ಆಂಜನೇಯಸ್ವಾಮಿ 
ಮೈಸೂರು

ಶ್ರೀರಂಗಪಟ್ಟಣದಲ್ಲಿ ಡಿ.3 ರಂದು ಬೃಹತ್ ಹನುಮ ಮಾಲಾ ಸಂಕೀರ್ತನ ಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಹನುಮ ಮಂದಿರ ಪುನರ್ ನಿರ್ಮಾಣಕ್ಕೆ ಆಗ್ರಹ
  • ಶ್ರೀರಂಗಪಟ್ಟಣದ ನಿಮಿಷಾಂತ ದೇವಸ್ಥಾನದಲ್ಲಿ ಸಭೆ
ಮೈಸೂರು: ಶ್ರೀರಂಗಪಟ್ಟದಣದ ಮೂಡಲ ಬಾಗಿಲು ಹನುಮ ಮಾಲಾ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ ಸಂಯುಕ್ತಾಶ್ರಯದಲ್ಲಿ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ ಪುನರ್ ನಿರ್ಮಾಣ ಮಾಡಬೇಕೆಂಬ ಸಂಕಲ್ಪದೊಂದಿಗೆ ಡಿ.3 ರಂದು ಬೃಹತ್ ಹನುಮ ಮಾಲಾ ಸಂಕೀರ್ತನ ಯಾತ್ರೆ ಹಾಗೂ ಮಾಲಾ ವಿಸರ್ಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಾಂತ ಪ್ರಮುಖ ಲೋಹಿತ್ ವಿ. ಅರಸ್ ತಿಳಿಸಿದರು.
ಶ್ರೀರಂಗಪಟ್ಟಣದಲ್ಲಿದ್ದ ಭವ್ಯವಾದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು 1786ರಲ್ಲಿ ಟಿಪ್ಪು ಕೆಡವಿದನಲ್ಲದೆ, ಅಲ್ಲಿನ ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಜತೆಗೆ ಅಲ್ಲಿದ್ದ ಹನುಮ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಎಸೆದಿದ್ದ. ಅಂದಿನಿಂದಲೂ ಅಲ್ಲಿನ ಹನುಮ ಭಕ್ತರು ತೀವ್ರ ಅಪಮಾನ ಹಾಗೂ ನೋವನ್ನು ಸಹಿಸಿಕೊಂಡಿದ್ದಾರೆ. ಹೀಗಾಗಿ ಹನುಮಮೂರ್ತಿ ಮೂಲ ಸ್ಥಾನ ಸೇರಬೇಕು, ಭವ್ಯವಾದ ಹನುಮ ಮಂದಿರ ಶಾಂತಿಯುತವಾಗಿ ನಿರ್ಮಿಸಬೇಕೆಂಬ ಸಂಕಲ್ಪದೊಡನೆ ಪ್ರತಿ ವರ್ಷ ಹನುಮ ಮಾಲಾ ಸಂಕೀರ್ತನ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ಶ್ರೀರಂಗಪಟ್ಟಣದ ನಿಮಿಷಾಂತ ದೇವಸ್ಥಾನದ ಆವರಣದಲ್ಲಿ ಸಭೆ ನಡೆಯಲಿದೆ. 11ಕ್ಕೆ ಬೃಹತ್ ಸಂಕೀರ್ತನ ಯಾತ್ರೆ ಅಲ್ಲಿಂದ ಪ್ರಾರಂಭಗೊಂಡು ಶ್ರೀರಂಗಪಟ್ಟಣದ ಕೋಟೆ ತಲುಪಿ ನಂತರ ಮೂಡಲ ಬಾಗಿಲು ಆಂಜನೇಯಸ್ವಾಮಿ ದರ್ಶನ ಪಡೆದು, ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ. ಬಳಿಕ ಅದೇ ಮೈದಾನದಲ್ಲಿ ಮಾಲಾ ವಿಸರ್ಜನೆ, ಪ್ರಸಾದ ವಿನಿಯೋಗ ನಡೆಯಲಿದೆ. ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದು ಮುಖಂಡರಾದ ಬಾಲರಾಜ್, ರಂಗಸ್ವಾಮಿ, ಸುಜನ್‌ಗೌಡ, ಲಕ್ಷ್ಮೀ ನಾರಾಯಣ ಇದ್ದರು.