ಅವಿನಾಶ್ ಜೈಮನಳ್ಳಿ ಮೈಸೂರು
ಅರಮನೆಗಳ ನಗರಿ ಮೈಸೂರಿನ ಐತಿಹಾಸಿಕ ವೈಭವ, ಪಾರಂಪರಿಕ ಕಟ್ಟಡಗಳ ಸೊಬಗು ಹಾಗೂ ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಮೆರುಗು ಒಂದೆಡೆ ಅನಾವರಣಗೊಂಡ ಅಪರೂಪದ ಕ್ಷಣಗಳಿಗೆ ಶನಿವಾರ ನಗರ ಸಾಕ್ಷಿಯಾಯಿತು.
ಮೈಸೂರು ಪೇಟ ತೊಟ್ಟ ಪುರುಷರು, ಮೈಸೂರು ಸೀರೆಯಲ್ಲಿ ಕಂಗೊಳಿಸಿದ ಮಹಿಳೆಯರು ಟಾಂಗಾ ಸವಾರಿ ನಡೆಸಿ ದಸರಾ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದರು. ಪಾರಂಪರಿಕ ಟಾಂಗಾದಲ್ಲಿ ನಗರದ ಐತಿಹಾಸಿಕ ತಾಣಗಳನ್ನು ಸುತ್ತಿದ ದಂಪತಿಗಳು, ಮೈಸೂರಿನ ಶ್ರೀಮಂತ ಇತಿಹಾಸ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಹತ್ತಿರದಿಂದ ಅರಿತುಕೊಂಡರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯೋಜಿಸಿದ್ದ ಪಾರಂಪರಿಕ ಟಾಂಗಾ ಸವಾರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 50 ದಂಪತಿಗಳು ಪಾಲ್ಗೊಂಡಿದ್ದರು. ಪ್ರವಾಸದ ಅನುಭವದ ಜತೆಗೆ ಮೈಸೂರಿನ ಪರಂಪರೆಯನ್ನು ಪರಿಚಯಿಸುವ ಹಾಗೂ ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಈ ಕಾರ್ಯಕ್ರಮದಲ್ಲಿತ್ತು.
ಪುರುಷರು ಮೈಸೂರು ಪೇಟ ತೊಟ್ಟು, ಸಾಂಪ್ರದಾಯಿಕ ಶಲ್ಯ ಧರಿಸಿ ರಾಜಗಾಂಭೀರ್ಯ ಮೆರೆದರೆ, ಮಹಿಳೆಯರು ಮೈಸೂರು ಸೀರೆ ಉಟ್ಟು, ಮುಡಿಯಲ್ಲಿ ಮಲ್ಲಿಗೆ ಹೂ ಮುಡಿದು ಸಂಪ್ರದಾಯದ ಸೊಬಗನ್ನು ಹೆಚ್ಚಿಸಿದರು. ಪಾರಂಪರಿಕ ಉಡುಗೆ ತೊಟ್ಟು ಟಾಂಗಾ ಸವಾರಿಯಲ್ಲಿ ಪಾಲ್ಗೊಂಡ ದಂಪತಿಗಳು ದಸರಾ ಹಬ್ಬದ ಸಾಂಸ್ಕೃತಿಕ ವೈಭವಕ್ಕೆ ಹೊಸ ಮೆರುಗು ನೀಡಿದರು.
ಮೈಸೂರು, ಬೆಂಗಳೂರು, ಕಾರವಾರ, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ದಂಪತಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಒಂದು ಟಾಂಗಾದಲ್ಲಿ ಎರಡು ಜೋಡಿಗಳಂತೆ ಕೂರಿಸಿ ಸವಾರಿ ನಡೆಸಲಾಯಿತು. 25 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ದಂಪತಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ನಗರದ ಪುರಭವನದಿಂದ ಶನಿವಾರ ಬೆಳಗ್ಗೆ ಆರಂಭವಾದ ಟಾಂಗಾ ಸವಾರಿ, ಮೈಸೂರಿನ ಪ್ರಮುಖ ಐತಿಹಾಸಿಕ ಕಟ್ಟಡಗಳು ಹಾಗೂ ಸ್ಮಾರಕಗಳ ಮೂಲಕ ಸಂಚರಿಸಿ ಮತ್ತೆ ಪುರಭವನದಲ್ಲಿ ಅಂತ್ಯಗೊಂಡಿತು.
