ಮೈಸೂರು, ಅಕ್ಟೋಬರ್: ನಾಡಹಬ್ಬ ದಸರಾ ಸಂಭ್ರಮದ ನಡುವೆ ಮೈಸೂರಿನ ಸಾಂಪ್ರದಾಯಿಕ ಆಹಾರ ಪರಂಪರೆಗೆ ಹೊಸ ರೂಪ ನೀಡುವ ಪ್ರಯತ್ನಕ್ಕೆ ನಿಯಾನ್ ಕ್ಯಾಸಲ್ ಮೈಸೂರು ಮುಂದಾಗಿದೆ. ನಗರದ ಪ್ರಸಿದ್ಧ ಆಹಾರ ಸಂಸ್ಥೆಗಳಾದ ವರ್ಲ್ಡ್ ಆಫ್ ಮೈಸೂರ್ ಪಾಕ್ ಮತ್ತು ಹನುಮಂತು ಪಲಾವ್ಗಳ ಪಾಕಪರಂಪರೆಯಿಂದ ಸ್ಫೂರ್ತಿ ಪಡೆದು, ವಿಶಿಷ್ಟ ರುಚಿಯ ಹೊಸ ತಿನಿಸುಗಳನ್ನು ಪರಿಚಯಿಸುತ್ತಿದೆ.
ನಿಯಾನ್ ಕ್ಯಾಸಲ್ನ ಬಾಣಸಿಗರಾದ ಶಮಂತ್ ಮತ್ತು ಕೀರ್ತನಾ ಅವರು ಈ ಎರಡೂ ಸಂಸ್ಥೆಗಳ ಅಡುಗೆಮನೆಗಳಿಗೆ ಭೇಟಿ ನೀಡಿ, ತಲೆಮಾರುಗಳಿಂದ ನಡೆದುಬಂದಿರುವ ಪಾಕವಿಧಾನಗಳು, ತಯಾರಿಕಾ ತಂತ್ರಗಳು ಹಾಗೂ ಅವುಗಳ ಹಿಂದಿನ ಕಥೆಗಳನ್ನು ತಿಳಿದುಕೊಂಡಿದ್ದಾರೆ. ಈ ಅನುಭವದ ಆಧಾರದಲ್ಲಿ ಮೈಸೂರಿನ ಪರಿಚಿತ ರುಚಿಗಳಿಗೆ ಆಧುನಿಕ ಅಡುಗೆ ಶೈಲಿಯ ಸ್ಪರ್ಶ ನೀಡಿದ್ದಾರೆ.
ಮೈಸೂರ್ ಪಾಕ್ಗೆ ಮಲ್ಲಿಗೆಯ ಸುವಾಸನೆ
ಮೈಸೂರಿನ ಪ್ರಸಿದ್ಧ ಸಿಹಿತಿನಿಸಾದ ಮೈಸೂರ್ ಪಾಕ್ನ ಪರಂಪರೆಯನ್ನು ಅರಿಯಲು ಬಾಣಸಿಗರು ವರ್ಲ್ಡ್ ಆಫ್ ಮೈಸೂರ್ ಪಾಕ್ನ ಸಂಸ್ಥಾಪಕರನ್ನು ಭೇಟಿ ಮಾಡಿ, ಅದರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು, ಸಾಂಪ್ರದಾಯಿಕ ವಿಧಾನಗಳು ಮತ್ತು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ತಂತ್ರಗಳನ್ನು ಕಲಿತಿದ್ದಾರೆ.
ಈ ಅನುಭವದಿಂದ ಪ್ರೇರಣೆ ಪಡೆದು ಮೈಸೂರು ಮಲ್ಲಿಗೆಯ ಸುವಾಸನೆಯ ಐಸ್ಕ್ರೀಮ್ ಹಾಗೂ ಕ್ಯಾಂಡಿಯ ಆರೆಂಜ್ ಒಳಗೊಂಡ ಮೈಸೂರ್ ಪಾಕ್ ಕೇಕ್ ಅನ್ನು ರೂಪಿಸಿದ್ದಾರೆ. ಮೈಸೂರ್ ಪಾಕ್ನ ಸಾಂಪ್ರದಾಯಿಕ ರುಚಿಗೆ ಮಲ್ಲಿಗೆಯ ಪರಿಮಳ ಮತ್ತು ಲೆಮನ್ ಕರ್ಡ್ನ ತಾಜಾತನವನ್ನು ಮೇಳೈಸುವ ಮೂಲಕ ವಿಭಿನ್ನ ಸಿಹಿಭಕ್ಷ್ಯದ ಅನುಭವ ನೀಡಲು ಪ್ರಯತ್ನಿಸಿದ್ದಾರೆ.
ಹನುಮಂತು ಪಲಾವ್ಗೆ ಆಧುನಿಕ ಸ್ಪರ್ಶ
1930ರಲ್ಲಿ ಆರಂಭವಾಗಿ, ಮೂರನೇ ತಲೆಮಾರಿನವರಿಂದ ಮುನ್ನಡೆಸಲ್ಪಡುತ್ತಿರುವ ಮೈಸೂರಿನ ಪ್ರಸಿದ್ಧ ಹನುಮಂತು ಪಲಾವ್ ಸಂಸ್ಥೆಯ ಪಾಕಪರಂಪರೆಯೂ ನಿಯಾನ್ ಕ್ಯಾಸಲ್ನ ಹೊಸ ಪ್ರಯೋಗಕ್ಕೆ ಸ್ಫೂರ್ತಿಯಾಗಿದೆ.
