ಹುಣಸೂರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವೃದ್ಧೆ ಚಿಕ್ಕಮ್ಮ ತನ್ನ ಸಮಸ್ಯೆಯನ್ನು ಎಳೆಎಳೆಯಾಗಿ ಸಭೆಯ ಮುಂದೆ ಬಿಡಿಸಿಟ್ಟರು. ಡಿವೈಎಸ್‌ಪಿ ಶೈಲೇಂದ್ರ, ತಹಸೀಲ್ದಾರ್ ಜೆ.ಮಂಜುನಾಥ್, ಪೌರಾಯುಕ್ತೆ ಎಂ.ಮಾನಸಾ ಇದ್ದರು.
ಹುಣಸೂರು : ಭೂಮಿ ಉಳಿಸಿಕೊಡಿ, ಇಲ್ಲದಿದ್ದರೆ ಬಡ್ಡಿಸಮೇತ ಹಣ ಕೊಡುವಂತೆ 90 ವರ್ಷದ ವೃದ್ಧೆಯ ಆಗ್ರಹ.. ದಾಖಲೆ ಒದಗಿಸಿ ಮೂರು ವರ್ಷವಾದರೂ ಭೂಮಿಯ ದುರಸ್ತು ಆಗಿಲ್ಲವೆಂದು 75 ವರ್ಷದ ರೈತನ ಅಳಲು... ಹನಗೋಡು ಪಿಡಿಒ ಕಾರ್ಯವೈಖರಿ ವಿರುದ್ಧ ಗ್ರಾಮಸ್ಥರ ಆಕ್ರೋಶ... ಶೌಚಗೃಹ ನಿರ್ಮಾಣಕ್ಕೆ ಲಂಚಕ್ಕೆ ಬೇಡಿಕೆ ಆರೋಪ... ಸೊಸೈಟಿಗೆ ಸಾಲ ತೀರಿಸಿದ್ದರೂ ಮತ್ತೆ ಪಾವತಿಗೆ ನೋಟಿಸ್ ನೀಡುತ್ತಿರುವ ಕುರಿತು ದೂರುದಾರರ ಅಳಲು...
ಇದು ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ದೂರು ಅರ್ಜಿ ಸ್ವೀಕಾರ ಸಭೆಯಲ್ಲಿ ಕಂಡುಬಂದ ದೃಶ್ಯಗಳು.
ತಾಲೂಕಿನ ರತ್ನಪುರಿ ಗ್ರಾಮದ ವಯೋವೃದ್ಧೆ ಚಿಕ್ಕಮ್ಮ ತನ್ನ ಪತಿ ನಿವೃತ್ತ ಸೈನಿಕನಿಗೆ 50 ವರ್ಷಗಳ ಹಿಂದೆ ಸರ್ಕಾರ ನೀಡಿದ್ದ 1.13 ಎಕರೆ ಭೂಮಿ ಅನ್ಯರ ಪಾಲಾಗಿದೆ. ಈ ಕುರಿತು ಕೋರ್ಟ್‌ನಲ್ಲಿ ವರ್ಷಗಟ್ಟಲೇ ಹೋರಾಡಿದ್ದೇನೆ. ನನಗ್ಯಾರೂ ದಿಕ್ಕಿಲ್ಲ, ಒಂದೋ ನನ್ನ ಹೆಸರಿಗೆ ಸಾಗುವಳಿ ಪತ್ರ ನೀಡಿ, ಇಲ್ಲದಿದ್ದರೆ ನನ್ನ ಹೋರಾಟಕ್ಕೆ ನಾನು ಮಾಡಿದ ಖರ್ಚು ಮತ್ತು ಭೂಮಿಯ ಬೆಲೆಯನ್ನು ನಿರ್ಧರಿಸಿ ನನಗೆ ಹಣ ನೀಡಿ ಎಂದು ಖಡಕ್ಕಾಗಿ ಒತ್ತಾಯಿಸಿದರು. ಚಿಕ್ಕಮ್ಮನ ಜೀವನಾನುಭವದ ಮಾತು ಕೇಳಿ ಲೋಕಾಯುಕ್ತ ಅಧಿಕಾರಿಗಳು ಮೂಕರಾದರು. ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಇಷ್ಟು ನೋವು ಕೊಡಬೇಡಿ: ಬೀಜಗನಹಳ್ಳಿ ಗ್ರಾಮದ ರೈತ ಮುಖಂಡ ಬಿ.ಎನ್.ನಾಗರಾಜಪ್ಪ ದೂರು ನೀಡಿ, ಉದ್ದೂರು ಸರ್ವೇ ನಂ.25ರಲ್ಲಿರುವ ನನ್ನ 2 ಎಕರೆ ಭೂಮಿಯ ದುರಸ್ತಿಗಾಗಿ ಅರ್ಜಿ ಸಲ್ಲಿಸಿದ್ದೆ. ಏಕವ್ಯಕ್ತಿ ಕೋರಿಕೆಯ ಆಧಾರದಡಿ ಮಾಡಿಕೊಡುವುದಾಗಿ ತಿಳಿಸಿದ ಕಂದಾಯ ಇಲಾಖೆ ಈವರೆಗೆ ಮಾಡಿಕೊಟ್ಟಿಲ್ಲ.
ಏಕವ್ಯಕ್ತಿ ಕೋರಿಕೆ ವ್ಯವಸ್ಥೆ ರದ್ದಾಗಿದೆ ಎಂದು ತಿಳಿಸದೆ ವಿನಾಕಾರಣ ನನ್ನನ್ನು ಅಲೆದಾಡಿಸಿದ್ದಾರೆ. ನನ್ನ ಭೂಮಿಯ ಎಲ್ಲ ದಾಖಲೆಗಳನ್ನೂ ನಾನು ಹೊಂದಿದ್ದರೂ ವೃದ್ಧನಾದ ನನಗೆ ಮಾನಸಿಕ ಹಿಂಸೆ ನೀಡಿರುವುದು ಸರಿಯೇ? ನಮ್ಮಂತವರಿಗೆ ನೋವು ನೀಡಬಾರದು. ನನಗೆ ನ್ಯಾಯ ಕೊಡಿಸಿರೆಂದು ಕೋರಿದರು. ಇದಕ್ಕೆ ತಹಸೀಲ್ದಾರ್ ಜೆ.ಮಂಜುನಾಥ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ 1,154 ಸರ್ಕಾರಿ ಸರ್ವೇ ನಂಬರ್‌ಗಳಿದ್ದು, ಪೋಡಿ ಆಂದೋಲನದಡಿ 1,100 ಸರ್ವೇ ನಂಬರ್‌ಗಳ ಒನ್ ಟು ಫೈವ್ ಈಗಾಗಲೇ ಸಂಪೂರ್ಣಗೊಂಡಿದೆ. ಏಕವ್ಯಕ್ತಿ ಕೋರಿಕೆ ಪದ್ಧತಿ ಈಗಿಲ್ಲದಿರುವುದರಿಂದ ಆನ್‌ಲೈನ್ ಮೂಲಕ ಸೀನಿಯಾರಿಟಿ ಆಧಾರದಡಿ ದುರಸ್ತಿ ಕಾರ್ಯ ನಡೆಯಲಿದೆ. ಹಾಗಾಗಿ ತಡವಾಗಿದೆ. ಆದಷ್ಟು ಶೀಘ್ರ ಕ್ರಮ ವಹಿಸಲಾಗುವುದು ಎಂದರು.
