- 9ರಲ್ಲಿ 8 ತಾಲೂಕು ಬರಪೀಡಿತ
- ಮುಂಗಾರು ಮಳೆ ಶೇ.58 ಕೊರತೆ
- ಇನ್ನೂ ಶೇ.56 ಬಿತ್ತನೆ ಬಾಕಿ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಪ್ರಸಕ್ತ ಸಾಲಿನ ಮುಂಗಾರು ಮಳೆ ಶೇ.58 ಕೊರತೆ ಉಂಟಾಗುವ ಮೂಲಕ ಮೈಸೂರು ಜಿಲ್ಲೆ ಭಾಗಶಃ ಬರಗಾಲದ ಸುಳಿಗೆ ಸಿಲುಕಿಕೊಂಡಿದೆ.
ಜಿಲ್ಲೆಯಲ್ಲಿರುವ 4.54 ಲಕ್ಷ ಕೃಷಿಕರು ಬರದ ಸಂಕಷ್ಟ ಎದುರಿಸುತ್ತಿದ್ದು, ಈ ಸಲ ಬಿತ್ತನೆ ಮಾಡಿರುವ ಬೆಳೆಗಳು ಕೈಗೆ ಸಿಗುವ ಗ್ಯಾರಂಟಿಯೇ ಇಲ್ಲ. ಕೃಷಿ ಮತ್ತು ರೈತರು ಅತಂತ್ರ ಸ್ಥಿತಿಯಲ್ಲಿ ಹೊಯ್ದಡುವಂತಾಗಿದೆ. ಇದರ ನಡುವೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಕ್ಕರೆ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬರಗಾಲದ ಗಾಯದ ಮೇಲಿನ ಬರೆಯಾಗಿದೆ. ಮುಂದಿನ ದಿನಗಳಲ್ಲಿ ಆಹಾರ, ತರಕಾರಿ, ಹಣ್ಣಿನ ಬೆಲೆಯೂ ಗಗನಕ್ಕೇರುವುದು ನಿಶ್ಚಿತ.
ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಗುರುವಾರ ಘೋಷಣೆ ಮಾಡಿದ್ದು, ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು, ನಂಜನಗೂಡು, ತಿ.ನರಸೀಪುರ, ಸರಗೂರು, ಸಾಲಿಗ್ರಾಮ ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿವೆ. ಪಟ್ಟಿಯಿಂದ ಹೊರಗಿರುವ ಪಿರಿಯಾಪಟ್ಟಣ ತಾಲೂಕು ಸಹ ಮಳೆ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ಮೈಸೂರು ಪ್ರಾಂತ್ಯದ ಜೀವನಾಡಿಯಾದ ಕಾವೇರಿ ಜಲವಿವಾದ ಉಲ್ಬಣಿಸಿದೆ. ಈ ನದಿ ಅಚ್ಚುಕಟ್ಟು ವ್ಯಾಪ್ತಿಯ ಕೆಆರ್‌ಎಸ್, ಕಬಿನಿ ಸೇರಿದಂತೆ 4 ಜಲಾಶಯಗಳಲ್ಲಿ ಸಮರ್ಪಕವಾಗಿ ನೀರಿಲ್ಲ. ಆದಾಗ್ಯೂ, ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬೀಡಲು ಆದೇಶಿಸಿದೆ. ಜಿಲ್ಲೆಯ ಕೃಷಿ ಬೆಳೆೆ, ಕೆರೆ-ಕಟ್ಟೆಗಳಿಗೆ ನೀರು ಕೊಡಲಾಗುತ್ತಿಲ್ಲ. ಇದು ಬರಗಾಲದ ಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಕೈಕೊಟ್ಟ ಮುಂಗಾರು
ಈ ಸಲ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಜೂ.1ರಿಂದ ಆ.18ರವರೆಗೆ ಮುಂಗಾರು ಮಳೆ ಸಮರ್ಪಕವಾಗಿ ಆಗಿಲ್ಲ. ವಾಡಿಕೆಯ 274 ಮಿಲಿ ಮೀ. ಪೈಕಿ ಬರೀ 116.4 ಮಿ.ಮೀ. ಮಳೆಯಾಗಿದ್ದು, ಬರೋಬ್ಬರಿ 158 ಮಿ.ಮೀ. ಕೊರತೆಯಾಗಿದೆ. ಜನವರಿಯಿಂದ ಆ.8ರ ವರೆಗೆ ಜಿಲ್ಲೆಯಲ್ಲೇ ಅತಿ ಕಡಿಮೆ ಮಳೆ ಹುಣಸೂರು ತಾಲೂಕಿನಲ್ಲಿ ದಾಖಲಾಗಿದೆ. ನಂತರ ಸ್ಥಾನದಲ್ಲಿ ಸರಗೂರು ತಾಲೂಕಿದೆ. ಜಿಲ್ಲೆಯ ಎಲ್ಲ ತಾಲೂಕುಗಳು ಸರಾಸರಿ ಶೇ.30ರಿಂದ 50 ಮಳೆ ಅಭಾವದಲ್ಲಿ ಸಿಲುಕಿವೆ. ಯಾವ ತಾಲೂಕಿನಲ್ಲೂ ಸಾಧಾರಣ ಮಳೆ ಸಹ ಆಗಿಲ್ಲ.
