cricket tournament 
ಮೈಸೂರು

ಮಳೆಯಲ್ಲೂ ನಿಲ್ಲದ ಕ್ರಿಕೆಟ್ ಟೂರ್ನಿ

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಗಳನ್ನು ರಂಜಿಸುತ್ತಿದೆ ಮಹಾರಾಜ ಟ್ರೋಫಿ
  • ಮೈದಾನ ರಕ್ಷಿಸುತ್ತಿರುವ ತಂತ್ರಜ್ಞರು, ಕಾರ್ಮಿಕರು
ಅವಿನಾಶ್ ಜೈನಹಳ್ಳಿ ಮೈಸೂರು
ಮಳೆಯ ನಡುವೆಯೂ ಕ್ರಿಕೆಟ್ ಅಭಿಮಾನಿಗಳು ‘ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿ’ಯ ರೋಚಕ ಅನುಭವ ಪಡೆಯುತ್ತಿದ್ದಾರೆ. ಇದಕ್ಕೆ ಪಿಚ್ ಕ್ಯುರೇಟರ್‌ಗಳು, ತಂತ್ರಜ್ಞರು ಮತ್ತು ಕಾರ್ಮಿಕರ ಸೇವೆಯೇ ಪ್ರಮುಖ ಕಾರಣ.
ಯಾವುದೇ ಕ್ರಿಕೆಟ್ ಟೂರ್ನಿ ಯಶಸ್ವಿಗೊಳ್ಳಲು ಮಳೆಯಿಂದ ಪಿಚ್ ಮತ್ತು ಮೈದಾನವನ್ನು ರಕ್ಷಿಸುವುದು ಮುಖ್ಯ. ಅಂತೆಯೇ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನವನ್ನು ಪಿಚ್ ಕ್ಯುರೇಟರ್‌ಗಳು, ತಂತ್ರಜ್ಞರು ಮತ್ತು ಕಾರ್ಮಿಕರು ಸೈನಿಕರಂತೆ ಪಿಚ್ ಕಾಯುತ್ತಿದ್ದಾರೆ.
ಈ ಬಾರಿ ‘ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿ’ಯ ಮೊದಲ 12 ಪಂದ್ಯಗಳು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಆಯೋಜನೆಯಾಗಿದೆ. ಈಗಾಗಲೇ 6 ಪಂದ್ಯಗಳು ಪೂರ್ಣಗೊಂಡಿವೆ. ಸದ್ಯ ಮೈಸೂರಿನಲ್ಲಿ ದಿನವೂ ಮಳೆಯಾಗುತ್ತಿದೆ. ಪಂದ್ಯಗಳು ಮಳೆಯ ನಡುವೆಯೂ ಯಶಸ್ವಿಯಾಗಿ ನಡೆಯಲು ಕೆಎಸ್‌ಸಿಎ ಮೈಸೂರು ವಲಯ ಕ್ಯುರೇಟರ್‌ಗಳು ಮತ್ತು ತಂಡ ಪ್ರೇರಕವಾಗಿದೆ. ಮೈದಾನದಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ. ಜತೆಗೆ ಸೋನಿ ಸ್ಪೋರ್ಟ್ಸ್ ಎಚ್‌ಡಿ, ಸೋನಿ ಸ್ಪೋರ್ಟ್ಸ್ ಕನ್ನಡ ಹಾಗೂ ಫ್ಯಾನ್‌ಕೋಡ್‌ನಲ್ಲಿ ಲೈವ್ ಇರುವುದರಿಂದ ಇದನ್ನು ಲಕ್ಷಾಂತರ ಜನ ವೀಕ್ಷಿಸಿ ಖುಷಿ ಪಡುತ್ತಿದ್ದಾರೆ.

60ಕ್ಕೂ ಹೆಚ್ಚು ಜನರ ಪರಿಶ್ರಮ:

ಕ್ಯುರೇಟರ್ ನರಸಿಂಹಮೂರ್ತಿ ನೇತೃತ್ವದಲ್ಲಿ ಕೆಎಸ್‌ಸಿಎ ಮೆಕಾನಿಕ್‌ಗಳು ಸೇರಿದಂತೆ 60ಕ್ಕೂ ಹೆಚ್ಚು ಗ್ರೌಂಡ್‌ಮನ್ಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಮಳೆ ಬಂದ ತಕ್ಷಣ ಗ್ರೌಂಡ್ ಕವರ್‌ಗಳಿಂದ ಪಿಚ್ ಸೇರಿದಂತೆ ಇಡೀ ಮೈದಾನಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಕಳೆದ ಶನಿವಾರ ಪಂದ್ಯಾವಳಿಗೆ ಚಾಲನೆ ದೊರೆತಿದೆ. ಪ್ರತಿದಿನ ಎರಡು ಪಂದ್ಯಗಳು ನಡೆಯುತ್ತಿವೆ. ಪಂದ್ಯಾವಳಿ ಪ್ರಾರಂಭದ ದಿನದಿಂದಲೂ ಮಳೆ ಸುರಿಯುತ್ತಲೇ ಇದೆ. ಆದರೆ ಈ ತಂಡದ ಪರಿಶ್ರಮದಿಂದ ಮಂಗಳೂರು ಮತ್ತು ಹುಬ್ಬಳ್ಳಿ ನಡುವಿನ ಪಂದ್ಯ ಹೊರತಾಗಿ ಬೇರೆ ಯಾವುದೇ ಪಂದ್ಯ ಮಳೆಯಿಂದ ರದ್ದಾಗದಂತೆ ನೋಡಿಕೊಂಡಿದ್ದಾರೆ.

ಅಂಗಳವನ್ನು ರಕ್ಷಿಸಿದರು:

ಭಾನುವಾರ ಹುಬ್ಬಳ್ಳಿ ಟೈಗರ್ಸ್‌ ಮತ್ತು ಕೋಸ್ಟಲ್ ಕಿಂಗ್ಸ್ ಮಂಗಳೂರು ನಡುವಿನ ಪಂದ್ಯ, ಬಳಿಕ ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಶಿವಮೊಗ್ಗ ಯೋಧಾಸ್ ನಡುವಿನ ಪಂದ್ಯದ ವೇಳೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿ ಇಡೀ ಮೈದಾನದಲ್ಲಿ ನೀರು ನಿಂತಿತ್ತು. ಆದರೆ ಈ ತಂಡ ಮಳೆ ನಿಂತ 50 ನಿಮಿಷದಲ್ಲಿ ಇಡೀ ಮೈದಾನವನ್ನು ಎಂದಿನಂತೆ ಮಾಡಿ ಪಂದ್ಯ ನಡೆಯುವಂತೆ ಮಾಡಿತು. ಈ ಮೂಲಕ ತಂಡದ ಸದಸ್ಯರು ಮಳೆಯಿಂದ ಕ್ರಿಕೆಟ್ ಅಂಗಳವನ್ನು ರಕ್ಷಿಸಿ ಪಂದ್ಯ ರದ್ದಾಗದಂತೆ ನೋಡಿಕೊಂಡರು.

ಸೂಪರ್ ಸಾರ್ :

