ಹುಣಸೂರು ತಾಲೂಕು ಹರೀನಹಳ್ಳಿಯಲ್ಲಿ ಪ್ರಗತಿಪರ ಕೃಷಿಕ ಎ.ಎನ್.ಕಿಶೋರ್ ಕುಮಾರ್‌ರ ಪಾಲಿಹೌಸ್‌ನಲ್ಲಿ ಬೆಳೆದು ನಿಂತ ಹಸಿರು ಕ್ಯಾಪ್ಸಿಕಂ. 
ಮೈಸೂರು

ಯಶಸ್ವಿ ಕೃಷಿಕರಾದ ದಂಪತಿ

ಹುಣಸೂರು: ಬೆಂಗಳೂರು ಮಹಾನಗರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೈತುಂಬ ಸಂಪಾದಿಸುತ್ತಿದ್ದ ದಂಪತಿ ಇದೀಗ ಯಶಸ್ವಿ ಕೃಷಿಕರಾಗಿದ್ದಾರೆ. ಕ್ಯಾಪ್ಸಿಕಂ(ದಪ್ಪ ಮೆಣಸಿನಕಾಯಿ) ಕೃಷಿಯಲ್ಲಿ ಸಾಧನೆಯ ಶಿಖರವೇರುತ್ತಲೇ ಕೃಷಿ ಕ್ಷೇತ್ರದಲ್ಲಿ ವಿಭಿನ್ನವಾಗಿ ಆಲೋಚಿಸುವ ಮೂಲಕ ಕೃಷಿ ಲಾಭದಾಯಕವಾಗಬಲ್ಲದು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.
ತಾಲೂಕಿನ ಹನಗೋಡು ಹೋಬಳಿ ಹರೀನಹಳ್ಳಿಯ ಎ.ಎಸ್.ಕಿಶೋರ್‌ಕುಮಾರ್- ಶಿಬಿ ಕಿಶೋರ್ ದಂಪತಿ ಕ್ಯಾಪ್ಸಿಕಂ ಕೃಷಿಯೊಂದಿಗೆ ಉಪಕಸುಬುಗಳಿಗೆ ಆದ್ಯತೆ ನೀಡಿ ಆರ್ಥಿಕವಾಗಿ ಸುಸ್ಥಿರತೆ ಸಾಧಿಸಿದ್ದಾರೆ. ಬೆಂಗಳೂರಿನ ಜಂಜಡದ, ಏಕತಾನತೆಯ ಬದುಕನ್ನು ತ್ಯಜಿಸಿ ಪರಿಸರದೊಂದಿಗೆ ಯುಕ್ತವಾಗಿ ಜೀವನ ನಡೆಸಲು ಮುಂದಾದ ಈ ದಂಪತಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಮೂಲಕ ಯುವರೈತರಿಗೆ ಪ್ರೇರಣೆಯಾಗಿದ್ದಾರೆ.
ಪರಿಸರದೊಂದಿಗೆ ಪ್ರಯೋಗ: ಲ್ಯಾಬ್ ಟೆಕ್ನೀಷಿಯನ್ ಆಗಿದ್ದ ದಂಪತಿ ಇದೀಗ ಪ್ರಕೃತಿಯೊಂದಿಗೆ ತಮ್ಮ ಪ್ರಯೋಗ ಆರಂಭಿಸಿದ್ದಾರೆ. ಕಿಶೋರ್ ಕುಮಾರ್ ಬಾಲ್ಯದಲ್ಲೇ ಕೃಷಿಕನಾಗಬೇಕೆಂಬ ಕನಸು ಕಂಡವರು. ಆದರೆ ಅದು ನನಸಾಗಿದ್ದು 2008ರಲ್ಲಿ ತಾಲೂಕಿನ ಹರೀನಹಳ್ಳಿಯಲ್ಲಿ 5 ಎಕರೆ ಭೂಮಿ ಖರೀದಿಸಿದಾಗ. ಕೃಷಿಯ ಕುರಿತು ಏನೂ ತಿಳಿಯದ ಕಿಶೋರ್ ಭಂಡಧೈರ್ಯದಲ್ಲಿ ಕೃಷಿ ಕಾರ್ಯಕ್ಕೆ 2014ರಲ್ಲಿ ಕೈ ಹಾಕಿದರು. ಆರಂಭದಲ್ಲಿ ಗ್ರಾಮಸ್ಥರು ಇವರ ಪಾಡು ಕಂಡು ಅಪಹಾಸ್ಯ ಮಾಡಿದರು. ಆದರೆ ಮೊದಲ ವರ್ಷ ಮುಸುಕಿನ ಜೋಳ ಬೆಳೆದು ಸೈ ಎನಿಸಿಕೊಂಡರೆ, ಶುಂಠಿ ಬೆಳೆದು ಕೈ ಸುಟ್ಟುಕೊಂಡರು. 2017ರಲ್ಲಿ ಹೈನುಗಾರಿಕೆ ಆರಂಭಿಸಿದರು. ಒಂದು ಹಸು ಖರೀದಿಸಿ ತಮ್ಮೂರಿನ ಡೇರಿಗೆ 10 ಲೀಟರ್ ಹಾಲು ಹಾಕಲು ಆರಂಭಿಸಿ, ನಂತರ 15 ಹಸುಗಳ ಒಡೆಯನಾಗಿ ಅತಿಹೆಚ್ಚು ಹಾಲು ಹಾಕುವ(80-100 ಲೀಟರ್) ಪ್ರಗತಿಪರ ರೈತ ಎಂದು ಗುರುತಿಸಿಕೊಂಡರು.
ಎಲ್ಲ ರೈತರಂತೆ ತಾನು ಕೃಷಿ ಮಾಡಬಾರದೆನ್ನುವ ಮನೋಭಾವದೊಂದಿಗೆ ಕಿಶೋರ್‌ಕುಮಾರ್ ಮಳೆ, ಬಿಸಿಲು, ಚಳಿಯ ನಡುವೆ ಬೆಳೆಯನ್ನು ಉಳಿಸಿಕೊಳ್ಳಲು ಆರಂಭದಲ್ಲಿ ಪರದಾಡಿದರು. ಹವಾಮಾನ ವೈಪರೀತ್ಯ ಕೃಷಿಗೆ ಅಡ್ಡಿಯಾಗದಂತೆ ಮಾಡಬೇಕೆನ್ನುವ ಉದ್ದೇಶದಿಂದ ಪಾಲಿ ಹೌಸ್ ಸ್ಥಾಪಿಸಲು ಮುಂದಾದರು. ಅಂದಿನ ಕೃಷಿ ಅಧಿಕಾರಿ ಜಯಕುಮಾರ್ ನೀಡಿದ ಸಲಹೆ ಸೂಚನೆಗೆಳನ್ನು ಅನುಸರಿಸಿದ ನಂತರ 2020ರಲ್ಲಿ ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ಮುಕ್ಕಾಲು ಎಕರೆ ವಿಸ್ತೀರ್ಣದಲ್ಲಿ ಪಾಲಿಹೌಸ್ ನಿರ್ಮಿಸಿ ಕ್ಯಾಪ್ಸಿಕಂ ಬೆಳೆಯಲು ಆರಂಭಿಸಿದರು.
ಮುಕ್ಕಾಲು ಎಕರೆ ಭೂಮಿಯಲ್ಲಿ 30 ಲಕ್ಷ ರೂ.ಗೂ ಅಧಿಕ ಖರ್ಚಿನೊಂದಿಗೆ ಪಾಲಿ ಹೌಸ್ ಸ್ಥಾಪಿಸಿದರು. ಮೊದಲ ವರ್ಷದಲ್ಲಿ ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ ಬೆಳೆದರು. ಬೆಂಗಳೂರಿನ ತರಕಾರಿ ಖರೀದಿದಾರರು ಬಂದು ಖರೀದಿಸಿದರು. ನಂತರ ಹಸಿರು ಸೌತೆ ಬೆಳೆದರು. ಅದಕ್ಕೂ ಉತ್ತಮ ದರ ದೊರಕಿತು. ಇದೀಗ ಹಸಿರು ಕ್ಯಾಪ್ಸಿಕಂ ಬೆಳೆದಿದ್ದಾರೆ. ಅವರ ಪಾಲಿ ಹೌಸ್‌ನಲ್ಲಿ 8-10 ಅಡಿ ಎತ್ತರಕ್ಕೆ ಬಳ್ಳಿಯಂತೆ ಹಬ್ಬಿರುವ ಕ್ಯಾಪ್ಸಿಕಂ ತೋಟ ನೋಡುವುದೇ ಆನಂದ.
ಕಿಶೋರ್ ದಂಪತಿ ತಮ್ಮ ಪಾಲಿಹೌಸ್ ಅಥವಾ ಭೂಮಿಯಲ್ಲಿ ಕೃಷಿ ಕಾರ್ಮಿಕರನ್ನು ಅವಲಂಬಿಸುವುದೇ ಅಪರೂಪ. ಗಿಡ ನೆಡುವುದರಿಂದ ಆರಂಭಿಸಿ, ಫಸಲನ್ನು ವಾಹನಗಳಿಗೆ ಲೋಡ್ ಮಾಡುವವರೆಗೂ ದಂಪತಿಯೇ ಶ್ರಮಿಸುತ್ತಾರೆ. ಅಪರೂಪಕ್ಕೊಮ್ಮೆ ಒಬ್ಬ ಕೃಷಿಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಬೆಂಗಳೂರಿನಿಂದ ಅತ್ಯುನ್ನತ ದರ್ಜೆಯ ಕ್ಯಾಪ್ಸಿಕಂ ಗಿಡಗಳನ್ನು ಖರೀದಿಸಿ ತರುತ್ತಾರೆ. ಇವುಗಳಿಗೆ ರೋಗಬಾಧೆಗಳು ಬೇಗ ತಗುಲುವುದರಿಂದ ಎಚ್ಚರಿಕೆ ವಹಿಸುತ್ತಾರೆ. 3 ತಿಂಗಳ ನಂತರ ಸತತ 6-7 ತಿಂಗಳು ಕಟಾವು ನಡೆಯುತ್ತಲೇ ಇರುತ್ತದೆ. ಒಂದು ಬೆಳೆಯಲ್ಲಿ ಕನಿಷ್ಠ 10-11 ಟನ್ ಕ್ಯಾಪ್ಸಿಕಂ ಪಡೆಯುತ್ತಾರೆ. ಅವರ ಖರ್ಚು, ವೆಚ್ಚವೆಲ್ಲ ಹೋಗಿ 6-8 ಲಕ್ಷ ರೂ. ಲಾಭ ಗಳಿಸುತ್ತಾರೆ.
ಕೆಂಪು, ಹಳದಿ ಬಣ್ಣದ ಕ್ಯಾಪ್ಸಿಕಂಗೆ ಬೆಂಗಳೂರಿನಿಂದಲೇ ಖರೀದಿದಾರರು ಬರುತ್ತಾರೆ. ಹಸಿರು ಕ್ಯಾಪ್ಸಿಕಂ ಸ್ಥಳೀಯವಾಗಿಯೇ ತರಕಾರಿ ವ್ಯಾಪಾರಸ್ಥರು ಖರೀದಿಸುತ್ತಾರೆ. ಕೆಲವೊಮ್ಮೆ ಖರೀದಿದಾರರು ಬಾರದೆ ಇದ್ದಾಗ ಬೆಳೆ ಕೊಳೆತು ನಾಶವಾಗುತ್ತದೆ. ಹಾಗಾಗಿ ಸೂಕ್ತ ಮಾರುಕಟ್ಟೆ ಅವಶ್ಯಕ ಎನ್ನುತ್ತಾರೆ ಕಿಶೋರ್.