10ನೇ ಚಾಮರಾಜ ಒಡೆಯರ್ ವೃತ್ತ, ಕೆ.ಆರ್.ವೃತ್ತ, ಜಗನ್ಮೋಹನ ಅರಮನೆ, ಪರಕಾಲ ಮಠ, ಕಮರ್ಷಿಯಲ್ ಟ್ಯಾಕ್ಸ್ ಕಚೇರಿ, ಲೋಕಾಯುಕ್ತ ಕಚೇರಿ, ಹಳೆಯ ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್, ಮೆಟ್ರೋಪೋಲ್ ವೃತ್ತ, ಹೋಟೆಲ್ ಮಯೂರ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಗ್ರಂಥಾಲಯ, ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ ಹಾಗೂ ಗಾಂಧಿ ಚೌಕದ ಮೂಲಕ ಸವಾರಿ ಸಾಗಿತು.
ಕಾರ್ಯಕ್ರಮದಲ್ಲಿ ಭಾರತೀಯ ಸಂಪ್ರದಾಯದ ಸೊಬಗಿಗೂ ಆದ್ಯತೆ ನೀಡಲಾಯಿತು. ಮಹಿಳೆಯರಿಗೆ ಅರಿಶಿಣ-ಕುಂಕುಮ ಹಚ್ಚಿ, ಬಳೆ ತೊಡಿಸಿ ಬಾಗಿನ ನೀಡಲಾಯಿತು. ಪುರುಷರಿಗೆ ಮೈಸೂರು ಪೇಟ ತೊಡಿಸಿ, ಶಲ್ಯ ಹೊದಿಸಿ ಗೌರವಿಸಲಾಯಿತು. ಪಾರಂಪರಿಕ ಉಡುಗೆ, ಟಾಂಗಾ ಸವಾರಿ ಹಾಗೂ ಐತಿಹಾಸಿಕ ತಾಣಗಳ ಪರಿಚಯ ಒಂದೇ ವೇದಿಕೆಯಲ್ಲಿ ಮೇಳೈಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಮೈಸೂರಿನ ಪರಂಪರೆಯನ್ನು ಉಳಿಸುವ ಅಗತ್ಯದ ಬಗ್ಗೆಯೂ ಕಾರ್ಯಕ್ರಮ ಗಮನ ಸೆಳೆಯಿತು. ನಗರದಲ್ಲಿ 600ಕ್ಕೂ ಹೆಚ್ಚು ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿದ್ದು, ಈ ಪೈಕಿ ಕೆಲವು ಕಟ್ಟಡಗಳು ಈಗಾಗಲೇ ಶಿಥಿಲಗೊಂಡಿವೆ. ನೂರು ವರ್ಷಗಳನ್ನು ಪೂರೈಸಿರುವ ಸುಮಾರು 100 ಕಟ್ಟಡಗಳು, ಹತ್ತಾರು ಅರಮನೆಗಳು ಹಾಗೂ ಅನೇಕ ಐತಿಹಾಸಿಕ ಮನೆಗಳು ಮೈಸೂರಿನ ವಾಸ್ತುಶಿಲ್ಪದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಈ ಅಮೂಲ್ಯ ಪರಂಪರೆಯನ್ನು ಉಳಿಸಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ನಗರಪಾಲಿಕೆ, ಸರ್ಕಾರ ಹಾಗೂ ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ, ಕಟ್ಟಡಗಳನ್ನು ಗುರುತಿಸುವುದು ಮತ್ತು ರಕ್ಷಿಸುವುದಷ್ಟೇ ಸಾಲದು, ಅವುಗಳ ಇತಿಹಾಸ ಹಾಗೂ ಮಹತ್ವವನ್ನು ಸಾರ್ವಜನಿಕರು ಅರಿತುಕೊಳ್ಳುವುದೂ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಪಾರಂಪರಿಕ ಟಾಂಗಾ ಸವಾರಿ, ದಸರಾ ಸಂಭ್ರಮದ ಜತೆಗೆ ಮೈಸೂರಿನ ಐತಿಹಾಸಿಕ ಪರಂಪರೆಯ ಅರಿವು ಮೂಡಿಸುವ ಪ್ರಯತ್ನವಾಗಿಯೂ ಗಮನ ಸೆಳೆಯಿತು. ಪಾರಂಪರಿಕ ನಗರಿ ಮೈಸೂರಿನ ವೈಭವವನ್ನು ಮುಂದಿನ ತಲೆಮಾರುಗಳಿಗೂ ಉಳಿಸಿ ತಲುಪಿಸುವ ಸಂದೇಶವನ್ನು ಕಾರ್ಯಕ್ರಮ ಸಾರಿತು.
