ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ
- ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಮತ
ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಕಷ್ಟ ಸೂತ್ರ ರೂಪಿಸುವುದರೊಂದಿಗೆ ಕಾವೇರಿ ಜಲ ವಿವಾದವನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಕಾವೇರಿ ಜಲ ವಿವಾದದ ನ್ಯಾಯಾಧೀಕರಣವಾಗಲಿ, ಸುಪ್ರೀಂಕೋರ್ಟ್ ಆಗಲಿ ಸಂಕಷ್ಟ ಬಂದಾಗ ತಮ್ಮ ತೀರ್ಪಿನಲ್ಲಿ ನೀರು ಹಂಚಿಕೆ ಮಾಡುವ ಬಗ್ಗೆ ಸ್ಪಷ್ಟ ಆದೇಶ ನೀಡಿಲ್ಲ.
ಇದುವೇ ಸಮಸ್ಯೆಯಾಗಿ ಈಗಲೂ ಕಾಡುತ್ತಿದೆ. ಕಾವೇರಿ ಜಲ ವಿವಾದ ಬಗೆಹರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ. ಕಾವೇರಿ ಜಲ ವಿವಾದದ ಪಕ್ಷಗಾರರಾದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಕಷ್ಟ ಸೂತ್ರ ರೂಪಿಸಲು ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲವೇ ನಾಲ್ಕು ರಾಜ್ಯಗಳ ಸಿಎಂಗಳು ಪರಸ್ಪರ ಮಾತುಕತೆ ಮೂಲಕ ಸ್ಪಷ್ಟ ಸೂತ್ರ ರೂಪಿಸಿಕೊಳ್ಳಬೇಕು. ಜಲ ವಿವಾದಕ್ಕೆ ಪರಿಹಾರ ಕಲ್ಪಿಸದಿದ್ದರೆ ಸಂಕಷ್ಟ ಸೂತ್ರಕ್ಕಾಗಿಯೇ ಪ್ರತ್ಯೇಕ ನ್ಯಾಯಾಧೀಕರಣ ರಚಿಸಬೇಕು.
ಈ ನಿಟ್ಟಿನಲ್ಲಿ ನಾಲ್ಕೂ ರಾಜ್ಯಗಳ ರೈತರೇ ರಚಿಸಿಕೊಂಡಿರುವ ಕಾವೇರಿ ಕುಟುಂಬಕ್ಕೆ ಮರುಜೀವ ನೀಡಿ, ರೈತರೇ ಪರಸ್ಪರ ಮಾತುಕತೆ ನಡೆಸಲು ರಾಜ್ಯ ರೈತ ಸಂಘ ಆಲೋಚನೆ ಮಾಡಿದೆ. ಈ ಸಂಬಂಧ ಸದ್ಯದಲ್ಲೇ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ, ಜಂಟಿ ಕಾರ್ಮಿಕ ಸಂಘಟನೆಗಳು ಚಳವಳಿಯನ್ನು ಆ.10ರಂದು ದೇಶಾದ್ಯಂತ ಆಯೋಜಿಸಲಾಗಿವೆೆ.
ಈ ಹಿನ್ನೆಲೆಯಲ್ಲಿ ನಗರದಲ್ಲೂ ಅಂದು ಬೆಳಗ್ಗೆ 11ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಿಂದ ರೈಲ್ವೆ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್ ಇದ್ದರು.