ಬಾಣಸಿಗರು ಹನುಮಂತು ಪಲಾವ್ ಕುಟುಂಬದವರೊಂದಿಗೆ ಸಂವಾದ ನಡೆಸಿ, ಅಲ್ಲಿನ ಸಾಂಪ್ರದಾಯಿಕ ಕಟ್ಟಿಗೆ ಒಲೆಯ ಅಡುಗೆ ವಿಧಾನ ಮತ್ತು ಪ್ರಸಿದ್ಧ ಪಲಾವ್ನ ಹಿಂದಿರುವ ತಯಾರಿಕಾ ತಂತ್ರಗಳನ್ನು ಅರಿತುಕೊಂಡಿದ್ದಾರೆ. ಇದರ ಫಲವಾಗಿ ಸುಟ್ಟ ಕುರಿಮಾಂಸ ಮತ್ತು ಶೇರ್ವಾ ಫೋಮ್ ಒಳಗೊಂಡ ಹನುಮಂತು ಪಲಾವ್ನಿಂದ ಪ್ರೇರಿತವಾದ ಹೊಸ ತಿನಿಸನ್ನು ಸಿದ್ಧಪಡಿಸಿದ್ದಾರೆ.
ಇದು ಮೂಲ ಪಲಾವ್ನ ಸಾಂಪ್ರದಾಯಿಕ ಸ್ವರೂಪವನ್ನು ಮರುಸೃಷ್ಟಿಸುವ ಪ್ರಯತ್ನವಲ್ಲ; ಬದಲಾಗಿ ಅದರ ರುಚಿ ಮತ್ತು ಅಡುಗೆ ಪರಂಪರೆಯಿಂದ ಸ್ಫೂರ್ತಿ ಪಡೆದು ನಿಯಾನ್ ಕ್ಯಾಸಲ್ ತನ್ನದೇ ಆದ ಶೈಲಿಯಲ್ಲಿ ರೂಪಿಸಿರುವ ಹೊಸ ಪ್ರಯೋಗವಾಗಿದೆ.
ಪರಂಪರೆ ಮತ್ತು ನಾವೀನ್ಯತೆಯ ಸಮ್ಮಿಲನ
ಸುಮಾರು 90 ವರ್ಷಗಳಷ್ಟು ಹಳೆಯ ಪುನಶ್ಚೇತನಗೊಳಿಸಿದ ಬಂಗಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಯಾನ್ ಕ್ಯಾಸಲ್, ಆಹಾರ ತಯಾರಿಕೆಯಲ್ಲಿ ಅದರ ಮೂಲ ಪಾಕವಿಧಾನ, ತಯಾರಿಕಾ ವಿಧಾನ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತದೆ. ಸಾಂಪ್ರದಾಯಿಕ ತಿನಿಸುಗಳನ್ನು ಯಥಾವತ್ತಾಗಿ ಮರುಸೃಷ್ಟಿಸುವ ಬದಲು, ಅವುಗಳ ವಿಶಿಷ್ಟ ರುಚಿ ಮತ್ತು ತಯಾರಿಕಾ ಕೌಶಲ್ಯಗಳನ್ನು ಅಧ್ಯಯನ ಮಾಡಿ ಹೊಸ ರೂಪದಲ್ಲಿ ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಬಾಣಸಿಗರಾದ ಶಮಂತ್ ಮತ್ತು ಕೀರ್ತನಾ ಅವರ ಪಾಲಿಗೆ ಈ ಪ್ರಯತ್ನ ಕೇವಲ ಹೊಸ ತಿನಿಸುಗಳ ಸೃಷ್ಟಿಗೆ ಸೀಮಿತವಾಗಿಲ್ಲ. ಮೈಸೂರಿನ ಆಹಾರ ಸಂಸ್ಕೃತಿಯನ್ನು ರೂಪಿಸಿರುವ ಜನರು, ಕುಟುಂಬಗಳು ಮತ್ತು ತಲೆಮಾರುಗಳಿಂದ ಮುಂದುವರಿದಿರುವ ಪಾಕಪರಂಪರೆಯನ್ನು ಗೌರವಿಸುವುದೂ ಇದರ ಭಾಗವಾಗಿದೆ.
ಸ್ಥಳೀಯ ಆಹಾರ ಸಂಸ್ಥೆಗಳ ಪರಂಪರೆಯನ್ನು ಆಧುನಿಕ ಅಡುಗೆ ಕಲೆಯೊಂದಿಗೆ ಬೆಸೆಯುವ ಈ ಪ್ರಯತ್ನವು, ದಸರಾ ಸಂದರ್ಭದಲ್ಲಿ ಮೈಸೂರಿನ ಆಹಾರ ವೈವಿಧ್ಯಕ್ಕೆ ಮತ್ತೊಂದು ಆಯಾಮವನ್ನು ನೀಡುವ ನಿರೀಕ್ಷೆಯಿದೆ. ನಗರದ ಪ್ರಸಿದ್ಧ ರುಚಿಗಳನ್ನು ಹೊಸ ರೀತಿಯಲ್ಲಿ ಪರಿಚಯಿಸುವ ಮೂಲಕ ಪರಂಪರೆ ಮತ್ತು ನಾವೀನ್ಯತೆಯ ನಡುವಿನ ಸಮ್ಮಿಲನಕ್ಕೆ ನಿಯಾನ್ ಕ್ಯಾಸಲ್ ವೇದಿಕೆಯಾಗುತ್ತಿದೆ.