ಇದಕ್ಕೂ ಮುನ್ನ ಪಾರಂಪರಿಕ ಟಾಂಗಾ ಸವಾರಿಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಡಾ.ಪಿ. ಶಿವರಾಜು ಚಾಲನೆ ನೀಡಿದರು. ಚಲನಚಿತ್ರ ನಟಿ ಹಾಗೂ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ , ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸೆಲ್ವಪಿಳ್ಳೈ ಅಯ್ಯಂಗಾರ್, ಇಲಾಖೆಯ ಉಪನಿರ್ದೇಶಕಿ ಡಾ. ಸಿ.ಎನ್.ಮಂಜುಳಾ, ನಿವೃತ್ತ ಪ್ರಾಧ್ಯಾಪಕ ರಂಗರಾಜು ಇದ್ದರು.
ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಹಿರಿದಾಗಿದ್ದು, ನಮ್ಮ ರಕ್ತದ ಧಮನಿ-ಧಮನಿಗಳಲ್ಲಿ ಪರಂಪರೆ ಇರಬೇಕು. ನಾವು ಆಧುನಿಕ ಉಡುಗೆ-ತೊಡುಗೆಗಳಲ್ಲಿದ್ದರೂ ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ನಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಸಾರಲು ಮುಖ್ಯ ಕಾರಣವಾಗಿವೆ. ಪರಂಪರೆಯನ್ನು ಇಡೀ ವಿಶ್ವಾದ್ಯಂತ ಪ್ರಸಾರ ಮಾಡಲು ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಕನ್ನಡಿಗರ ಸಹಕಾರ ಅತ್ಯಗತ್ಯವಾಗಿದೆ.
ಡಾ.ಪಿ.ಶಿವರಾಜು, ಆಯುಕ್ತ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಮೈಸೂರಿನಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳು ಹಾಗೂ ದಸರಾ ಹಬ್ಬದ ಸಡಗರವು ಕಳೆಗಟ್ಟಿದೆ. ದಂಪತಿಗಳು ಯಾವುದೇ ಮದುವೆ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಹೋಗುವ ಮುನ್ನ ಪರಸ್ಪರ ಚರ್ಚಿಸಿ, ಯಾವ ಬಟ್ಟೆ ಧರಿಸಬೇಕು ಎಂಬುದನ್ನು ನಿರ್ಧರಿಸುವ ಅಪರೂಪದ ಕ್ಷಣಗಳು ಇಲ್ಲಿ ಎದ್ದು ಕಾಣುತ್ತಿವೆ. ಮೈಸೂರು ಸಿಲ್ಕ್ ಸೀರೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳ ಮೇಲಿನ ಒಲವು ಈ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗು ತಂದುಕೊಟ್ಟಿದೆ.
ಅಕ್ಷತಾ ಪಾಂಡವಪುರ, ನಟಿ
2008ರಲ್ಲಿ ಯುನೆಸ್ಕೋ ಸಂಸ್ಥೆಯು ವಿಶ್ವದ ಅತ್ಯಂತ ಪ್ರಾಚೀನ ಪದ್ಧತಿಗಳ ಅಮೂರ್ತ ಪರಂಪರೆಯನ್ನು ಗುರುತಿಸಿದ್ದು, ಅದೇ ರೀತಿಯಲ್ಲಿ ಮೈಸೂರು ದಸರಾವನ್ನು ಕೂಡ ಒಂದು ವಿಶ್ವ ಪರಂಪರೆ ಎಂದು ಗುರುತಿಸಬೇಕು. ಅರಮನೆ ಹಾಗೂ ಕಟ್ಟಡಗಳಂತಹ ಮೂರ್ತ ಪರಂಪರೆಯ ಜತೆಗೆ, ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಗೊಂಬೆ ಇಡುವಿಕೆ, ಪರಂಪರಾಗತ ಉಡುಪುಗಳು ಮತ್ತು ಆನೆ ಅಂಬಾರಿ ಉತ್ಸವದಂತಹ ಅಮೂರ್ತ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ.