಗಡಿಯಾರ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಸಯ್ಯಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಶಾಂತಲಾ ಚಿತ್ರಮಂದಿರ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಶ್ರೀ ಶಿವರಾತ್ರಿರಾಜೇಂದ್ರ ವೃತ್ತದ ಮೂಲಕ ಗನ್‌ಹೌಸ್‌ನಲ್ಲಿ ಅಂತ್ಯಗೊಂಡಿತು.
ಹನುಮಮೂರ್ತಿಗಳು ಅಲ್ಲದೆ, ಈಶ್ವರನ ಮೂರ್ತಿ, ಶ್ರೀರಾಮನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ರಾಮ, ಹನುಮ ಹಾಗೂ ವಿವಿಧ ವೇಷಧಾರಿಗಳು ಗಮನ ಸೆಳೆದರು. ವಿವಿಧ ಗೊಂಬೆಗಳ ಮುಖವಾಡ ತೊಟ್ಟವರು ಮೆರವಣಿಗೆಗೆ ಮೆರುಗು ತಂದುಕೊಟ್ಟರು.
ರಾವಣನ ವಿರುದ್ಧ ಸೆಣಸಾಡುವಾಗ ಗಧೆಯನ್ನು ಎತ್ತಿದ ಹನುಮಂತ, ಜೈ ಶ್ರೀರಾಮ್ ಎನ್ನುವಂತೆ ಗಧೆಯ ಹಿಡಿದು ನಿಂತಿರುರುವ ಹನುಮ, ಓಂ ಅಕ್ಷರದ ಎದುರು ನಿಂತಿದ್ದ ಹನುಮ ಸೇರಿದಂತೆ ವಿವಿಧ ಮಾದರಿಯ ಹನುಮನ ಮೂರ್ತಿಗಳು ಗಮನ ಸೆಳೆದರೆ, ತಪಸ್ಸು ಕುಳಿತಿದ್ದ ಈಶ್ವರನ ಮೂರ್ತಿ ಮನಮೋಹಕವಾಗಿ ಭಕ್ತಾದಿಗಳನ್ನು ಆಕರ್ಷಿಸಿತು.
ಗಣ್ಯರಿಂದ ಮೆರವಣಿಗೆಗೆ ಚಾಲನೆ
ಇದಕ್ಕೂ ಮೊದಲು ಬೆಳಗ್ಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೊದಲಿಗೆ ಹೋಮ-ವಹನ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ತುಳಸಿ, ಮೈಸೂರು ಮಲ್ಲಿಗೆ, ವೀಳ್ಯೆದೆಲೆ, ಹಲಸಂದೆ ವಡೆ, ನಿಪ್ಪಟ್ಟು ಹಾರವನ್ನು ಹಾಕಿ ಹೂವಿನ ಅಲಂಕಾರದಿಂದ ಸಿಂಗಾರಗೊಳಿಸಲಾಗಿದ್ದ ಹನುಮಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ, ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ ಮತ್ತಿತರರು ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಕಲಾತಂಡಗಳ ಮೆರುಗು
ಮೆರವಣಿಗೆಯಲ್ಲಿ ನಂದಿಕಂಬ, ವೀರಗಾಸೆ, ಕಂಸಾಳೆ, ಬೀಸುಕಂಸಾಳೆ, ಗಾರುಡಿಗೊಂಬೆ, ಡೊಳ್ಳುಕುಣಿತ, ನಗಾರಿ, ಕಾಡಿನ ಮಕ್ಕಳ ವೇಷಧಾರಿಗಳು, ಪೂಜಾ ಕುಣಿತ, ಒಂಟಿ ಬಸವ ಕಲಾ ತಂಡಗಳು ಗಮನ ಸೆಳೆದವು. ಕೆಲ ಪಾಲಕರು ತಮ್ಮ ಮಕ್ಕಳಿಗೆ ಹನುಮಂತನ ವೇಷ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿಸಿದರು.
ಮೆರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯ ಸಾರ್ವಜನಿಕರು ಕೇಸರಿ ಶಾಲು ಧರಿಸಿ, ಕೇಸರಿಯ ದೊಡ್ಡ ದೊಡ್ಡ ಬಾವುಟಗಳನ್ನು ಹಿಡಿದು ಸಾಗಿದರು. ಜೈ ಶ್ರೀರಾಮ್, ಜೈ ಜೈ ರಾಮ್, ಜೈ ಆಂಜನೇಯ, ಜೈ ಹನುಮಂತ, ಪವನಸುತ ಹನುವಾನ್ ಕೀ ಜೈ ಮೊದಲಾದ ಘೋಷಣೆಗಳನ್ನು ಮೊಳಗಿಸಿದರು.
ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ಅವರೇ ಖುದ್ದು ಪೊಲೀಸ್ ಬಂದೋಬಸ್ತ್ ನೋಡಿಕೊಂಡರು. ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎಸ್.ಸುಂದರರಾಜ್ ನೇತೃತ್ವದಲ್ಲಿ ಸಿಎಆರ್ ಡಿಸಿಪಿ, ನಾಲ್ವರು ಎಸಿಪಿಗಳು, 15ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು, 25 ಸಬ್ ಇನ್‌ಸ್ಪೆಕ್ಟರ್‌ಗಳು, ಸಿಎಆರ್, ಕೆಎಸ್‌ಆರ್‌ಪಿ, ಕಮಾಂಡೋ ಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ನೃತ್ಯ ಪ್ರದರ್ಶಿಸಿದ ಜಿಟಿಡಿ, ನಾಗೇಂದ್ರ
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಿ.ಟಿ. ದೇವೇಗೌಡರು ತಮಟೆಯ ಸದ್ದಿಗೆ ನೃತ್ಯಪ್ರದರ್ಶಿಸಿದರು. ಮೆರವಣಿಗೆಯಲ್ಲಿ ಸ್ವಲ್ಪ ದೂರ ಹೆಜ್ಜೆ ಹಾಕಿದರು ಜತೆಗೆ ಮಾಜಿ ಶಾಸಕ ಎಲ್.ನಾಗೇಂದ್ರ ಕೂಡ ಹೆಜ್ಜೆ ಹಾಕಿ ಸಾಥ್ ನೀಡಿದರು.
ಮಾಜಿ ಮೇಯರ್ ಎಸ್.ಸಂದೇಶ್ ಸ್ವಾಮಿ, ಶಿವಕುಮಾರ್, ಹಿರಿಯ ವಕೀಲ ಎಚ್.ಎನ್.ವೆಂಕಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್‌ಗೌಡ, ಎಂ.ಸತೀಶ್, ಛಾಯಾದೇವಿ, ವಿವಿ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್, ಹನುಮಂತೋತ್ಸವ ಸಮಿತಿಯ ಸಂಜಯ್, ಶಂಭು, ಮನು, ಅಪ್ಪಿ ಸೇರಿದಂತೆ ಅನೇಕರು ಇದ್ದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಂಘಟನೆಯೊಂದರ ಪದಾಧಿಕಾರಿಗಳು ಪ್ರಸಾದ ವಿತರಿಸಿದರು.