ಪಿರಿಯಾಪಟ್ಟಣ ತಾಲೂಕಿನಲ್ಲೂ ಶೇ.46 ಮಳೆ ಕಡಿಮೆಯಾಗಿದೆ. ಇದಕ್ಕಿಂತ ಕಡಿಮೆ ಮಳೆಯಾಗಿರುವ ಮೈಸೂರು(ಶೇ.36), ತಿ.ನರಸೀಪುರ(ಶೇ.35), ನಂಜನಗೂಡು(ಶೇ.38) ತಾಲೂಕು ಬರಪೀಡಿತ ಪಟ್ಟಿಯಲ್ಲಿವೆ. ಆದರೆ ಪಿರಿಯಾಪಟ್ಟಣ ತಾಲೂಕು ಏಕೆ ಸೇರಿಸಿಲ್ಲ ಎಂಬುದು ರೈತರ ಪ್ರಶ್ನೆಯಾಗಿದೆ.
ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕುಂಠಿತಗೊಂಡಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಸಹ ನೀರಿನ ಕೊರತೆಯಿಂದ ಒಣಗುತ್ತಿವೆ.
ಬಿತ್ತನೆ ಕಾರ್ಯಕ್ಕೆ ಪೆಟ್ಟು
ಅನಾವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಬಿತ್ತನೆಗೆ ಹೊಡೆತ ಬಿದ್ದಿದೆ. ಈ ವರೆಗೆ ಶೇ.44.61 ಬಿತ್ತನೆಯಾಗಿದೆ. ಇನ್ನೂ ಶೇ.56 ಬಾಕಿ ಇದೆ. ಕಳೆದ ವರ್ಷ ಈವರೆಗೆ ಶೇ.74 ಬಿತ್ತನೆ ಕೆಲಸ ಪೂರ್ಣಗೊಂಡಿತ್ತು. ನೀರಾವರಿ, ಖುಷ್ಕಿ ಸೇರಿದಂತೆ 3.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿತ್ತು. ಆದರೀಗ ಬರೀ 1.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉಳಿದ ಭೂಮಿ ಬರಡು ಬಿದ್ದಿದೆ.
ಈಗಾಗಲೇ ಬಿತ್ತನೆಯಾಗಿರುವ ಮುಸುಕಿನ ಜೋಳ, ಉದ್ದು, ಜೋಳ, ಅಲಸಂದೆ, ಸೂರ್ಯಕಾಂತಿ ಇನ್ನಿತರ ಬೆಳೆಗಳು ನೀರಿನ ಕೊರತೆಯಿಂದ ಒಣಗಲು ಆರಂಭಿಸಿವೆ. ಭತ್ತ, ಕಬ್ಬು ಸೇರಿದಂತೆ ಕೃಷಿ ಬೆಳೆಗಳಿಗೆ ಈ ಸಲ ನೀರು ಕೊಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರವು ಈಗಾಗಲೇ ಸ್ಪಷ್ಟಪಡಿಸಿದೆ. ಇದರಿಂದ ಜಲಾಶಯದ ನೀರಿನ ಮೇಲಿನ ಆಸೆಯನ್ನೂ ರೈತರು ಕೈಬಿಟ್ಟಿದ್ದಾರೆ.
ರಾಜ್ಯ ಸರ್ಕಾರವು ರೈತರಿಗೆ ಬರಗಾಲದ ದೀಕ್ಷೆ ಕೊಟ್ಟಿದೆ. ಬರ ಪೀಡಿತ ಎಂದು ಘೋಷಣೆ ಮಾಡಿ ರೈತರ ಬದುಕಿನ ಮೇಲೆ ಮಣ್ಣು ಎರಚುವ ಕೆಲಸ ಮಾಡಿದೆ. ಬರ ಪರಿಹಾರದ ಮೂಲಕ ರೈತರನ್ನು ಓಲೈಕೆ ಮಾಡಲು ರಾಜಕಾರಣ ಮಾಡುತ್ತಿದೆ. ಆದರೆ 1000, 1,500 ರೂ. ಪುಡಿಗಾಸು ಬರ ನಷ್ಟಕ್ಕೆ ಸಾಕಾಗಲಿದೆಯೇ ? ಬೆಳೆಗಳಿಗೆ ನೀರು ಕೊಟ್ಟಿದ್ದರೆ ರೈತರ ಬದುಕು ಹಸನವಾಗುತ್ತಿತ್ತು. ಆದರೆ ತಮಿಳುನಾಡಿಗೆ ನೀರು ಕೊಟ್ಟು ಕೃಷಿಕರ ಬದುಕು ಹಾಳು ಮಾಡಿದೆ.
ಮುಂಗಾರು ಮಳೆ ವಿವರ(ಜೂನ್‌ನಿಂದ ಆ.18ರ ವರೆಗೆ)
ತಾಲೂಕುವಾರು ಮಳೆ ವಿವರ(ಜ.1ರಿಂದ ಆ.18ರ ವರೆಗೆ)
ತಾಲೂಕು ಮಳೆ ಕೊರತೆ(ಮಿ.ಮೀ.) ಬಿತ್ತನೆ ಸಾಧನೆ
ಬಿತ್ತನೆ ಗುರಿ ಬಿತ್ತನೆ ಕ್ಷೇತ್ರ ಶೇಕಡ ಬಿತ್ತನೆ
3,76,609 1,67,996 ಶೇ.44.61
2025-26ನೇ ಸಾಲು(ಆ.18ರ ಹೊತ್ತಿಗೆ)
ಬಿತ್ತನೆ ಗುರಿ ಬಿತ್ತನೆ ಕ್ಷೇತ ಶೇಕಡ ಬಿತ್ತನೆ
3,75,348 2,79,006 ಶೇ. 74.33
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮೈಸೂರು ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆಯಾಗಿದೆ. ಶೇ.56ರಷ್ಟು ಕೃಷಿ ಬಿತ್ತನೆ ಬಾಕಿ ಇದೆ. ಮುಂದಿನ ದಿನಗಳಲ್ಲಿ ತ್ವರಿತವಾಗಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲಾಗುವುದು.