ನಗರದ ಇತಿಹಾಸ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಮಾಘ ಮಾಸ ಹಾಗೂ ಮಹಾಶಿವರಾತ್ರಿಯ ಅಂಗವಾಗಿ ಭಾನುವಾರ ವಿಜಯಯಾತ್ರೆ ಜರುಗಿತು. ಶೃಂಗೇರಿ ಶಾರದಾ ಪೀಠ, ಶ್ರೀವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀವಿದ್ಯಾನಂದ ಸ್ವಾಮೀಜಿ, ಕನ್ನಡಾಂಬೆ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಬಿ. ರಾಜಶೇಖರ್, ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್, ಕೃಷ್ಣ ಇತರರು ಇದ್ದರು. 
ಮೈಸೂರು

ನಂಜನಗೂಡಿನಲ್ಲಿ ವಿಜೃಂಭಣೆಯ ವಿಜಯಯಾತ್ರೆ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • glorious victory procession
ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಗರದ ಇತಿಹಾಸ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಮಾಘ ಮಾಸ ಹಾಗೂ ಮಹಾಶಿವರಾತ್ರಿಯ ಅಂಗವಾಗಿ ಭಾನುವಾರ ವಿಜಯಯಾತ್ರೆ ಅದ್ದೂರಿಯಾಗಿ ನೆರವೇರಿತು.
ಶ್ರೀಕಂಠೇಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆ.ಜಿ. ದೇವಪಟ್ಟಣದ ಶೃಂಗೇರಿ ಶಾರದಾ ಪೀಠ, ಶ್ರೀವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀವಿದ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಿಶೇಷ ಪೂಜೆ ಮತ್ತು ಮೆರವಣಿಗೆ: ಕಾರ್ಯಕ್ರಮದ ಆರಂಭದಲ್ಲಿ ಅರ್ಚಕ ನಾಗಚಂದ್ರ ದೀಕ್ಷಿತ್ ಅವರು ಶ್ರೀಕಂಠೇಶ್ವರನ ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಬಳಿಕ ಹಂಗರಹಳ್ಳಿ ಬಸವಣ್ಣ ಮತ್ತು ಕವಣಪುರದ ಬಸವಣ್ಣಗಳ ಜತೆಗೆ ಮಂಗಳವಾದ್ಯಗಳ ಸಮೇತ ನಗರದ ರಥ ಬೀದಿಯಲ್ಲಿ ದೇವರ ಮೆರವಣಿಗೆಯನ್ನು ನಡೆಸಲಾಯಿತು.
ಧರ್ಮ ರಕ್ಷಣೆ ನಮ್ಮ ಹೊಣೆ
ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀವಿದ್ಯಾನಂದ ಸ್ವಾಮೀಜಿ, ನಂಜನಗೂಡು ಸಾಕ್ಷಾತ್ ಈಶ್ವರನೇ ನೆಲೆಸಿರುವ ಪುಣ್ಯಭೂಮಿ. ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ತ್ರಿವೇಣಿ ಸಂಗಮವಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹೆಸರಿನಲ್ಲಿ ಕೆಲವೊಮ್ಮೆ ಸನಾತನ ಧರ್ಮಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾವು ನಮ್ಮ ಮೂಲ ಸನಾತನ ಧರ್ಮದ ಆಚರಣೆಗಳನ್ನು ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಗೋಮಾತೆಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ನಂತರ ಶ್ರೀವಿದ್ಯಾನಂದ ಸ್ವಾಮೀಜಿ ಹಂಗರಹಳ್ಳಿ ಬಸವಣ್ಣ ಹಾಗೂ ಕವಣಪುರದ ಬಸವಣ್ಣನ ಜತೆಗೂಡಿ ನಂಜನಗೂಡಿನ ಶೃಂಗೇರಿ ಶಾಖಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಬಿ. ರಾಜಶೇಖರ್, ಕೃಷ್ಣ ಇತರರು ಇದ್ದರು.
ಗೋವುಗಳ ಸಂರಕ್ಷಣೆ ಆಗಬೇಕಿದೆ: ದೇಶದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಗೋವನ್ನು ಎರಡನೇ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು ಎಂದು ಹಂಗರಹಳ್ಳಿಯ ಕೆ.ಜಿ ದೇವಪಟ್ಟಣದ ಶೃಂಗೇರಿ ಶಾರದಾ ಪೀಠ, ಶ್ರೀವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀವಿದ್ಯಾನಂದ ಸ್ವಾಮೀಜಿ ಒತ್ತಾಯಿಸಿದರು.
ವಿಜಯಯಾತ್ರೆಯಲ್ಲಿ ಮಾತನಾಡಿದ ಅವರು, ಗೋವುಗಳನ್ನು ಹತ್ಯೆ ಮಾಡುವುದರಿಂದ ಮನಸ್ಸುಗಳು ಕಲುಷಿತವಾಗುತ್ತಿವೆ. ಆದ್ದರಿಂದ ನಾವು ನಂಜನಗೂಡಿನಿಂದಲೇ ವಿಜಯಯಾತ್ರೆ ಮಾಡುತ್ತಿದ್ದೇವೆ. ಸನಾತನ ಧರ್ಮವನ್ನು ಉಳಿಸಿರುವ ಗೋಮಾತೆಗೆ ರಕ್ಷಣೆ ನೀಡಬೇಕಿದೆ. ಈ ಬಗ್ಗೆ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದೇವೆ. ಗೋಹತ್ಯೆ ನಿಷೇಧ ಮಾಡಿದರೆ ದೇಶ ಸುಭೀಕ್ಷವಾಗಲಿದೆ ಎಂದು ತಿಳಿಸಿದರು.