ಪಂದ್ಯಾವಳಿಗಾಗಿ 120* 100 ಅಳತೆಯ 20 ಗ್ರೌಂಡ್ ಕವರ್‌ಗಳನ್ನು ತರಿಸಲಾಗಿದೆ. ಮೈಸೂರಿನ ಎಲ್ಲ ಮೈದಾನಗಳ ಮೂರು ಒಂದು ಸೂಪರ್ ಸಾರ್ ಜತೆಗೆ ಪಿಚ್‌ಗಳನ್ನು ಹದಗೊಳಿಸಲು 5 ವಿಭಿನ್ನ ರೋಲರ್ ಸೇರಿದಂತೆ ಇನ್ನು ಅನೇಕ ರೀತಿಯ ಯಂತ್ರಗಳನ್ನು ಬಳಸಲಾಗಿದೆ. 250 ಕೆ.ಜಿ. ಯಿಂದ 2 ಸಾವಿರ ಕೆ.ಜಿ.ವರೆಗಿನ ರೋಲರ್ ಬಳಕೆ ಮಾಡಲಾಗುತ್ತಿದೆ. ಕ್ಯುರೇಟರ್ ನರಸಿಂಹಮೂರ್ತಿ 19 ವರ್ಷಗಳಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಟೂರ್ನಿಗಾಗಿ ಸದ್ಯ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಉದ್ಯೋಗ ಸೃಷ್ಟಿಸಿದ ಮಹಾರಾಜ ಟ್ರೋಫಿ

‘ಮಹಾರಾಜ ಟ್ರೋಫಿ’ ಟಿ-20 ಕ್ರಿಕೆಟ್ ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಚಿಮ್ಮು ಹಲಗೆಯಾಗಿರುವ ಜತೆಗೆ, ಕೆಲವರಿಗೆ ಉದ್ಯೋಗವನ್ನೂ ನೀಡಿದೆ. ಮೈದಾನದಲ್ಲಿ 60ಕ್ಕೂ ಹೆಚ್ಚು ಕಾರ್ಮಿಕರು ಗ್ರೌಂಡ್‌ಮನ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 20 ಜನ ಕೆಎಸ್‌ಸಿಎಯ ಇತರ ಮೈದಾನಗಳ ಕಾರ್ಮಿಕರಾಗಿದ್ದಾರೆ. ಉಳಿದವರನ್ನು ಈ ಪಂದ್ಯಾವಳಿಗಾಗಿಯೇ ದಿನಭತ್ಯೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ.

ಮೂರು ಪಿಚ್‌ಗಳಲ್ಲಿ ಆಟ:

ಮೈದಾನದಲ್ಲಿ ಒಟ್ಟು 5 ಪಿಚ್‌ಗಳಿದ್ದು, ಪಂದ್ಯಾವಳಿಯನ್ನು ಮೂರು ಪಿಚ್‌ಗಳಲ್ಲಿ ಆಡಿಸಲಾಗುತ್ತಿದೆ. ಈ ಪೈಕಿ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಮಣ್ಣಿನಿಂದ ಒಂದೊಂದು ಪಿಚ್ ನಿರ್ಮಾಣ ಮಾಡಲಾಗಿದೆ. ದಿನನಿತ್ಯ ಒಂದೊಂದು ಪಿಚ್‌ನಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಪಂದ್ಯಾವಳಿ ಆರಂಭಕ್ಕೂ ಮುಂಚೆಯೇ ಮೈದಾನ ಹಾಗೂ ಪಿಚ್‌ಗಳನ್ನು ಸಿದ್ಧಗೊಳಿಸಲಾಗಿದೆ.
"

ಮಳೆ ಬಿದ್ದರೆ ನೀರು ತೆಗೆಯಲು 3 ಸೂಪರ್ ಸಾಫರ್ ಹಾಗೂ ಪಿಚ್ ಹದಗೊಳಿಸಲು ವಿಭಿನ್ನ ರೋಲರ್‌ಗಳನ್ನು ಬಳಸಲಾಗಿದ್ದು, ಮಳೆ ಬಂದರೆ ಇಡೀ ಮೈದಾನ ಮುಚ್ಚುವಂತಹ ಗ್ರೌಂಡ್ ಕವರ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 60ಕ್ಕೂ ಹೆಚ್ಚು ಜನರು ಕೆಲಸ ನಿರ್ವಹಿಸುತ್ತಿದ್ದೇವೆ.

— ಶ್ರೀನಿವಾಸ್ ಪ್ರಸಾದ್ ಸಂಚಾಲಕ, ಕೆಎಸ್‌ಸಿಎ ಮೈಸೂರು ವಲಯ