ನರೇಗಾ ಹಣಕ್ಕೆ ಲಂಚದ ಬೇಡಿಕೆ: ಹನಗೋಡು ಗ್ರಾಮದ ಮಹದೇವಮ್ಮ ತಮ್ಮ ಮನೆಗೆ ನರೇಗಾ ಯೋಜನೆಯಡಿ ಶೌಚಗೃಹ ನಿರ್ಮಾಣ ಮಾಡಿಕೊಂಡಿದ್ದ ಹಣ ಪಾವತಿ ಮಾಡಿರೆಂದು ಗ್ರಾಪಂಗೆ ಕೋರಿದರೆ ಅಲ್ಲಿನ ಅಧಿಕಾರಿಗಳು 3 ಸಾವಿರ ರೂ.ಲಂಚಕ್ಕಾಗಿ ಬೇಡಿಕೆಯಿಡುತ್ತಿದ್ದಾರೆಂದು ದೂರಿದರು. ಈ ಕುರಿತು ಅಧಿಕಾರಿಯ ವಿರುದ್ಧ ನೋಟಿಸ್ ನೀಡಿದ್ದೀರಾ? ಅಮಾನತ್ತಿನಲ್ಲಿಡುವ ಅಧಿಕಾರ ನಿಮಗಿದೆಯಲ್ಲ ಯಾಕೆ ಮಾಡಿಲ್ಲವೆಂದು ತಾಪಂ ಇಒ ಕೆ.ಹೊಂಗಯ್ಯ ಅವರನ್ನು ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿಜಯಕುಮಾರ್ ತರಾಟೆ ತೆಗೆದುಕೊಂಡರು. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಇಒ ಉತ್ತರಿಸಿದರು.
ಇಲಾಖೆಯ ತಪ್ಪಿಗೆ ನಮಗೆ ಶಿಕ್ಷೆಯೇಕೆ? : ಉಮ್ಮತ್ತೂರು ಗ್ರಾಮದ ಶಿವಣ್ಣ ದೂರು ನೀಡಿ, 2 ವರ್ಷಗಳ ಹಿಂದೆ ನಮ್ಮೂರಿನಲ್ಲಿ 6.5 ಗುಂಟೆ ಭೂಮಿ ಖರೀದಿಸಿ ಕ್ರಯಪತ್ರ ಮಾಡಿಕೊಂಡಿದ್ದೇವೆ. ಸರ್ವೇ ಇಲಾಖೆಯವರು ಭೂಮಿಯ ಸರ್ವೇ ವೇಳೆ ಖರಾಬು ಜಾಗವನ್ನೂ ಸೇರಿದಂತೆ ಅಳತೆ ಮಾಡಿ ಆರ್‌ಟಿಸಿಯಲ್ಲಿ 7.5 ಗುಂಟೆ ಎಂದು ನಮೂದಿಸಿದ್ದಾರೆ. ಇದರ ತಿದ್ದುಪಡಿ ಮಾಡಿಕೊಡಿ ಎಂದು ವರ್ಷದಿಂದ ಅಲೆದಾಡುತ್ತಿದ್ದೇವೆ. ಅವರು ಮಾಡಿರುವ ತಪ್ಪಿಗೆ ನಮಗೆ ಶಿಕ್ಷೆ ಏಕೆ ಸ್ವಾಮಿ ಎಂದು ಪ್ರಶ್ನಿಸಿದಾಗ, ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಗೆ ಡಿವೈಎಸ್‌ಪಿ ಶೈಲೇಂದ್ರ ಚಾಟಿ ಬೀಸಿದರು. ನಿಮ್ಮ ತಪ್ಪಿಗೆ ಅವರನ್ನು ಏಕೆ ಅಲೆಸುತ್ತಿದ್ದೀರಿ? ಶೀಘ್ರ ಸರಿಪಡಿಸಿ ಎಂದು ಸೂಚಿಸಿದರು.
ಬಾಲಕನ ಜೀವನಕ್ಕೆ ಸಂಚಕಾರ: ತಾಲೂಕಿನ ಸುಭಾಷ್ ಕಾಲನಿಯ ಪ್ರಸನ್ನ ದೂರು ನೀಡಿ, ವರ್ಷದ ಹಿಂದೆ ತನ್ನ ಪುತ್ರ ಮನೆಯ ಆರ್‌ಸಿಸಿ ಮೇಲೆ ಬಿದ್ದ ಟೆನಿಸ್ ಬಾಲ್ ತೆಗೆದುಕೊಂಡು ಬರಲು ಹೋದ ವೇಳೆ ಮನೆಯ ಮೇಲಿಂದ ಹಾದು ಹೋಗಿದ್ದ ಹೈಟೆನ್ಷನ್ ವೈರ್‌ನಿಂದ ವಿದ್ಯುತ್ ಶಾಕ್‌ಗೊಳಗಾಗಿ ತೀವ್ರವಾಗಿ ಗಾಯಗೊಂಡು ದೇಹದ ಬಹಳಷ್ಟು ಅಂಗಾಂಗಗಳು ತೊಂದರೆಗೊಳಗಾಗಿದೆ. ಘಟನೆ ಬಗ್ಗೆ ಸೆಸ್ಕ್ ಈವರೆಗೆ ಯಾವುದೇ ರೀತಿಯ ಪರಿಹಾರವನ್ನೂ ನೀಡಿಲ್ಲ. ಇಲ್ಲಸಲ್ಲದ ಕಾರಣ ಹೇಳಿ ಮುಂದೂಡುತ್ತಿದ್ದಾರೆ. ನನ್ನ ಪುತ್ರನ ಬದುಕು ಮೂರಾಬಟ್ಟೆಯಾಗಿದೆ. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು. ಈ ಬಗ್ಗೆ ಸೆಸ್ಕ್ ಎಇಇ ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಂಡ ಇನ್‌ಸ್ಪೆಕ್ಟರ್ ವಿಜಯಕುಮಾರ್, ಹೈಟೆನ್ಷನ್ ವಿದ್ಯುತ್ ಸಾಗಿದ ದಾರಿಯಲ್ಲಿ ಗಿಡಗಂಟಿ ತೆರವುಗೊಳಿಸುತ್ತೀರಲ್ಲ ಅದ್ಯಾಕೆ? ಮನೆಮೇಲೆ ಹಾದುಹೋದ ವೈರ್‌ನಿಂದಲೂ ಮನೆಯವರಿಗೆ ರಕ್ಷಣೆ ನೀಡಬೇಕಾದ ಹೊಣೆ ನಿಮ್ಮದಲ್ಲವೇ ಎಂದು ಪ್ರಶ್ನಿಸಿದಲ್ಲದೆ, ಕ್ರಮ ವಹಿಸದಿದ್ದರೆ ಮುಂದಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಇತರ ದೂರುಗಳು: ಹನಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹಾಕುತ್ತಿದ್ದು, ಪಿಡಿಒಗೆ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂದು ಶ್ರೀಧರ್ ದೂರಿದರು. ಹುಣಸೂರು ನಗರದ ಬಜಾರ್‌ರಸ್ತೆ ಆರಂಭದಲ್ಲಿರುವ ಮಳಿಗೆಗೆಳ ಮುಂಭಾಗದಲ್ಲಿ ಫುಟ್ ಪಾತ್ ವ್ಯಾಪಾರಿಗಳು ಸಂಪೂರ್ಣವಾಗಿ ಅತಿಕ್ರಮಿಸಿಕೊಂಡು ಮಳಿಗೆ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಹನಗೋಡು ವಿಎಸ್‌ಎಸ್‌ಎನ್ ಸೊಸೈಟಿಯಿಂದ ಪಡೆದಿದ್ದ ಸಾಲ ಮರುಪಾವತಿ ಮಾಡಿದ್ದರೂ ಮತ್ತೆ ಸಾಲ ಪಾವತಿಸುವಂತೆ ನೋಟಿಸ್ ನೀಡಲಾಗುತ್ತಿದೆ ಎಂದು ಸಿಎನ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ತರೀಕಲ್ ರಂಗಯ್ಯನಕೊಪ್ಪಲು, ತೆಕ್ಕಲಹಾಡಿ ಮುಂತಾದ ಹಾಡಿಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಗ್ರಾಪಂ ಅಧಿಕಾರಿಗಳು ಗಮನಹರಿಸಿ ಹಾಡಿಯ ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಸಮಾಜ ಸೇವಾ ಕಾರ್ಯ ವಿಭಾಗದ ಪದವಿ ವಿದ್ಯಾರ್ಥಿ ಪ್ರಮೋದ್ ಮತ್ತವರ ತಂಡವರು ಒತ್ತಾಯಿಸಿದರು.
ಸಭೆಯಲ್ಲಿ ಪೌರಾಯುಕ್ತೆ ಎಂ.ಮಾನಸಾ, ಶಿರಸ್ತೇದಾರ್ ಶ್ರೀಪಾದ್ ನಾಲವತ್ತವಾಡಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು, ದೂರುದಾರರು ಇದ್ದರು.